ವಿಜಯಪುರ ನಗರದ ಹೇಮರೆಡ್ಡಿ ಮಲ್ಲಮ್ಮ ದೇವಾಲಯದ ಸಭಾಂಗಣದಲ್ಲಿ ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು. ಸಮಿತಿ ಸಂಚಾಲಕ ಸುರೇಶ ದೇಸಾಯಿ, ಡಾ.ಪ್ರಾಣೇಶ ಜ ಹಿರೇಮಠ, ಉಪೇಂದ್ರಹಾಗೀರದಾರ, ಲಿಂಗರಾಜ ದೇಸಾಯಿ ಮತ್ತಿತರರಿದ್ದಾರೆ.
- ಜ. 24ರಂದು ಬೃಹತ್ ಹಿಂದೂ ಸಮ್ಮೇಳನ
- ನಗರದ ನಾಲ್ಕು ದಿಕ್ಕುಗಳಲ್ಲಿ ಕಾರ್ಯಕ್ರಮ
- ಭವ್ಯ ಶೋಭಾಯಾತ್ರೆಗೆ ಅದ್ಧೂರಿ ಚಾಲನೆ
ವಿಜಯಪುರ: ‘ಸಾಮರಸ್ಯ, ಪರಿಸರ ಸಂರಕ್ಷಣೆ, ಸ್ವದೇಶಿ ಚಿಂತನೆ’ ಎಂಬ ಉದಾತ್ತ ಧ್ಯೇಯಗಳನ್ನಿಟ್ಟುಕೊಂಡು ವಿಜಯಪುರ ನಗರದ ನಾಲ್ಕು ಕಡೆಗಳಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ನೇತೃತ್ವದಲ್ಲಿ ಭವ್ಯ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಂಚಾಲಕ ಸುರೇಶ ದೇಸಾಯಿ ತಿಳಿಸಿದರು.
ವಿಜಯಪುರದ ನಾಲ್ಕು ದಿಕ್ಕುಗಳಲ್ಲಿಯೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜ.24 ರಂದು ಮಧ್ಯಾಹ್ನ 3 ಕ್ಕೆ ಭಕ್ತಿಭಾವದ ಶೋಭಾಯಾತ್ರೆ ನಡೆಯಲಿದೆ. ಜಲನಗರ ಮೊದಲಾದ ಬಡಾವಣೆಗಳ ಭಾಗಗಳನ್ನು ಬಸವೇಶ್ವರ ಭಾಗ ಎಂದು ಗುರುತಿಸಿ ಅಲ್ಲಿ ಈ ಕಾರ್ಯಕ್ರಮಗಳ ಸರಣಿ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಅಂದು ಮುರಾಣಕೇರಿಯ ಈಶ್ವರಲಿಂಗ ದೇವಸ್ಥಾನದಿಂದ ಭಾರತ ಮಾತೆ ಹಾಗೂ ವಿವಿಧ ಮಹಾಪುರುಷರ ಭಾವಚಿತ್ರಗಳ ಮೆರವಣಿಗೆ ನಡೆಯಲಿದೆ. ಮಕ್ಕಳು ಮಹಾಪುರುಷರ ವೇಷಗಳನ್ನು ಧರಿಸಿ ಭವ್ಯ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿವೆ. ಮುರಾಣಕೇರಿ ಕೋರ್ಟ್ ವೃತ್ತ, ಜಲನಗರ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪ ತಲುಪಲಿದೆ. ಅಲ್ಲಿರುವ ವಿಶಾಲ ಮೈದಾನದಲ್ಲಿ ಸಂಜೆ 5.30 ಕ್ಕೆ ಹಲವಾರು ಮಠಾಧೀಶರ ಪಾವನ ಸಾನಿಧ್ಯದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.
ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಕನ್ನೂರ ಶಾಂತಿ ಕುಟೀರದ ಸಾಧಕರಾದ ಕೃಷ್ಣ ಸಂಪಗಾಂವಕರ, ಕೆಸರಟ್ಟಿಯ ಸೋಮಲಿಂಗ ಮಹಾಸ್ವಾಮೀಜಿ, ಯೋಗೇಶ್ವರಿ ಮಾತಾಜಿ ಸಾನ್ನಿಧ್ಯ ವಹಿಸಲಿದ್ದು, ಧರ್ಮ ಜಾಗರಣ ಪ್ರಾಂತದ ವಕ್ತಾರ ಹಣಮಂತ ಮಳಲಿ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದರು.
ಜಗತ್ತಿನಲ್ಲಿಯೇ ದೊಡ್ಡ ಸ್ವಯಂಸೇವಕ ಸಂಘಟನೆಯಾಗಿರುವ ಆರ್‌ಎಸ್‌ಎಸ್ ಆಶಯಗಳ ಬೆಳಕಿನಲ್ಲಿ ಈ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ಆರ್‌ಎಸ್‌ಎಸ್ ದೇಶಪ್ರೇಮಿ ಸಂಘಟನೆ. ಪ್ರಕೃತಿ ವಿಕೋಪ ಸಂಭವಿಸಿದಾಗ ಆ ಸ್ಥಳಕ್ಕೆ ಹೋಗಿ ಅಸಹಾಯಕರಿಗೆ ಸಹಾಯ ಮಾಡುವ ಸಂಘಟನೆ, ಹಿಂದೂ ಸಮಾಜದ ಜಾತಿ ಭೇದಗಳನ್ನು ಬದಿಗಿಟ್ಟು, ನಾವಲ್ಲ ಹಿಂದೂ ನಾವೆಲ್ಲ ಬಂಧು ಎಂಬ ಭಾವ ಬೆಳೆಸುವಲ್ಲಿಯೂ ಸಂಘ ಪರಿವಾರದ ಪಾತ್ರ ಅನನ್ಯ. ಈ ನಿಟ್ಟಿನಲ್ಲಿ ಪಂಚ ಪರಿವರ್ತನೆ ಅನ್ನುವ ಹೆಸರಿನಲ್ಲಿ ಸಮಾಜಕ್ಕೆ 5 ವಿಷಯಗಳನ್ನು ಜಾರಿಗೆ ತರಲು ಸಂಘ ಪರಿವಾರ ಕರೆ ಕೊಟ್ಟಿದ್ದು ಈ ಪಂಚ ಆಶಯಗಳಾದ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಪ್ರಭೋದನೆ, ಸ್ವದೇಶಿ, ನಾಗರಿಕ ಕರ್ತವ್ಯ ಎಂಬ ಆಶಯಗಳನ್ನಿರಿಸಿಕೊಂಡು ಈ ಕಾರ್ಯಕ್ರಮಗಳು ನೆರವೇರಲಿವೆ ಎಂದರು.
ಮುಖಂಡರಾದ ಡಾ.ಪ್ರಾಣೇಶ ಜಹಾಗೀರದಾರ, ಲಿಂಗರಾಜ ಹಿರೇಮಠ, ಉಪೇಂದ್ರ ದೇಸಾಯಿ, ಮಹಾದೇವ ದೊಡಮನಿ, ಎಲ್.ಬಿ. ಪಾಟೀಲ, ಚಂದ್ರು ಚೌಧರಿ, ಡಾ.ಬಾಬು ರಾಜೇಂದ್ರ ನಾಯಕ, ಶ್ರೀಧರ ನಾರಾಯಣಕರ, ಕರಬಸಪ್ಪ ಅರಕೇರಿ, ನಾರಾಯಣಸಿಂಗ್ ಹಜೇರಿ, ಭುವನೇಶ್ವರಿ ಕೋರವಾರ, ಸುನೀತಾ ಪಾಟೀಲ, ಪ್ರಕಾಶ ಅಕ್ಕಲಕೋಟ, ವಿಕಾಸ ಪದಕಿ, ವಿಜಯ ಜೋಶಿ ಮತ್ತಿತರರಿದ್ದರು.