ತಾಳಿಕೋಟೆ ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಂಕ್ರಾಂತಿ ಸಂಭ್ರಮದ ಪೂಜಾ ಕಾರ್ಯಕ್ರಮ ವಿ.ವಿ. ಸಂಘದ ಸಹ ಕಾರ್ಯದರ್ಶಿ ಆರ್.ಸಿ. ಪಾಟೀಲ ನೆರವೇರಿಸಿದರು. ವಿ.ವಿ. ಸಂಘದ ಉಪಾಧ್ಯಕ್ಷ ಕಾಶಿನಾಥ ಮುರಾಳ, ಸಹಕಾರ್ಯದರ್ಶಿ ಆರ್.ಸಿ. ಪಾಟೀಲ, ನಿರ್ದೇಶಕ ಪ್ರಭುಗೌಡ ಮದರಕಲ್ಲ, ಐಕ್ಯೂಎಸಿ ಸಂಯೋಜಕ ಯು.ಎನ್. ಮಂಗೋಡ ಮತ್ತಿತರಿದ್ದರು.
- ಸಾಹಿತಿ ಸುಮಂಗಲಾ ಕೋಳೂರ ಅಭಿಮತ
- ಸಂಕ್ರಾಂತಿ ಸಂಭ್ರಮಾಚರಣೆ
ತಾಳಿಕೋಟೆ: ದೇಶದಲ್ಲಿ ಆಚರಿಸಲ್ಪಡುತ್ತಿರುವ ಪ್ರತಿ ಹಬ್ಬಕ್ಕೆ ತನ್ನದೆಯಾದ ಐತಿಹಾಸಿಕ, ಪೌರಾಣಿಕ ವೈಜ್ಞಾನಿಕ ಮಹತ್ವಗಳಿವೆ. ಆದರೆ ಇತ್ತೀಚಿನ ಒತ್ತಡಯುಕ್ತ ಜೀವನದಲ್ಲಿ ಹಬ್ಬಗಳ ಆಚರಣೆಯೇ ಕಣ್ಮರೆಯಾಗುತ್ತಿರುವುದು ವಿಪರ್ಯಾಸ ಎಂದು ಸಾಹಿತಿ ಸುಮಂಗಲಾ ಕೋಳೂರ ತಿಳಿಸಿದರು.
ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾ ವಿದ್ಯಾಲಯ (ಬಿಇಡಿ) ಸಭಾಭವನದಲ್ಲಿ ಸಂಕ್ರಾಂತಿ ಸಂಭ್ರಮ ಆಚರಣೆ ಕುರಿತು ಅವರು ಮಾತನಾಡಿದರು.
ಇಂದಿನ ಪೀಳಿಗೆ ವಿದೇಶಿಯರ ಪ್ರಭಾವದಿಂದ ನಮ್ಮ ಸಂಸ್ಕೃತಿಯ ಹಬ್ಬ ಮರೆತಂತೆ ಕಾಣುತ್ತಿದೆ, ವಿದೇಶಿಯರ ಅನುಕರಣೆ ತೊರೆದು ಪರಂಪರಾಗತ ಆಚರಣೆಗೆ ಒಳಪಟ್ಟ ಹಬ್ಬ ಹರಿದಿನಗಳ ಆಚರಣೆಯನ್ನು ಹಿರಿಯರು ತಮ್ಮ ಮಕ್ಕಳಿಗೂ ಅದರ ಮಹತ್ವದ ಬಗ್ಗೆ ತಿಳಿ ಹೇಳಿ ಹಬ್ಬ ಹರಿದಿನಗಳ ಕಾರ್ಯ ಮುಂದುವರಿಸುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.
ಪುರಾಣದಂತೆ ಸಂಕ್ರಾಂತಿ ದಿನದಂದು ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿಯಾಗುವುದರಿಂದ ಆನಂದಕ್ಕಾಗಿ ಎಳ್ಳು, ಬೆಲ್ಲ ತಿಂದು ಒಳ್ಳೆಯ ಹಿತ ನುಡಿಯುವ ಉದ್ದೇಶದಿಂದ ಎಳ್ಳು ಬೆಲ್ಲವನ್ನು ಹಂಚಲಾಗುತ್ತದೆ. ಎಳ್ಳು, ಬೆಲ್ಲ, ನೆಲಗಡಲೆ, ಸಕ್ಕರೆ, ಕೊಬ್ಬರಿ, ಬೆರಿಯಿಸಿ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ, ವಿವಾಹಿತ ಹಾಗೂ ಅವಿವಾಹಿತ ಹೆಣ್ಣು ಮಕ್ಕಳು ತಮ್ಮ ಆಪ್ತರಿಗೆ ಹಂಚಿ ಸಂತೋಷ ಪಡುವ ಹಬ್ಬವೇ ಸಂಕ್ರಾಂತಿ ಎಂದು ಹೇಳಿದರು.
ವಿ.ವಿ. ಸಂಘದ ಉಪಾಧ್ಯಕ್ಷ ಕಾಶಿನಾಥ ಮುರಾಳ, ಸಹಕಾರ್ಯದರ್ಶಿ ಆರ್.ಸಿ. ಪಾಟೀಲ, ನಿರ್ದೇಶಕ ಪ್ರಭುಗೌಡ ಮದರಕಲ್ಲ, ಐಕ್ಯೂಎಸಿ ಸಂಯೋಜಕ ಯು.ಎನ್. ಮಂಗೋಡ, ಕನ್ನಡ ವಿಭಾಗದ ಪ್ರಾಧ್ಯಾಪಕ ಎಚ್. ಅಂಗಡಗೇರಿ ಮತ್ತಿತರರಿದ್ದರು.