ವಿಜಯಪುರದ ಜಿ.ಪಂ. ಸಭಾಂಗಣದಲ್ಲಿ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಮತ್ತು ಆಂತರಿಕ ದೂರು ನಿವಾರಣಾ ಸಮಿತಿ ಅಧ್ಯಕ್ಷರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಡಾ. ನಾಗಲಕ್ಷ್ಮೀ ಚೌಧರಿ ಮಾತನಾಡಿದರು. ಅರವಿಂದ ಹಾಗರಗಿ, ರೂಪಾ ಆರ್. ಇದ್ದಾರೆ. 
ವಿಜಯಪುರ

ಲೈಂಗಿಕ ಕಿರುಕುಳ ಕಾಯ್ದೆಯ ಸಮಗ್ರ ಅರಿವು ಹೊಂದಲಿ

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಸಲಹೆ
  • ತರಬೇತಿ ಕಾರ್ಯಾಗಾರ

ವಿಜಯಪುರ:

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ ಮತ್ತು ನಿವಾರಿಸುವಿಕೆ) ಕಾಯ್ದೆ-2013ರ ಕುರಿತು ಪ್ರತಿಯೊಬ್ಬರೂ ಸಮಗ್ರ ಅರಿವು ಹೊಂದಿರಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.

ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ರಾಜ್ಯ ಮಹಿಳಾ ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಗರದ ಜಿ.ಪಂ. ಸಭಾಂಗಣದಲ್ಲಿ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಮತ್ತು ಆಂತರಿಕ ದೂರು ನಿವಾರಣಾ ಸಮಿತಿ ಅಧ್ಯಕ್ಷರಿಗೆ ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮೌನವಾಗಿರಬಾರದು. ಸಮಸ್ಯೆ ಎದುರಾದ ಸಂದರ್ಭದಲ್ಲಿ ಕಾಯ್ದೆಯಡಿ ರಚಿಸಲಾಗಿರುವ ಆಂತರಿಕ ದೂರು ಸಮಿತಿಗೆ ದೂರು ಸಲ್ಲಿಸಬೇಕು. ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಗೌರವ ಕಾಪಾಡುವ ದೃಷ್ಟಿಯಿಂದ ಸ್ಥಳೀಯ ಹಾಗೂ ಆಂತರಿಕ ದೂರು ನಿವಾರಣಾ ಸಮಿತಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ಪಾಶ್ (ಪಿಒಎಸ್‌ಎಚ್) ಕಾಯ್ದೆಯ ಉದ್ದೇಶ, ನಿಯಮಗಳು ಹಾಗೂ ಆಂತರಿಕ ದೂರು ಸಮಿತಿಯ ಪ್ರಮುಖ ಕರ್ತವ್ಯಗಳ ಕುರಿತು ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಸಮಗ್ರ ಅರಿವು ಹೊಂದಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಕಾಯ್ದೆಯ ಅರಿವು ಅತ್ಯಂತ ಮಹತ್ವದ್ದಾಗಿದ್ದು, ಮಹಿಳೆಯರು ಯಾವುದೇ ರೀತಿಯ ಅನ್ಯಾಯಕ್ಕೆ ಒಳಗಾದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಲಭ್ಯವಿರುವ ಉಚಿತ ಕಾನೂನು ಸೇವೆ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ತರಬೇತಿದಾರ ಪ್ರಕಾಶ ಅವರು, ಪಿಪಿಟಿ ಮೂಲಕ ಪಾಶ್ ಕಾಯ್ದೆಯ ವಿವಿಧ ಅಂಶಗಳು, ಕಾಯ್ದೆಯಡಿ ರಚಿಸಲಾಗಿರುವ ಆಂತರಿಕ ದೂರು ಸಮಿತಿಯ ಜವಾಬ್ದಾರಿಗಳು, ದೂರು ಸ್ವೀಕರಿಸುವ ಹಾಗೂ ಪರಿಹರಿಸುವ ವಿಧಾನ ಸೇರಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ, ಜಿ.ಪಂ. ಉಪಕಾರ್ಯದರ್ಶಿ ಪ್ರಕಾಶ ವಡ್ಡರ, ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ ಆರ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸಂತೋಷಕುಮಾರ ಎಚ್. ಮತ್ತಿತರರಿದ್ದರು.
ತರಬೇತಿ ಕಾರ್ಯಾಗಾರದ ನಂತರ ನಾಗಲಕ್ಷ್ಮೀ ಚೌಧರಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದ ಜಿಲ್ಲಾ ಶಿಶು ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಮಕ್ಕಳ ಪಾಲನೆ, ಆರೈಕೆ ಹಾಗೂ ಅವರಿಗೆ ಕಲ್ಪಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.