ವಿಜಯಪುರದ ಖಾಸಗಿ ಹೋಟೆಲ್‌ನಲಗಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿಟ್ಟಿನಹಳ್ಳಿ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಸೋಮನಿಂಗ ಗೆಣ್ಣೂರ ಅವರಿಗೆ ಆಹ್ವಾನ ನೀಡಿ ಸನ್ಮಾನಿಸಲಾಯಿತು. ಹಾಸಿಂಪೀರ ವಾಲಿಕಾರ, ಡಾ. ಸಂಗಮೇಶ ಮೇತ್ರಿ, ಅಭಿಷೇಕ ಚಕ್ರವರ್ತಿ ಮತ್ತಿತರರಿದ್ದಾರೆ.
ಸಾಹಿತಿ, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾದ ಸೋಮನಿಂಗ ಗೆಣ್ಣೂರ ಅವರು ಈ ಬಾರಿ ಹಿಟ್ಟಿನಹಳ್ಳಿಯಲ್ಲಿ ನಡೆಯಲಿರುವ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಇಡೀ ಜಿಲ್ಲೆಯ ಜನರಲ್ಲಿ ಸಂತಸ ಉಂಟು ಮಾಡಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರಿಗೆ ಅಧಿಕೃತ ಆಹ್ವಾನ ನೀಡಿ ಅವರು ಮಾತನಾಡಿದರು.
ಹಿಟ್ಟಿನಹಳ್ಳಿ ಗ್ರಾಮದ ಜನ ಸಮ್ಮೇಳನದ ಯಶಸ್ಸಿಗೆ ಹಗಲು ರಾತ್ರಿ ಅಹರ್ನಿಶಿ ದುಡಿಯುತ್ತಿದ್ದಾರೆ. ತಾಲೂಕು ದಂಡಾಽಕಾರಿಗಳ ನೇತೃತ್ವದಲ್ಲಿ ಅರ್ಥಪೂರ್ಣ ಸಮ್ಮೇಳನ ಆಚರಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಸಕ್ರಿಯವಾಗಿದೆ. ಜಿಲ್ಲೆಯ ಜನರು ತಾಲೂಕು ಸಮ್ಮೇಳನದಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಸಲಹೆ ನೀಡಿದರು.
ಹಿರಿಯ ಸಾಹಿತಿ ಡಾ. ಸಂಗಮೇಶ ಮೇತ್ರಿ ಮಾತನಾಡಿ, ಸೋಮನಿಂಗ ಗೆಣ್ಣೂರ ಅವರು ಅಧಿಕಾರಿಗಳಾಗಿದ್ದರೂ ಸಾಹಿತ್ಯದ ಕುರಿತು ಒಲವು ಹೊಂದಿದ್ದಾರೆ. ಪ್ರಸ್ತುತ ತೋಟಗಾರಿಕಾ ವಿವಿಯ ಕುಲಸಚಿವರೂ ಆದ ಸೊಮಲಿಂಗ ಗೆಣ್ಣೂರ ಅವರು ಸರ್ವಾನುಮತದಿಂದ ಆಯ್ಕೆಗೊಂಡಿರುವುದು ಸಂತಸ ತಂದಿದೆ ಎಂದರು.
ಸಮ್ಮೇಳನದ ಅಧಿಕೃತ ಆಹ್ವಾನ ಸ್ವೀಕರಿಸಿ ಮಾತನಾಡಿದ ಸಮ್ಮೇಳನದ ಸರ್ವಾಧ್ಯಕ್ಷ ಸೋಮಲಿಂಗ ಗೆಣ್ಣೂರ, ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ, ವರ್ಗ, ವರ್ಣರಹಿತ ಸಮಾಜ ನಿರ್ಮಿಸುವಲ್ಲಿ ಶ್ರಮಿಸಿದ ಸಾಹಿತಿಗಳ ಸೇವೆ ಜಿಲ್ಲೆಗೆ ಅನುಪಮವಾದುದು. ವಿಜಯಪುರ ಮಕ್ಕಳ ಸಾಹಿತ್ಯದ ತವರೂರು. ವಿಜಯಪುರ ತಾಲೂಕಿನ 8ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ ಬೋಳಸೂರ ಸ್ವಾಗತಿಸಿದರು. ರಿಯಾಜ್ ಪಿಂಜಾರ ನಿರೂಪಿಸಿದರು. ಮಾಧವ ಗುಡಿ ವಂದಿಸಿದರು. ಮೆಹತಾಬ ಕಾಗವಾಡ ತತ್ವಪದ ಹಾಗೂ ರವಿ ಕಿತ್ತೂರ ಪರಿಸರ ಜಾಗೃತಿ ಗೀತೆ ಹಾಡಿದರು.
ಕಸಾಪ ಪದಾಧಿಕಾರಿಗಳಾದ ಅಭಿಷೇಕ ಚಕ್ರವರ್ತಿ, ಜಯಶ್ರೀ ಹಿರೇಮಠ, ಶಿಲ್ಪಾ ಭಸ್ಮೆ, ಯಮನಪ್ಪ ಪವಾರ, ಬಿ.ಎಂ.ಅಜೂರ, ಬಸನಗೌಡ ಬಿರಾದಾರ, ಮೋಹನ ಕಟ್ಟಿಮನಿ, ಮಹಾದೇವ ಮೋಪಗಾರ, ವಿಜಯಲಕ್ಷ್ಮೀ, ಆಶಾ ಬಿರಾದಾರ, ಪ್ರದೀಪ ನಾಯ್ಕೋಡಿ, ರಾಜೇಶ್ವರಿ ಮೋಪಗಾರ, ಎಂ.ಎಸ್. ಮಾಗಣಗೇರಿ, ಬಸವರಾಜ ತಂಗಡಗಿ, ಸಂಗಮೇಶ ಚೂರಿ ಮತ್ತಿತರರಿದ್ದರು.