ಭಾರತೀಯ ವಾಯು ಸೇವೆಯ ರಕ್ಷಣಾ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಹುತಾತ್ಮ ಯೋಧ ರಾಘವೇಂದ್ರ ಬೀಳಗಿ ಅವರ ತಾಯಿ ಮೀನಾಕ್ಷಿ, ಅಣ್ಣ ವಿನೋದ ಬೀಳಗಿ ಅವರಿಗೆ ಮಿಲಿಟರಿ ಅಧಿಕಾರಿಗಳು ರಾಷ್ಟ್ರಧ್ವಜವನ್ನು ಹಸ್ತಾಂತರಿಸುತ್ತಿರುವುದು. 
ವಿಜಯಪುರ

ಯೋಧ ರಾಘವೇಂದ್ರ ಬೀಳಗಿಗೆ ಅಂತಿಮ ವಿದಾಯ..!

ಪ್ರಮುಖ ಮುಖ್ಯಾಂಶಗಳು

  • ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
  • ಅನಾರೋಗ್ಯದಿಂದ ಸಾವು
  • ಕುಟುಂಬದ ಆಕ್ರಂದನ
ಹಡಗಲಿ : ಭಾರತೀಯ ವಾಯು ಸೇವೆಯ ರಕ್ಷಣಾ ರೆಜಿಮೆಂಟ್-27 ರಾಜಸ್ಥಾನದ ಬಿಕನೇರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಕಗ್ಗೋಡ ಗ್ರಾಮದ ವೀರಯೋಧ ರಾಘವೇಂದ್ರ ಬೀಳಗಿ (29) ಅನಾರೋಗ್ಯದಿಂದ ಭಾನುವಾರ ಪುಣೆಯ ಮಿಲಿಟರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ಸ್ವಗ್ರಾಮ ಕಗ್ಗೋಡದಲ್ಲಿ ಮಂಗಳವಾರ ಬೆಳಗ್ಗೆ 12 ಗಂಟೆಗೆ ಸಕಲ ಸರ್ಕಾರಿ ಹಾಗೂ ಮಿಲಿಟರಿ ಗೌರವಗಳೊಂದಿಗೆ ನೇರವೇರಿತು.
ಮಂಗಳವಾರ ಬೆಳಗ್ಗೆ ಹತ್ತು ಗಂಟೆಗೆ ಯೋಧನ ಪಾರ್ಥಿವ ಶರೀರ ಹುಟ್ಟೂರಿಗೆ ಆಗಮಿಸುತ್ತಿದ್ದಂತೆ ಯೋಧನ ತಂದೆ ರಮೇಶ ಬೀಳಗಿ, ತಾಯಿ ಮೀನಾಕ್ಷಿ ಬೀಳಗಿ ಹಾಗೂ ಅಣ್ಣ ವಿನೋದ ಬೀಳಗಿ ಹಾಗೂ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ಗ್ರಾಮಸ್ಥರು ರಾಘವೇಂದ್ರ ಬೀಳಗಿ ಅಮರ್ ರಹೇ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದರು.
ಯೋಧನ ಭಾವಚಿತ್ರದೊಂದಿಗೆ ವಿಶೇಷವಾಗಿ ಅಲಂಕರಿಸಿದ್ದ ಸೇನಾ ವಾಹನದಲ್ಲಿ ಪಾರ್ಥಿವ ಶರೀರವನ್ನು ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಯಿತು. ಜನರು ಸ್ವಯಂಪ್ರೇರಣೆಯಿಂದ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ ಗ್ರಾಮದ ಹೆಮ್ಮೆಯ ಯೋಧನಿಗೆ ಗೌರವ ಸಲ್ಲಿಸಿದರು.
ಮಿಲಿಟರಿ ಗೌರವ: ಸೇನಾ ದಳದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಯೋಧ ರಾಘವೇಂದ್ರ ಬೀಳಗಿ ಅವರ ಪಾರ್ಥಿವ ಶರೀರದ ಮೇಲೆ ಪುಷ್ಪಗುಚ್ಛವನ್ನಿಟ್ಟು ಗೌರವ ವಂದನೆ ಸಲ್ಲಿಸಿದರು. ಬಳಿಕ, ದೇಶದ ಧ್ವಜವನ್ನುಗೌರವದಿಂದ ಮಡಚಿ ಯೋಧನ ತಾಯಿ ಮತ್ತು ಅಣ್ಣನಿಗೆ ಹಸ್ತಾಂತರಿಸುವ ಕ್ಷಣ ಅತ್ಯಂತ ಭಾವಪೂರ್ಣವಾಗಿತ್ತು. ನಂತರ, ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಮಿಲಿಟರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಅಂತ್ಯ ಸಂಸ್ಕಾರದಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಮಾಜಿ ಶಾಸಕ ದೇವಾನಂದ ಚೌಹಾಣ್, ವಿಜಯಪುರ ತಹಸೀಲ್ದಾರ್ ಪ್ರಶಾಂತ ಚನಗೊಂಡ, ಗ್ರಾಮೀಣ ಸಿಪಿಐ ಆರ್.ಎಸ್. ಜಾಣರ್, ಸೇರಿ ಜಿಲ್ಲಾ ಆಡಳಿತದ ಪ್ರಮುಖ ಅಧಿಕಾರಿಗಳು, ವಿವಿಧ ರಾಜಕೀಯ ಮುಖಂಡರು ಮತ್ತು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನಸಾಗರವೇ ಹರಿದುಬಂದಿತ್ತು.