ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಮನಗೂಳಿಯ ಶ್ರೀ ಎಸ್.ಬಿ. ಪಾಟೀಲ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನವನ್ನು ಅದ್ದೂರಿಯಾಗಿ ಉದ್ಘಾಟಿಸಲಾಯಿತು. ಪೂಜ್ಯ ಸಂಗನಬಸವ ಶಿವಾಚಾರ್ಯರು, ಶಿಕ್ಷಕ ಎಸ್.ಎಸ್. ಬಿರಾದಾರ, ಬಿ.ಬಿ. ಲಗಟಿಗೆರೆ ಇತರರಿದ್ದಾರೆ. 
ವಿಜಯಪುರ

ಗುರುವಂದನೆ-ಸ್ನೇಹ ಸಮ್ಮಿಲನ ಕಾರ್ಯಕ್ರಮ, ತಾಯಿ-ಗುರುವಿನ ಋಣ ತೀರಿಸಲಾಗದು ಎಂದ ಸಂಗನಬಸವ ಶಿವಾಚಾರ್ಯರು

ಪ್ರಮುಖ ಮುಖ್ಯಾಂಶಗಳು

  • 2003-04ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು
  • 2005-06ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳು
  • ಅದ್ದೂರಿಯಾಗಿ ಗುರುವಂದನೆ ಆಯೋಜನೆ
  • ಹಳೆಯ ವಿದ್ಯಾರ್ಥಿಗಳ ಸಮಾಗಮ
ವಿಜಯಪುರ: ಜಗತ್ತಿನಲ್ಲಿ ತಾಯಿ ಹಾಗೂ ಗುರುವಿನ ಋಣ ಯಾವ ಕಾಲಕ್ಕೂ ತೀರಿಸಲಾಗದಂಥದ್ದು ಎಂದು ಮನಗೂಳಿ ಹಿರೇಮಠದ ಶ್ರೀ.ಷ.ಬ್ರ. ಅಭಿನವ ಸಂಗನಬಸವ ಶಿವಾಚಾರ್ಯರು ಹೇಳಿದರು.
ನಗರದ ಖಾಸಗಿ ಹೋಟೇಲ್‌ನಲ್ಲಿ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯ ಶ್ರೀ ಎಸ್.ಬಿ. ಪಾಟೀಲ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 2003-04ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ 2005-06ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳಿಂದ ಈಚೆಗೆ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದ ದಿವ್ಯ ಸಾನ್ನಿಧ್ಯ ಅವರು ಆಶೀರ್ವಚನ ನೀಡಿದರು.
ದೇಶದ ಭವಿಷ್ಯದ ಪೀಳಿಗೆಯನ್ನು ತಮ್ಮ ಜ್ಞಾನದಿಂದ ಶ್ರೀಮಂತಗೊಳಿಸುವ ಮುಖಾಂತರ ದೇಶದ ಅಡಿಪಾಯ ನಿರ್ಮಿಸುವಲ್ಲಿ ಶಿಕ್ಷಕ ಪಾತ್ರ ಪ್ರಮುಖ. ನಾನು ಸಹ ಅಂಥ ಶಿಕ್ಷಕರಿಂದಲೇ ರೂಪುಗೊಂಡು ಇಂದು ಸ್ವಾಮೀಜಿಯಾಗಿರುವುದಾಗಿ ತಿಳಿಸಿದರು.
ಉದ್ಘಾಟನೆ ನೆರವೇರಿಸಿದ ಶಿಕ್ಷಕ ಎಸ್.ಎಸ್. ಬಿರಾದಾರ ಮಾತನಾಡಿ, ಈಗಿನ ವಿದ್ಯಾರ್ಥಿಗಳು ಸಮಯ ಹಾಳು ಮಾಡುತ್ತಿದ್ದಾರೆ. ಕೊಟ್ಟ ಸಮಯವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು. ಅಂದಾಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಬಿ.ಬಿ. ಲಗಟಿಗೆರೆ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಗುರುವಂದನವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅವರು ವಿದ್ಯಾರ್ಥಿ ಜೀವನವನ್ನು ಮುಗಿಸಿಕೊಂಡು ಒಳ್ಳೆಯ ಕೆಲಸ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರೈತರಾಗಿದ್ದಾರೆ, ಪೊಲೀಸರಾಗಿದ್ದಾರೆ, ಇಂಜಿನಿಯರ್‌ಗಳಾಗಿದ್ದಾರೆ, ವಕೀರಾಗಿದ್ದಾರೆ, ಶಿಕ್ಷಕರಾಗಿದ್ದಾರೆ. ಹೀಗೆ ಅವರ ಮಕ್ಕಳಿಗೂ ಉನ್ನತ ಸ್ಥಾನ ಸಿಗಲಿ, ಮಕ್ಕಳಿಗೆ ಸಂಸ್ಕಾರ ಕೊಡುವಂತಾಗಲಿ ಎಂದರು.
ಶಿಕ್ಷಕರಾದ ಎಂ.ಎಸ್. ಮಾದರ, ಸಿ.ಬಿ. ಸಜ್ಜನ, ಬಿ.ಎಚ್. ಹಿರೇಮಠ, ಎಂ.ಬಿ. ಗುಮ್ಮಡಿ, ಎಸ್.ಬಿ. ಬಿರಾದಾರ, ಪಿ.ಟಿ. ರಾಠೋಡ. ಆರ್.ಕೆ. ಹನಗಂಡಿ, ಎಂ.ಎಸ್. ನಾಯಕ, ಬಿ.ಎಂ. ಪಾಟೀಲ, ಡಿ.ಎಸ್. ಬಂಡಗಾರ. ಎಸ್.ಬಿ. ಬಿಳೂರ, ಐ.ಡಿ. ಚೆನ್ನಾಳ, ಸಿಪಾಯಿಗಳಾದ ಕೆ.ಟಿ. ಕರಾಬಿ, ಸಂಗಪ್ಪ ಹಡಪದ, ಎಂ.ಎಲ್. ಮನಗೂಳಿ ಇತರರಿದ್ದರು.