ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ನೇತೃತ್ವ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ನಾಗೇಶ ಗೋಲಶೆಟ್ಟಿ, ಎಸ್.ವಿ. ಪಾಟೀಲ ಸಿಂದಗಿ, ಅಪ್ಪಾಸಾಹೇಬ ಯರನಾಳ ಮತ್ತಿತರರಿದ್ದಾರೆ. 
ವಿಜಯಪುರ

ಚಳಿಗಾಲ ಅಧಿವೇಶನಕ್ಕೆ ಹೋರಾಟದ ಬಿಸಿ, ಉ-ಕ ಪ್ರತ್ಯೇಕ ರಾಜ್ಯಕ್ಕಾಗಿ ಹಕ್ಕೊತ್ತಾಯ ಮಂಡನೆ-ನಕಾಶೆ ಪ್ರದರ್ಶನ

ಪ್ರಮುಖ ಮುಖ್ಯಾಂಶಗಳು

  • ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು
  • ಚಳಿಗಾಲ ಅಧಿವೇಶನಕ್ಕೆ ಹೋರಾಟದ ಬಿಸಿ
  • ಹಕ್ಕೊತ್ತಾಯ ಮಂಡನೆ-ನಕಾಶೆ ಪ್ರದರ್ಶನ
ವಿಜಯಪುರ: ಚಳಿಗಾಲ ಅಧಿವೇಶನಕ್ಕಾಗಿ ಬೆಳಗಾವಿಯಲ್ಲಿ ಭರ್ಜರಿ ಸಿದ್ಧತೆ ಆರಂಭಗೊಂಡ ಬೆನ್ನಲ್ಲೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಬಲಗೊಂಡಿದ್ದು, ಪ್ರತ್ಯೇಕ ರಾಜ್ಯದ ನಕಾಶ ಕೂಡ ಪ್ರದರ್ಶಿಸಲಾಯಿತು.
ಶಾಸಕ ರಾಜು ಕಾಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಗೆ ಸಂಬಂಧಿಸಿದಂತೆ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದು, ಇದೀಗ ವಿಜಯಪುರದಲ್ಲಿಯೂ ಅಂಥದ್ದೇ ಕೂಗು ಮೊಳಗಿದೆ. ಉತ್ತರ ಕರ್ನಾಟಕ ಹೋರಾಟ ಸಮಿತಿ ಪದಾಧಿಕಾರಿಗಳು ಪ್ರತ್ಯೇಕ ರಾಜ್ಯ ರಚನೆಗೆ ಹಕ್ಕೊತ್ತಾಯ ಮಂಡಿಸಿ ಪ್ರತ್ಯೇಕ ರಾಜ್ಯದ ನಕಾಶೆ ಪ್ರಸ್ತುತಪಡಿಸಿದ್ದಾರೆ.
ಈ ಕುರಿತು ಗುರುವಾರ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ ವಿವಿಧ ಪ್ರಗತಿಪರ ಚಿಂತಕರು, ಕನ್ನಡಪರ ಸಂಘಟನೆಯ ಸದಸ್ಯರು ಕಾಗೆ ಅವರ ಈ ನಿಲುವಿಗೆ ಬೆಂಬಲವಿದೆ ಎಂದರು.
ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಮುಖ ನಾಗೇಶ ಗೋಲಶೆಟ್ಟಿ ಮಾತನಾಡಿ, ನಾವು ನಾಡು ವಿಭಜನೆ ಮಾಡುತ್ತಿಲ್ಲ. ಇದು ವಿಭಜನೆಯಲ್ಲ. ಕಳೆದ ಹಲವಾರು ವರ್ಷಗಳಿಂದ ಉತ್ತರ ಕರ್ನಾಟಕ ಭಾಗಕ್ಕೆ ದೊಡ್ಡ ಪ್ರಮಾಣದ ಅನ್ಯಾಯವಾಗುತ್ತಿದೆ, ಉತ್ತರ ಕರ್ನಾಟಕ ಭಾಗದಲ್ಲಿ ಹೇರಳವಾದ ಸಂಪನ್ಮೂಲಗಳಿದ್ದರೂ ಉ.ಕ. ಭಾಗದ ಜನತೆ ದೊಡ್ಡ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸುವಂತಾಗಿದೆ, ರಾಜು ಕಾಗೆ ಸೇರಿದಂತೆ ಅನೇಕ ಶಾಸಕರು ಈ ನಿಲುವಿನ ಪರವಾಗಿದ್ದಾರೆ ಎಂದರು.
ಇತ್ತೀಚೆಗೆ ಪ್ರತ್ಯೇಕ ಮೈಸೂರು ರಾಜ್ಯ ರಚನೆಗೆ ಆ ಭಾಗದ ಹೋರಾಟಗಾರರು ಆಗ್ರಹಿಸಿದ್ದು ಉತ್ತರ ಕರ್ನಾಟಕ ಹೋರಾಟ ಸಮಿತಿಯು ಸ್ವಾಗತಿಸಿದೆ. ಕಾಗೆಯವರ ಪತ್ರಕ್ಕೆ ಈಗಾಗಲೇ ಆನೇಕ ಶಾಸಕರು ಬೆಂಬಲವನ್ನು ವ್ಯಕ್ತಪಡಿಸಿದ್ದು ಉತ್ತರ ಕರ್ನಾಟಕ ಭಾಗದ ಎಲ್ಲ ಜನಪ್ರತಿನಿಧಿಗಳು ಬೆಂಬಲಿಸಬೇಕಾಗಿದೆ. ಈ ಹಿಂದೆ ಸಂಸದರಾದ ರಮೇಶ ಜಿಗಜಿಣಗಿ ಅವರು ರಾಜ್ಯಪಾಲರಿಗೆ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪತ್ರ ಬರೆದಿದ್ದಾರೆ. ಪಕ್ಷಾತೀತವಾಗಿ ಉತ್ತರ ಕರ್ನಾಟಕ ಭಾಗದ ಎಲ್ಲ ಜನಪ್ರತಿನಿಧಿಗಳು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಬೆಂಬಲಿಸಬೇಕಾಗಿದೆ ಎಂದರು.

ಏಕೀಕರಣಕ್ಕೆ ಉ-ಕ ಕೊಡುಗೆ ಅಪಾರ

ಕರ್ನಾಟಕದ ಏಕೀಕರಣಕ್ಕಾಗಿ ಉತ್ತರ ಕರ್ನಾಟಕದ ಜನತೆ ದೊಡ್ಡ ಹೋರಾಟ ರೂಪಿಸಿದವರು. ಆದರೆ ಇಂದು ಅದೇ ಉತ್ತರ ಕರ್ನಾಟಕದ ಜನತೆ ಮಲತಾಯಿ ಧೋರಣೆಗೆ ತುತ್ತಾಗಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಯಲ್ಲಿಯೂ ತಾರತಮ್ಯವಾಗುತ್ತಿದೆಯಲ್ಲದೇ, ಕರ್ನಾಟಕ ಏಕೀಕರಣ ಆದಾಗಿನಿಂದ ಇಲ್ಲಿಯವರೆಗೂ ಎಲ್ಲ ಕ್ಷೇತ್ರಗಳಲ್ಲಿಯೂ ತಾರತಮ್ಯ, ಅನ್ಯಾಯ, ಮಲತಾಯಿ ಧೋರಣೆ ಮುಂದುವರೆದಿದೆ. ನಮ್ಮ ಯಾವ ಬೇಡಿಕೆಗಳನ್ನೂ ಯಾವ ಸರ್ಕಾರಗಳೂ ಈಡೇರಿಸಿಲ್ಲ. ಪ್ರತಿಯೊಂದಕ್ಕೂ ಹೋರಾಟ ಮಾಡಬೇಕಾದ ದುಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷ್ಣೆ ಕಾವೇರಿಗಿಂತ ಮೂರು ಪಟ್ಟು ದೊಡ್ಡದಾಗಿರುವ ನದಿ. ಆದರೂ ಕರ್ನಾಟಕದ ಪಾಲಿಗೆ ಕಾವೇರಿಯೇ ಜೀವ ನದಿ ! ಮಂಡ್ಯಕ್ಕಿಂತ ಅಧಿಕ ಕಬ್ಬು ನಮ್ಮ ಭಾಗದಲ್ಲಿ ಬೆಳೆಯುತ್ತದೆ. ಆದರೂ ಮಂಡ್ಯ ಸಕ್ಕರೆ ಕಣಜ! ಕೇವಲ ಒಂದು ನಗರವನ್ನು ನಿರ್ಮಿಸಿದ ಕೆಂಪೇಗೌಡರನ್ನು ನಾಡಪ್ರಭು ಎಂದು ಕರೆಯಲಾಗಿದೆ. ಹಾಗಾದರೆ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಸಂಗೊಳ್ಳಿ ರಾಯಣ್ಣ ಅವರನ್ನು ಏನೆಂದು ಕರೆಯುತ್ತೀರಿ? ಅವರು ಉತ್ತರ ಕರ್ನಾಟಕದವರು ಎಂದು ನಿರ್ಲಕ್ಷ್ಯ ತೋರುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಐಟಿ-ಬಿಟಿ ಇಲ್ಲ ಎಂದು ನೀವು ತಿಳಿದುಕೊಂಡಿರಬಹುದು. ಐಟಿ ಕ್ಷೇತ್ರ ನಮ್ಮಲ್ಲಿ ಇಲ್ಲದಿರಬಹುದು, ಆದರೆ ನೈಸರ್ಗಿಕವಾದ ಹೇರಳ ಸಂಪನ್ಮೂಲಗಳು ನಮ್ಮಲ್ಲಿವೆ ಎಂದರು.
2018 ರಿಂದ ಉತ್ತರ ಕರ್ನಾಟಕ ಹೋರಾಟ ಸಮಿತಿಯು ಪ್ರತ್ಯೇಕ ರಾಜ್ಯಕ್ಕಾಗಿ ಲಿಖಿತ ಅಭಿಪ್ರಾಯ ಮತ್ತು ಸಹಿ ಸಂಗ್ರಹಣ ಅಭಿಯಾನ ಪ್ರಾರಂಭಿಸಿದ್ದು 1.40 ಕೋಟಿಗೂ ಅಧಿಕ ಜನ ಸಹಿ ಸಂಗ್ರಹ ಮಾಡಿದ್ದಾರೆ. 2025 ನವೆಂಬರ್ 1ರಿಂದ ಜನಪ್ರತಿನಿಧಿಗಳಿಂದ ಸಹಿ ಸಂಗ್ರಹ ಹಾಗೂ ಪತ್ರ ಚಳುವಳಿಯ ಅಭಿಯಾನ ಪ್ರಾರಂಭಿಸಿದ್ದು ಈಗಾಗಲೇ ಈ ಭಾಗದ ಅನೇಕ ಜನಪ್ರತಿನಿಧಿಗಳು ಇದನ್ನು ಬೆಂಬಲಿಸಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪತ್ರವನ್ನು ಕೂಡ ಬರೆದಿದ್ದಾರೆ ಎಂದರು.
ಹೋರಾಟಗಾರ ಎಸ್.ವಿ. ಪಾಟೀಲ ಸಿಂದಗಿ ಮಾತನಾಡಿ, ಎಲ್ಲ ಅಧಿಕಾರ ಬೆಂಗಳೂರು ಕೇಂದ್ರಿಕೃತವಾಗಿವೆ. ಮಹಾರಾಷ್ಟ್ರದಲ್ಲಿ ನಾಗಪುರ, ಮುಂಬಯಿ ಎರಡು ರಾಜಧಾನಿಗಳಿವೆ. ಆದರೆ ನಮ್ಮಲ್ಲಿ ಎರಡು ರಾಜಧಾನಿಗಳಿದ್ದರೂ ಸಂಪೂರ್ಣ ಅಧಿಕಾರ ಕೇಂದ್ರಕೃತವಾಗಿದ್ದು ಬೆಂಗಳೂರಿಗೆ. ಹೀಗಾಗಿ ಬೆಂಗಳೂರಿಗೆ ಹೋಗಲು ಈ ಭಾಗದ ಜನತೆ ಕನಿಷ್ಠ 5000 ರೂ. ಬೇಕು, ಅಷ್ಟೊಂದು ಹಣ ಕೊಟ್ಟು ಈ ಭಾಗದ ಬಡಜನತೆ ರಾಜಧಾನಿಗೆ ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸಚಿವ ಸ್ಥಾನ ಹಂಚಿಕೆಯಲ್ಲಿಯೂ ಈ ಭಾಗದ ಶಾಸಕರಿಗೆ ಅನ್ಯಾಯ, ಮೀನುಗಾರಿಕೆಯಂತಹ ಖಾತೆಗಳನ್ನು ಉತ್ತರ ಕರ್ನಾಟಕದ ಶಾಸಕರಿಗೆ ನೀಡಲಾಗುತ್ತಿದೆ, ಪ್ರಭಾವಿ ಸ್ಥಾನಗಳೆಲ್ಲವೂ ದಕ್ಷಿಣ ಕರ್ನಾಟಕದ ಪಾಲಿಗೆ ಸೀಮಿತ ಎಂದರು. ಹಳೇ ಮೈಸೂರು ಹಾಗೂ ನಮ್ಮನ್ನು ಹೋಲಿಕೆ ಮಾಡಿದರೆ ನಾವು ಅವರಿಗಿಂತ 40 ವರ್ಷ ಹಿಂದೆ ಇದ್ದೇವೆ, ಇದಕ್ಕೆಲ್ಲವೂ ನಮ್ಮ ಭಾಗಕ್ಕೆ ತೋರಿದ ಮಲತಾಯಿ ಧೋರಣೆಯೇ ಕಾರಣ ಎಂದರು.
ಮುಖಂಡರಾದ ಪೀಟರ್ ಅಲೆಕ್ಸಾಂಡರ್, ಅಪ್ಪಾಸಾಹೇಬ ಯರನಾಳ, ಚೆನ್ನು ಕಟ್ಟಿಮನಿ, ಶ್ರೀಶೈಲ ಮುಳಜಿ, ಸಂಗನಗೌಡ ಪಾಟೀಲ, ಅಪ್ಪಾಸಾಹೇಬ ಬುಗಡೆ, ಭಾಗ್ಯರಾಜ ಸೊನ್ನದ, ನಾರಾಯಣ ಕುಲಕರ್ಣಿ ಮತ್ತಿತರರಿದ್ದರು.