ವಿಜಯಪುರ ಹೊರ ವಲಯದ ಪ್ರಾದೇಶಿಕ ಸಂಶೋಧನಾ ಕೇಂದ್ರ (ಹಿಟ್ನಳ್ಳಿ ಫಾರ್ಮ್) ದಲ್ಲಿ ಹಮ್ಮಿಕೊಂಡಿರುವ ಕೃಷಿ ಮೇಳ 2025-26 ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ವಿಠಲ ಕಟಕದೊಂಡ, ಸಂಗಮೇಶ ಬಬಲೇಶ್ವರ, ಪಿ.ಎಲ್. ಪಾಟೀಲ ಮತ್ತಿತರರಿದ್ದಾರೆ. 
ವಿಜಯಪುರ

ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲಿ

ಪ್ರಮುಖ ಮುಖ್ಯಾಂಶಗಳು

  • ನಾಗಠಾಣ ಶಾಸಕ ವಿಠಲ ಕಟಕದೊಂಡ ಸಲಹೆ
  • ಕೃಷಿ ಮೇಳ 2025-26ಕ್ಕೆ ಚಾಲನೆ
ವಿಜಯಪುರ: ಕೃಷಿಯಲ್ಲಿ ನವೋದ್ಯಮ ಎಂಬ ಘೋಷವಾಕ್ಯದಡಿ ರೈತರನ್ನು ಪ್ರೋತ್ಸಾಹಿಸಲು ಈ ಭಾಗದ ಹೆಚ್ಚಿನ ರೈತ ಫಲಾನುಭವಿಗಳು ತಮ್ಮ ಚಿಂತನೆಗಳನ್ನು ಆವಿಷ್ಕಾರವಾಗಿ ಪರಿವರ್ತನೆ ಕಂಡುಕೊಳ್ಳುವ ನಿಟ್ಟಿನಲ್ಲಿ ಆಧುನಿಕ ಕೃಷಿ ತಂತ್ರಜ್ಞಾನಗಳ ಮಾಹಿತಿ ರೈತರಿಗೆ ಈ ಕೃಷಿ ಮೇಳದಲ್ಲಿ ಪರಿಚಯಿಸಲಾಗುತ್ತಿದೆ ನಾಗಠಾಣ ಶಾಸಕ ವಿಠಲ ಕಟಕದೊಂಡ ಹೇಳಿದರು.
ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಇಲಾಖೆ, ಜಿಪಂ, ಆತ್ಮಾಯೋಜನೆಗಳ ಸಂಯುಕ್ತಾಶ್ರಯದಲ್ಲಿ ನಗರ ಹೊರ ವಲಯದ (ಹಿಟ್ನಳ್ಳಿ ಫಾರ್ಮ್) ಪ್ರಾದೇಶಿಕ ಸಂಶೋಧನಾ ಕೇಂದ್ರದಲ್ಲಿ ಮೂರು ದಿನಗಳವರೆಗೆ ನಡೆಯಲಿರುವ ಕೃಷಿ ಮೇಳ 2025-26 ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ಕೃಷಿ ಮೇಳದ ಸದುಪಯೋಗ ಪಡೆದು ತಮ್ಮ ಕೃಷಿ ಜತೆಗೆ ಸಾವಯವ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ರೈತರು ವಿವಿಧ ಬೆಳೆಗಳು ಮತ್ತು ಅಭಿವೃದ್ಧಿಪಡಿಸಿದ ತಂತ್ರಜ್ಞಾನವುಳ್ಳ ಪ್ರಾಯೋಗಿಕ ತಾಕುಗಳ ವೀಕ್ಷಣೆ, ವಿಚಾರ ಗೋಷ್ಠಿ, ಪೌಷ್ಟಿಕತೆ ಮತ್ತು ಆರ್ಥಿಕ ಭದ್ರತೆಗಾಗಿ ಸಾವಯವ ಮತ್ತು ನೈಸರ್ಗಿಕ ಕೃಷಿ, ಕೃಷಿ ಉದ್ದಿಮೆ ಅಭಿವೃದ್ಧಿ ಮತ್ತು ಮಾರುಕಟ್ಟೆ ಹಾಗೂ ಸುಸ್ಥಿರ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳು ಎಂಬ ವಿಷಯಗಳ ಮೇಲೆ ಈ ಕೃಷಿ ಮೇಳದಲ್ಲಿ ಚರ್ಚಾ ಗೋಷ್ಠಿ ರೈತರೊಂದಿಗೆ ವಿಚಾರ ವಿನಿಮಯ ನಡೆಯಲಿದೆ ಎಂದರು.
ಒಣ ಬೇಸಾಯ ತಂತ್ರಜ್ಞಾನ, ಹಿಂಗಾರಿ ಜೋಳದ ತಳಿ ಅಭಿವೃದ್ಧಿ, ಮಳೆ ನೀರು ಕೊಯ್ಲು, ಜೈವಿಕ ಗೊಬ್ಬರಗಳ ಉತ್ಪಾದನೆ ಹಾಗೂ ಬಳಕೆ, ಕಡಲೆ ಮತ್ತು ತೋಗರಿಯ ತಳಿಗಳು, ಎರೆಹುಳು ತಂತ್ರಜ್ಞಾನ, ಸಾವಯವ ಕೃಷಿ, ಕೃಷಿ ಸ್ಪಾರ್ಟ್ಆಪ್, ನೈಸರ್ಗಿಕ ಕೃಷಿ, ಪಶು ಸಂಗೋಪನೆ, ಕೃಷಿ ಹವಾಮಾನ ಮಾಹಿತಿ, ಕೃಷಿ ಯಾಂತ್ರಿಕತೆ, ಬೀಜೋತ್ಪಾದನೆ, ಬೀಜ ಸಂಸ್ಕರಣೆ, ಕೃಷಿ ಮಾರುಕಟ್ಟೆ/ಗೃಹ ವಿಜ್ಞಾನ ಮಾಹಿತಿ, ಬೃಹತ್ ಜಲಾನಯನ ಅಭಿವೃದ್ಧಿ ಪ್ರಾತ್ಯಕ್ಷಿಕೆ, ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳ ಕುರಿತು ಒಂದೇ ಸೂರಿನಡಿ ಲಭ್ಯವಿದ್ದು ರೈತರು ಸಮಗ್ರ ಮಾಹಿತಿ ಪಡೆದು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ಸಲಹೆ ನೀಡಿದರು.
ಶಾಸಕ ಭೀಮನಗೌಡ ಪಾಟೀಲ ಕೃಷಿ ಮಳಿಗೆಗಳನ್ನು ವೀಕ್ಷಿಸಿ ಮಾತನಾಡಿ, ಮೇಳದಲ್ಲಿ ರೈತರಿಗೆ ಉಪಯುಕ್ತವಾದ ಮಳಿಗೆಗಳನ್ನು ಸ್ಥಾಪಿಸಿದ್ದು, ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ರೈತರು ಅಭಿವೃದ್ಧಿಯಾಗಬೇಕೆಂದು ಸಲಹೆ ನೀಡಿದರು.
ಧಾರವಾಡ ಕೃಷಿ ವಿವಿಯ ಕುಲಪತಿ ಡಾ. ಪಿ.ಎಲ್ ಪಾಟೀಲ ಮಾತನಾಡಿ, ಈ ವರ್ಷದ ಕೃಷಿ ಮೇಳದ ಅಗ್ರಿಬ್ಯುಸಿನೆಸ್ ಇನ್ಕೂಬಟರ್ 2019ರಲ್ಲಿ ಪ್ರಾರಂಬಿಸಿದ್ದು, ಕೃಷಿ ನವೋದ್ಯಮಕ್ಕೆ ಪ್ರೋತ್ಸಾಹಿಸಲು ಅನುಕೂಲವಾಗಿದೆ. ಈಗಾಗಲೇ 3 ನವೋದ್ಯಮಗಳು ಕಾರ್ಯನಿರ್ವಹಿಸುತ್ತಿದ್ದು, ದ್ರಾಕ್ಷಿಯಲ್ಲಿ ರೋಬೋಟ್ ಚಾಲಿತ ಸಿಂಪಡಣೆ, ಸೌರ ವಿದ್ಯುತ್ ಚಾಲಿತ ಕುಡಿ ಚೂಟುವ, ಸಿಂಪಡಣೆ ಹಾಗೂ ಕಳೆ ತೆಗೆಯುವ ಯಂತ್ರಗಳ ತಯಾರಿಕೆ, ಬೆಂಚ್ ಗ್ರಾಫ್ಟಿಂಗ್ ತಂತ್ರಜ್ಞಾನ ಅಳವಡಿಕೆ ಮಾಹಿತಿ ನೀಡಲಾಗುತ್ತಿದೆ ಎಂದರು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶಿವಾನಗೌಡ ಬಿರಾದಾರ ಮಾತನಾಡಿ, ಕೃಷಿ ಮೇಳವು ರೈತರ ಹಬ್ಬವಾಗಿದೆ. ಹಿಂದಿನ ಕಾಲದ ಬಿತ್ತನೆ ವಿಧಾನಗಳು ಮತ್ತು ಇಂದಿನ ಆಧುನಿಕ ಬಿತ್ತನೆ ಕ್ರಮಗಳಲ್ಲಿ ಅಪಾರ ಬದಲಾವಣೆಗಳು ಕಂಡುಬರುತ್ತಿವೆ. ಹೊಸ ತಂತ್ರಜ್ಞಾನ, ಸುಧಾರಿತ ಬೀಜ, ನೀರಾವರಿ ವ್ಯವಸ್ಥೆ ಹಾಗೂ ಸಮಗ್ರ ಕೃಷಿ ಪದ್ಧತಿಗಳಿಂದ ರೈತರ ಆದಾಯ ದ್ವಿಗುಣಗೊಳಿಸಲು ಸಾಧ್ಯವಾಗಿದೆ. ರೈತರು ತಮ್ಮ ಜಮೀನು ಮಾರದೆ, ಮಣ್ಣಿನ ಆರೋಗ್ಯ ಕಾಪಾಡುವ ದಿಸೆಯಲ್ಲಿ ಕಾರ್ಯನಿರ್ವಹಿಸಿ ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿದರು.
ಕೃಷಿ ಮೇಳದಲ್ಲಿ ಒಟ್ಟು 200 ಮಳಿಗೆಗೆಳನ್ನು ಸ್ಥಾಪಿಸಲಾಗಿದ್ದು, ಯಂತ್ರೋಪಕರಣ, ಊಟದ ಮಳಿಗೆ, ರೈತರ ಕಬ್ಬಿನ ವಿವಿಧ ಉತ್ಪನ್ನಗಳ ಕುರಿತ ಕಬ್ಬಿನ ಅಂಕಣ, ಸಿರಿಧಾನ್ಯ ಮಳಿಗೆ, ಕೃಷಿ ಕೌಶಲ ಆಧಾರಿತ ಮಳಿಗೆ ಹಾಗೂ ಫಲಪುಷ್ಪ ಪ್ರದರ್ಶನವು ಸಾರ್ವಜನಿಕರ ಗಮನ ಸೆಳೆದವು.
ನಂತರ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಮಂಜುನಾಥ ಎಂ.ವಿ, ಸಂಶೋಧನಾ ನಿರ್ದೇಶಕ ಕೃಷ್ಣರಾಜ ಪಿ, ವಿವಿ ಆಡಳಿತ ಮಂಡಳಿ ಸದಸ್ಯೆ ಪಾರ್ವತಿ ಕುರ್ಲೆ, ಸುರೇಶ ಘೋಣಸಗಿ, ಶಿವಾನಂದ ಮಂಗಾನವರ, ಬಸವರಾಜ ಕುಂದಗೋಳಮಠ, ವೀರನಗೌಡ ಪೊಲೀಸಗೌಡರ, ವಿದ್ಯಾಧಿಕಾರಿ ಡಾ. ಎಸ್.ಬಿ. ಜಗ್ಗೀನವರ, ಸಹ ವಿಸ್ತರಣಾ ನಿರ್ದೇಶಕ ಎಂ.ಎಂ. ಜಮಾದಾರ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಸ್.ಎಂ. ವಸöದ, ಪ್ರಗತಿ ರೈತರು ಮತ್ತಿತರರಿದ್ದರು.