ರಿಷಿ ಆನಂದ, ಸಿಇಒ ಜಿಲ್ಲಾ ಪಂಚಾಯಿತಿ ವಿಜಯಪುರ 
ವಿಜಯಪುರ

ವಿಬಿಜಿ ರಾಮ್ ಜಿ ಅನುಷ್ಟಾನಕ್ಕೆ ಹೆಚ್ಚಿನ ಆದ್ಯತೆ, ‘ಜಾಬ್ ಕಾರ್ಡ್ ಮೇಳ’ ವಿಶೇಷ ಅಭಿಯಾನಕ್ಕೆ ಚುರುಕು

ಪ್ರಮುಖ ಮುಖ್ಯಾಂಶಗಳು

  • ಗ್ರಾಮೀಣರಿಗೆ ಉದ್ಯೋಗದ ಭರವಸೆ
  • ಜಿಲ್ಲಾದ್ಯಂತ ವಿಶೇಷ ಅಭಿಯಾನಕ್ಕೆ ಚಾಲನೆ
  • ಒಂದು ತಿಂಗಳ ಕಾಲ ನಡೆಯಲಿರುವ ಮೇಳ

ವಿಜಯಪುರ: ಗ್ರಾಮೀಣ ಕುಟುಂಬಗಳಿಗೆ ಸ್ಥಳೀಯವಾಗಿಯೇ ಉದ್ಯೋಗ ಹಾಗೂ ಜೀವನೋಪಾಯದ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಆಂಡ್ ಆಜೀವಿಕ ಮಿಷನ್ (ವಿಬಿಜಿ ರಾಮ್ ಜಿ) ಅಡಿಯಲ್ಲಿ ವಿಜಯಪುರ ಜಿಲ್ಲಾದ್ಯಂತ ‘ಜಾಬ್ ಕಾರ್ಡ್ ಮೇಳ’ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ರಿಷಿ ಆನಂದ ತಿಳಿಸಿದ್ದಾರೆ.

ಆಗಸ್ಟ್ 15ರಿಂದಲೇ ಮೇಳ ಆರಂಭಗೊಂಡಿದ್ದು ಸೆಪ್ಟೆಂಬರ್ 15ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ನೋಂದಾಯಿತ ಸುಮಾರು 2.76 ಲಕ್ಷ ಉದ್ಯೋಗ ಚೀಟಿಗಳ ಪೈಕಿ 1.18 ಲಕ್ಷ ಕುಟುಂಬಗಳು ಮಾತ್ರ ಸಕ್ರಿಯವಾಗಿ ಯೋಜನೆಯಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ, ನಿಷ್ಕ್ರೀಯ ಕುಟುಂಬಗಳನ್ನು ಮತ್ತೆ ಯೋಜನೆಯ ವ್ಯಾಪ್ತಿಗೆ ತರುವುದು, ಹೊಸ ಅರ್ಹ ಕುಟುಂಬಗಳನ್ನು ನೋಂದಾಯಿಸುವುದು ಹಾಗೂ ಉದ್ಯೋಗದ ಬೇಡಿಕೆಯನ್ನು ಹೆಚ್ಚಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದಿದ್ದಾರೆ.
ಅಭಿಯಾನದಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆ-ಮನೆಗೆ ಭೇಟಿ ನೀಡಿ ಉದ್ಯೋಗದ ಬೇಡಿಕೆ ಸ್ವೀಕರಿಸುವುದು, ಹೊಸ ಜಾಬ್ ಕಾರ್ಡ್ ವಿತರಣೆ, ಅವಧಿ ಮುಗಿದ ಜಾಬ್ ಕಾರ್ಡ್ ನವೀಕರಣ ಹಾಗೂ ಈ-ಕೆವೈಸಿ ಪೂರ್ಣಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಪ್ರಧಾನ ಕುಟುಂಬಗಳು ಹಾಗೂ ಅಂಗವಿಕಲರು ಸೇರಿ ದುರ್ಬಲ ವರ್ಗದ ಕುಟುಂಬಗಳ ಭಾಗವಹಿಸುವಿಕೆಗೆ ಆದ್ಯತೆ ನೀಡಲಾಗುತ್ತಿದೆ.
ಉದ್ಯೋಗಕ್ಕಾಗಿ ನಮೂನೆ-06ರಲ್ಲಿ ಬೇಡಿಕೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿದ ಬಳಿಕ ನಮೂನೆ-08ರಲ್ಲಿ ಸ್ವೀಕೃತಿ ನೀಡಲಾಗುತ್ತದೆ. ಬೇಡಿಕೆಗೆ ಅನುಗುಣವಾಗಿ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಿ, ಎನ್‌ಎಂಎಂಸ್ ಮೂಲಕ ಹಾಜರಾತಿ ದಾಖಲಿಸುವುದು, ಕಾಲಮಿತಿಯಲ್ಲಿ ಅಳತೆ ನಡೆಸಿ ಕೂಲಿ ಪಾವತಿಗೆ ಕ್ರಮ ಕೈಗೊಳ್ಳಲಾಗುಯತ್ತಿದೆ. ಜಲ ಸಂರಕ್ಷಣೆ, ಮಳೆನೀರು ಸಂಗ್ರಹಣೆ, ಅಂತರ್ಜಲ ಮರುಪೂರಣ, ಕೃಷಿ ಹೊಂಡ ಹಾಗೂ ಜಾನುವಾರು ಶೆಡ್ ಸೇರಿ ಯೋಜನೆಯಡಿ ಅನುಮತಿಸಲಾದ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಿಇಒ ರಿಷಿ ಆನಂದ ತಿಳಿಸಿದ್ದಾರೆ.
ಇದು ಕೇವಲ ಜಾಬ್ ಕಾರ್ಡ್ ವಿತರಿಸುವ ಅಭಿಯಾನವಾಗಿರದೆ, ಉದ್ಯೋಗದ ಅಗತ್ಯವಿರುವ ಪ್ರತಿಯೊಂದು ಅರ್ಹ ಕುಟುಂಬವನ್ನು ಗುರುತಿಸಿ, ಬೇಡಿಕೆಗೆ ಅನುಗುಣವಾಗಿ ಸ್ವಗ್ರಾಮದಲ್ಲಿಯೇ ಉದ್ಯೋಗ ಒದಗಿಸುವ ಸಮಗ್ರ ಅಭಿಯಾನವಾಗಿದೆ. ಗ್ರಾಮೀಣ ಭಾಗದ 18 ವರ್ಷ ಮೇಲ್ಪಟ್ಟ ಅರ್ಹ ವ್ಯಕ್ತಿಗಳಿಗೆ ಯೋಜನೆಯಡಿ ಉದ್ಯೋಗ ಪಡೆಯುವ ಅವಕಾಶವಿದ್ದು, ಉದ್ಯೋಗ ಚೀಟಿ ಇಲ್ಲದವರು ತಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ತೆರಳಿ ನಮೂನೆ-1ರಲ್ಲಿ ಅರ್ಜಿ ಸಲ್ಲಿಸಬಹುದು. ಉದ್ಯೋಗ ಚೀಟಿ ಹೊಂದಿರುವವರು ನಮೂನೆ-6ರಲ್ಲಿ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಮಾಹಿತಿಗಾಗಿ ಸ್ಥಳೀಯ ಗ್ರಾಮ ಪಂಚಾಯಿತಿಗೂ ಸಂಪರ್ಕಿಸಬಹುದು ಎಂದು ಸಿಇಒ ರಿಷಿ ಆನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.