ವಿಜಯಪುರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋಽಸಿ ನಡೆಯುತ್ತಿರುವ ಅನಿರ್ದಿಷ್ಟಾವಽ ಧರಣಿ ಸತ್ಯಾಗ್ರಹದಲ್ಲಿ ಈಶ್ವರಚಂದ್ರ ಪಡಗಣ್ಣವರ ಮಾತನಾಡಿದರು. ಮಲ್ಲಿಕಾರ್ಜುನ ಎಚ್.ಟಿ., ಭರತಕುಮಾರ ಎಚ್.ಟಿ., ಅಬ್ದುಲ ರೆಹಮಾನ ನಾಸಿರ್ ಮತ್ತಿತರರಿದ್ದಾರೆ.
ವಿಜಯಪುರ: ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿರೋಧಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ವತಿಯಿಂದ ನಗರದ ಅಂಬೇಡ್ಕರ್ ವೃತ್ತದ ಬಳಿ ನಡೆಯುತ್ತಿರುವ ಅನಿರ್ದಿಷ್ಟಾವಽ ಧರಣಿ ಸತ್ಯಾಗ್ರಹ ಬುಧವಾರ 63ನೇ ದಿನ ಪೂರೈಸಿತು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೈನ್ಯ ಬಳಗದ ಜಿಲ್ಲಾ ಪದಾಽಕಾರಿ ಈಶ್ವರಚಂದ್ರ ಪಡಗಣ್ಣವರ ಧರಣಿಗೆ ಬೆಂಬಲಿಸಿ ಮಾತನಾಡಿ, ವಿಜಯಪುರ ನಗರದಲ್ಲಿ ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ವಿವಿಧ ರೀತಿಯ ಚಳವಳಿಗಳನ್ನು ಹಮ್ಮಿಕೊಳ್ಳಲಾಗಿದೆ.
ಹೋರಾಟ ಸಮಿತಿ ಸದಸ್ಯರ 30 ಜನರ ಒಂದು ನಿಯೋಗವು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಜತೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭ ಹಾಗೂ ಖಾಸಗಿ ಸಹಭಾಗಿತ್ವ ಕೈಬಿಡಬೇಕೆಂದು ಚರ್ಚಿಸಲು ಹೋಗಿದೆ. ಸರ್ಕಾರ ಇದಕ್ಕೆ ಮಣಿದು ನಮ್ಮ ಜಿಲ್ಲೆಗೆ ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕೆಂದು ಆಗ್ರಹಿಸಿದರಲ್ಲದೆ, ನಮ್ಮ ಜಿಲ್ಲೆಯಲ್ಲಿ ಅತಿ ಹಿಂದುಳಿದ ಮತ್ತು ಕೃಷಿ ಕಾರ್ಮಿಕರ ಮಕ್ಕಳು ವೈದ್ಯಕೀಯ ಮತ್ತು ಉನ್ನತ ಶಿಕ್ಷಣ ಪಡೆಯುವಂತಾಗಲಿದೆ ಎಂದರು.
ಸರ್ಕಾರ ಖಾಸಗಿಯವರಿಗೆ ಸಂಪೂರ್ಣ ಜವಾಬ್ದಾರಿ ಕೊಟ್ಟರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು. ಹೋರಾಟ ಸಮಿತಿಯ ಮಲ್ಲಿಕಾರ್ಜುನ ಎಚ್.ಟಿ., ಭರತಕುಮಾರ ಎಚ್.ಟಿ., ಅಬ್ದುಲ ರೆಹಮಾನ ನಾಸಿರ್, ಬಾಬುರಾವ ಬೀರಕಬ್ಬಿ, ಸಿದ್ರಾಮ ಹಿರೇಮಠ, ಎಸ್.ಎಸ್. ಕಟ್ಟಿ, ಶಿವಬಾಳಮ್ಮ ಕೊಂಡಗೂಳಿ, ಗೀತಾ ಎಚ್., ಶ್ರೀಕಾಂತ ಕೊಂಡಗೂಳಿ, ಶಿವರಂಜನಿ ಎಸ್.ಬಿ., ಕಾವೇರಿ ರಜಪೂತ, ಲಾಯಪ್ಪ ಇಂಗಳೆ, ಲಕ್ಷ್ಮಣ ಕಂಬಾಗಿ ಮತ್ತಿತರರಿದ್ದರು.