ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು. ಸಿಇಒ ರಿಷಿ ಆನಂದ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಕೆ. ಹೊಸಮನಿ ಇತರರಿದ್ದಾರೆ. 
ವಿಜಯಪುರ

ದ್ವಿತೀಯ ಪಿಯುಸಿ ಫಲಿತಾಂಶ ಹಿನ್ನೆಲೆ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಡಾ.ಆನಂದ ಕೆ ಸಲಹೆ
  • ನಿರಂತರ ಅಧ್ಯಯನಶೀಲರಾಗಿ
  • ಸತತ ಪ್ರಯತ್ನವೇ ಸಾಧನೆಯ ಸೂತ್ರ
ವಿಜಯಪುರ: ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾದಾಗ ಮಾತ್ರ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉನ್ನತ ಜೀವನ ನಡೆಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಹಿನ್ನೆಲೆ ಬುಧವಾರ ನಡೆದ ಸರಳ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಆಯಾ ಶೈಕ್ಷಣಿಕ ವರ್ಷಾರಂಭದಿಂದಲೇ ಆಸಕ್ತಿಯಿಂದ ಓದಲಾರಂಭಿಸಿದರೆ ಪರೀಕ್ಷೆ ಯಶಸ್ಸು ನೀರು ಕುಡಿದಷ್ಟೇ ಸುಲಭವಾಗುತ್ತದೆ. ನಿರಂತರ ಅಧ್ಯಯನ, ಸತತ ಪ್ರಯತ್ನಗಳಿಂದಾಗಿ ಸಾಧನೆಯ ಹಾದಿ ಸುಲಭವಾಗಲಿದೆ. ಕಠಿಣ ಅಧ್ಯಯನ ಶೈಲಿ ರೂಢಿಸಿಕೊಳ್ಳಬೇಕು. ವಿಷಯ ಕರಗತ ಮಾಡಿಕೊಂಡು ಮನನ ಮಾಡಿಕೊಳ್ಳುವ ಮೂಲಕ ತಮ್ಮನ್ನು ತಾವು ಮೌಲ್ಯಮಾಪನಕ್ಕೊಳಡಿಸಿಕೊಂಡರೆ, ಮಾತ್ರ ಓದಿದ್ದೆಲ್ಲವೂ ಸ್ಮತಿಪಟಲದಲ್ಲಿ ಉಳಿಯುತ್ತದೆ ಎಂದರು.
ವಿದ್ಯಾಭ್ಯಾಸದೊಟ್ಟಿಗೆ ದೈಹಿಕ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಆಸಕ್ತಿದಾಯಕ ಕ್ರೀಡೆಗಳಲ್ಲೂ ತೊಡಗಿಸಿಕೊಂಡರೆ ಅಧ್ಯಯನ ಇನ್ನಷ್ಟು ಸುಲಭವಾಗುತ್ತದೆ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಕೆ. ಹೊಸಮನಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ. ಪಾಟೀಲ ಅವರು, ಈ ಸಾಧಕ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯ ಒದಗಿಸಿ, ಈ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಸನ್ಮಾನ-ಗೌರವ

ಸಾಧಕ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸೇಂಟ್ ಜೋಸೆಫ್ ಪಿಯು ಕಾಲೇಜ್‌ನ ಪ್ರಜ್ಞಾ ಗಲಗಲಿ, ದ್ವಿತೀಯ ಸ್ಥಾನ ಪಡೆದ ವಿ.ಬಿ. ದರಬಾರ ಪಿಯು ಕಾಲೇಜಿನ ಸರ್ವಜ್ಞ ಗುರ್ಜಾಲ ಹಾಗೂ ತೃತೀಯ ಸ್ಥಾನ ಪಡೆದ ಬಿ.ಎಂ. ಪಾಟೀಲ ಕಾಲೇಜಿನ ಕನಿಶಾ ಕಮಲೇಶ ಪೋರವಾಲ, ವಿಜ್ಞಾನ ವಿಭಾಗದಲ್ಲಿ ಕ್ರಮವಾಗಿ ಪ್ರಥಮ ಸ್ಥಾನ ಪಡೆದ ನಗರದ ರೇಡಿಯಂಟ್ ಪಿಯು ಕಾಲೇಜಿನ ನುಝಾತ ಫಾತಿಮಾ ತಾಳಿಕೋಟಿ, ದ್ವಿತೀಯ ಸ್ಥಾನ ಪಡೆದ ಆಕ್ಸಫರ್ಡ್ ಪಿಯು ಕಾಲೇಜಿನ ಲಕ್ಷ್ಮಿ ಪರಸಪ್ಪ ಅಡಿಗಿಮನಿ ಹಾಗೂ ತೃತೀಯ ಸ್ಥಾನ ಪಡೆದ ಶಾಂತಿನಿಕೇತನ ಪಿಯು ಕಾಲೇಜಿನ ವಿದ್ಯಾಶ್ರೀ ಪ್ರಕಾಶ ಕಾಮನಕೇರಿ, ಆಕ್ಸಫರ್ಡ್ ಪಿಯು ಕಾಲೇಜಿನ ಭಾಗ್ಯ ಪುಂಡಲಿಕಪ್ಪ ಹೊಸಮನಿ, ಇದೇ ಕಾಲೇಜಿನ ನಂದಿತಾ, ಶಾಂತಿನಿಕೇತನ ಪಿಯು ಕಾಲೇಜಿನ ಪೂಜಾ ಈಟಿ, ತುಂಗಳ ಸೈನ್ಸ್ ಪಿಯು ಕಾಲೇಜಿನ ಪೃಥ್ವಿ ಪತ್ತಾರ, ಸೇಂಟ್ ಜೋಸೆಫ್ ಪಿಯು ಕಾಲೇಜಿನ ಸಿದ್ದಿ .ಜಿ.ತೋನ್ಸಿವಾಲ್ ಹಾಗೂ ತುಂಗಳ ಸೈನ್ಸ್ ಪಿಯು ಕಾಲೇಜಿನ ಸುಶ್ಮಿತಾ ಈರಪ್ಪ ಕೊಪ್ಪಳ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಮತ್ತಿತರರಿದ್ದರು.