ಮುದ್ದೇಬಿಹಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಯಿತು. ಶಿವಶಂಕರ ಹಿರೇಗೌಡ, ಗುರು ತಾರನಾಳ, ವೈ.ಎಚ್. ವಿಜಯಕರ ಮತ್ತಿತರರಿದ್ದರು. 
ವಿಜಯಪುರ

ನಾಡಗೌಡರಿಗೆ ಮಂತ್ರಿ ಸ್ಥಾನ ನೀಡಿ

ಪ್ರಮುಖ ಮುಖ್ಯಾಂಶಗಳು

  • ಸುದ್ದಿಗೋಷ್ಠಿ
  • ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಅಸಮಾಧಾನ
ಮುದ್ದೇಬಿಹಾಳ: ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಸಿ.ಎಸ್. ನಾಡಗೌಡರ ಶ್ರಮ ಅಪಾರವಾಗಿದ್ದು, ಎರಡನೇ ಹಂತದಲ್ಲೂ ಸಚಿವ ಸ್ಥಾನ ದೊರಕದೆ ಇದ್ದರೆ ಹೋರಾಟ ಅನಿವಾರ್ಯ ಎಂದು ಪಂಚ ಗ್ಯಾರಂಟಿ ಯೋಜನೆ ಸಮಿತಿ ತಾಲೂಕಾಧ್ಯಕ್ಷ ಶಿವಶಂಕರ ಹಿರೇಗೌಡ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಕಾಂಗ್ರೆಸ್ ಗಟ್ಟಿ ನೆಲೆ. ದೇಶಮುಖ್ ಸೇರಿ ಇತರರು ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅದರಲ್ಲೂ ಸಿ.ಎಸ್. ನಾಡಗೌಡರು ಸ್ವತಃ ದೊಡ್ಡಪ್ಪ ಅವರನ್ನೇ ವಿರೋಧ ಮಾಡಿ ಕಾಂಗ್ರೆಸ್ ಪಕ್ಷ ಸೇರಿದವರು. ಅವರು ಬಂದ ನಂತರ ದೇವರಹಿಪ್ಪರಿಗಿ, ಮುದ್ದೇಬಿಹಾಳದಲ್ಲಿ ಕಾಂಗ್ರೆಸ್‌ಗೆ ಬಲ ಹೆಚ್ಚಾಗಿದೆ ಎಂದರು.
ಕಳೆದ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಿ.ಎಸ್. ನಾಡಗೌಡ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆ ಭರವಸೆ ಈಡೇರಲಿಲ್ಲ. ಈಗ ಡಿ.ಕೆ. ಶಿವಕುಮಾರ ಅವರ ಸಂಪುಟದಲ್ಲಿ ಪಕ್ಷಕ್ಕೆ ನಿಷ್ಠೆ, ಪ್ರಾಮಾಣಿಕವಾಗಿ ದುಡಿಯುತ್ತಿರುವ ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕು. ಸಚಿವ ಎಂ.ಬಿ. ಪಾಟೀಲ ಅವರು ನಾಡಗೌಡರಿಗೆ ಸಚಿವ ಸ್ಥಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುನಾಥ ತಾರನಾಳ ಮಾತನಾಡಿ, ಸಿ.ಎಸ್. ನಾಡಗೌಡ ಅವರ ಪಕ್ಷದಲ್ಲಿ ಹಿರಿಯರಾಗಿದ್ದಾರೆ. ಅವರಿಗೆ ಸಚಿವ ಸ್ಥಾನದಿಂದ ವಂಚಕರನ್ನಾಗಿ ಮಾಡಲಾಗುತ್ತಿದೆ. ಆದರೆ, ಸಿ.ಎಸ್. ನಾಡಗೌಡ ಅವರು ಸಿಎಂ ಡಿ.ಕೆ. ಶಿವಕುಮಾರ ಅವರ ಸಮಕಾಲೀನ ರಾಜಕಾರಣಿಯಾಗಿದ್ದಾರೆ. ಸಿಎಂ ಶಿವಕುಮಾರ ಅವರು ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.
ಸಾಮೂಹಿಕ ರಾಜೀನಾಮೆ ಎಚ್ಚರಿಕೆ: ಶಾಸಕ ಸಿ.ಎಸ್. ನಾಡಗೌಡ ಅವರಿಗೆ ಎರಡನೇ ಹಂತದಲ್ಲಾದರೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಒಂದು ವೇಳೆ ಅವರಿಗೆ ಸಚಿವ ಸ್ಥಾನ ದೊರಕದೆ ಇದ್ದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದೇವೆ ಎಂದರು.
ವೈ.ಎಚ್. ವಿಜಯಕರ, ಸಿ.ಜಿ. ವಿಜಯಕರ, ಸದ್ದಾಂ ಕುಂಟೋಜಿ, ಮಹಮ್ಮದ ರಫೀಕ ಶಿರೋಳ, ಲಕ್ಷ್ಮಣ ಲಮಾಣಿ, ರಾಜೇಂದ್ರಗೌಡ ರಾಯಗೊಂಡ, ರಾಯನಗೌಡ ತಾತರಡ್ಡಿ, ಮೈಬೂಬ ಗೊಳಸಂಗಿ, ಅಪ್ಪು ದೇಗಿನಾಳ, ಶರಣಬಸ್ಸು ಚಲವಾದಿ, ಅಕ್ಷತಾ ಚಲವಾದಿ, ತಿಪ್ಪಣ್ಣ ದೊಡಮನಿ, ಸರಸ್ವತಿ ಇತರರಿದ್ದರು.