ಬಾಬಾನಗರದ ಹಣಮಂತ ಶೇಖಪ್ಪ ಪೂಜಾರಿ ಎಂಬ ರೈತನ ಜಮೀನಿನಲ್ಲಿ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಹಾನಿಗೀಡಾಗಿರುವ ದ್ರಾಕ್ಷಿ ಶೆಡ್. ಬಿಜೆಪಿಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಾಬು ಮಾಶ್ಯಾಳ, ರೈತ ರಮೇಶ ಶೇಖಪ್ಪ ಪೂಜಾರಿ ಇದ್ದಾರೆ. 
ವಿಜಯಪುರ

ಆಲಿಕಲ್ಲು ಮಳೆಯಿಂದ ದ್ರಾಕ್ಷಿ ಬೆಳೆ ನಾಶ, ಸರ್ಕಾರ ತಕ್ಷಣಕ್ಕೆ ರೈತರ ನೆರವಿಗೆ ಧಾವಿಸಲಿ ಎಂದ ಕೇಶವ ಪ್ರಸಾದ್

ಪ್ರಮುಖ ಮುಖ್ಯಾಂಶಗಳು

  • ಸಂಕಷ್ಟದಲ್ಲಿ ದ್ರಾಕ್ಷಿ ಬೆಳೆಗಾರರು
  • ತಿಕೋಟಾ-ಬಾಬಾನಗರದಲ್ಲಿ ಹಾನಿ
  • ಅಪಾರ ಹಾನಿಯಿಂದ ಬಸವಳಿದ ರೈತ
ವಿಜಯಪುರ: ಆಲಿಕಲ್ಲು ಮಳೆಯಿಂದಾಗಿ ತೀವ್ರ ಹಾನಿ ಅನುಭವಿಸುತ್ತಿರುವ ದ್ರಾಕ್ಷಿ ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ ಆಗ್ರಹಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಸುರಿದ ಆಲಿಕಲ್ಲು ಮಳೆಯಿಂದ ವಿಜಯಪುರ ತಾಲೂಕು, ಬಬಲೇಶ್ವರ ತಾಲೂಕು, ನಾಗಠಾಣ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ದ್ರಾಕ್ಷಿ ಬೆಳೆಗಳಿಗೆ ಭಾರಿ ಹಾನಿಯಾಗಿದೆ. ಇದರಿಂದಾಗಿ ದ್ರಾಕ್ಷಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅಪಾರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದವರು ತಿಳಿಸಿದ್ದಾರೆ.
ಕೇಶವ ಪ್ರಸಾದ್, ವಿಧಾನ ಪರಿಷತ್ ಸದಸ್ಯ
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಜಿಲ್ಲಾಡಳಿತ ಕೂಡಲೇ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಬೆಳೆ ನಷ್ಟದ ಸಮಗ್ರ ಸಮೀಕ್ಷೆ ನಡೆಸಿ ರೈತರ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಕೂಲವಲ್ಲದ ವಾತಾವರಣದ ಮಧ್ಯದಲ್ಲಿ ಕೂಡ ಲಕ್ಷಾನುಗಟ್ಟಲೆ ಖರ್ಚು ಮಾಡಿ ಬೆಳೆದಂತ ಬೆಳೆ ಹಾಳಾಗಿದೆ. ಕಳೆದ 15 ದಿನಗಳಿಂದ ಜಿಲ್ಲೆಯ ಬೇರೆ ಬೇರೆ ಪ್ರದೇಶದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಕಟಾವಿಗೆ ಬಂದ ಹಾಗೂ ಕಟಾವಾದ ದ್ರಾಕ್ಷಿ ಬೆಳೆಯು ಮಳೆಗೆ ಮಣ್ಣು ಪಾಲಾಗುತ್ತಿರುವುದು  ರೈತರಲ್ಲಿ ಆತಂಕ ಮೂಡಿಸಿದೆ. ಹಾನಿಗೊಳಗಾದ ದ್ರಾಕ್ಷಿ ಬೆಳೆಗಾರರಿಗೆ ಗರಿಷ್ಠ ಮೊತ್ತದ ಪರಿಹಾರ  ಘೋಷಿಸಬೇಕೆಂದು ಅವರು ಪ್ರಕಟಣೆ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸಂವೇದನೆ ಕಳೆದುಕೊಂಡ ಸರ್ಕಾರ

ದ್ರಾಕ್ಷಿ ನಾಡು ಎಂಬ ಖ್ಯಾತಿಗೆ ಒಳಗಾಗಿರುವ ವಿಜಯಪುರ ಜಿಲ್ಲೆಯಲ್ಲಿ ಪ್ರತಿ ವರ್ಷ ಒಂದಿಲ್ಲ ಒಂದು ಕಾರಣಕ್ಕೆ ಬೆಳೆ ಹಾನಿ ಅನುಭವಿಸಲಾಗುತ್ತಿದೆ. ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಸಕಾರಾತ್ಮಕವಾಗಿ ಸ್ಪಂದಿಸುತಿಲ್ಲ. ರಾಜ್ಯ ಸರ್ಕಾರ ಸಂವೇದನೆ ಕಳೆದುಕೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ತಿಳಿಸಿದ್ದಾರೆ.

ಒಂದೆಡೆ ನೈಸರ್ಗಿಕವಾಗಿ ಹಾನಿ ಅನುಭವಿಸಿದರೆ ಇನ್ನೊಂದೆಡೆ ವಿಮೆ ಪಾವತಿಯಲ್ಲಿ ತೊಂದರೆ, ಮಾರುಕಟ್ಟೆ ದರದಲ್ಲಾಗುತ್ತಿರುವ ಏರಿಳಿತದಿಂದಾಗಿ ದ್ರಾಕ್ಷಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಬಾಕಿ ಇರುವ ವಿಮೆ ಹಣ ಪಾವತಿಗಾಗಿ ಈಗಾಗಲೇ ಸರ್ಕಾರಕ್ಕೆ ಒತ್ತಾಯಿಸಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ರೈತರಿಗೆ ಪರಿಹಾರ ಕಲ್ಪಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.