ಬಬಲೇಶ್ವರ ತಾಲೂಕಿನ ಅರ್ಜುಣಗಿಯಲ್ಲಿ ನಡೆಯುತ್ತಿರುವ ರೈತರ ಧರಣಿ ಸ್ಥಳದಲ್ಲಿ ರೈತ ಮಹಿಳೆಯರು ಅಡುಗೆ ಮಾಡಿ ಧರಣಿ ನಿರತರಿಗೆ ಉಣಬಡಿಸಿದರು. ಮುಖಂಡರಾದ ಮಲ್ಲಿಕಾರ್ಜುನ ಬಟಗಿ, ಅರವಿಂದ ಕುಲಕರ್ಣಿ ಇತರರಿದ್ದಾರೆ.
- ಕಾಲುವೆಯ ಕೊನೆಯಂಚಿಗೆ ನೀರು ತಲುಪಿಸಿ
- ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ಕಾಲುವೆ
- ರೈತರ ಹೋರಾಟಕ್ಕೆ ಹಳ್ಳಿಯ ಜನರು ಸಾಥ್
ವಿಜಯಪುರ: ಮುಳವಾಡ ಏತ ನೀರಾವರಿಗೆ ಸಂಭಂದಿಸಿದ ಮಲಘಾಣ ಪಶ್ಚಿಮ ಕಾಲುವೆ ಮುಖಾಂತರ ಸಮರ್ಪಕ ನೀರು ಹರಿಸಿ ಕಾಲುವೆ ಕೊನೆ ಭಾಗದವರೆಗೆ ನೀರು ತಲುಪಿಸಲು ಆಗ್ರಹಿಸಿ ಬಬಲೇಶ್ವರ ತಾಲೂಕಿನ ಅರ್ಜುಣಗಿಯಲ್ಲಿ ನಡೆಯುತ್ತಿರುವ ರೈತರ ಧರಣಿ ಗುರುವಾರ ಮೂರನೇ ದಿನ ಪೂರೈಸಿತು.
ಧರಣಿ ಸ್ಥಳದಲ್ಲಿ ರೈತ ಮಹಿಳೆಯರು ಅಡುಗೆ ಮಾಡಿ(ಚಪಾತಿ ತಯಾರಿಸಿ) ಧರಣಿ ನಿರತರಿಗೆ ಉಣಬಡಿಸಿದರು. ಹೋರಾಟಕ್ಕೆ ವ್ಯಾಪಕವಾಗಿ ಬೆಂಬಲ ನೀಡುವುದಾಗಿ ಮಹಿಳೆಯರು ಘೋಷಿಸಿದರು. ಸುತ್ತಲಿನ ಹಳ್ಳಿಗಳ ಜನರು ಸಹ ಸಾಥ್ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ತಿಕೋಟಾ ತಾಲೂಕಾಧ್ಯಕ್ಷೆ ಸಂಗೀತಾ ರಾಠೋಡ ಹಾಗೂ ಬಬಲೇಶ್ವರ ತಾಲೂಕು ಘಟಕದ ಮಹಿಳಾ ಅಧ್ಯಕ್ಷೆ ಲಕ್ಷ್ಮಿ ಬಿರಾದಾರ ಮಾತನಾಡಿ, ಮಲಘಾಣ ಪಶ್ಚಿಮ ಕಾಲುವೆಯ ಕೊನೆ ಭಾಗದವರೆಗೆ ನೀರು ತಲುಪಿಸದಿದ್ದರೆ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.
ಈ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲ ಅವರು ಧರಣಿ ಸ್ಥಳಕ್ಕೆ ಆಗಮಿಸದೇ ಬೆಂಗಳೂರಕ್ಕೆ ಹೋಗಿ ಕುಳಿತಿದ್ದಾರೆ. ಬಬಲೇಶ್ವರ ಮತಕ್ಷೇತ್ರದ ರೈತರು ಇವರಿಗೆ ಬೇಡವಾಗಿದ್ದಾರೆ. ಇವರು ತಮ್ಮ ಮೊಂಡತನವನ್ನು ಮುಂದುವರೆಸಿದ್ದೇ ಆದರೆ ಮುಂಬರುವ ಚುನಾವಣೆಯಲ್ಲಿ ಇವರ ವಿರುದ್ಧ ಪ್ರಚಾರಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಮುಖಂಡ ಪುಟ್ಟು ಗಡದನ್ನವರ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮಾತ್ರ ಇವರಿಗೆ ಮತ ಹಾಕಲು ರೈತರು ಬೇಕು. ಆದರೆ ರೈತರು ನೀರಿಗಾಗಿ ಹೋರಾಟಕ್ಕೆ ಕುಳಿತರೆ ಧರಣಿ ನಿರತ ರೈತರು ಸತ್ತಿದ್ದಾರೋ ಅಥವಾ ಇನ್ನೂ ಬದುಕ್ಕಿದ್ದಾರೋ ಎಂಬ ಕಿಂಚಿತ್ತು ಕಳಕಳಿಯೂ ಇವರಿಗೆ ಇಲ್ಲದಂತಾಗಿದೆ. ರೈತರು ಇವರಿಗೆ ಬೇಡವಾಗಿದ್ದರೆ, ರೈತರಿಂದ ಇವರಿಗೆ ಮತ ಕೇಳುವ ನೈತಿಕತೆ ಏನಿದೆ? ಎಂದು ಖಾರವಾಗಿ ಪ್ರಶ್ನಿಸಿದರು.
ಮುಖಂಡ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ಧರಣಿ ಕುಳಿತು ಮೂರು ದಿನ ಗತಿಸುತ್ತಾ ಬಂದರೂ ಅಧಿಕಾರಿಗಳು ನೀರು ತಲುಪಿಸಲು ವಿಫಲರಾಗಿದ್ದಾರೆ. ಜಿಲ್ಲಾಢಳಿತ ಮಧ್ಯ ಪ್ರವೇಶಿಸಿ ಕಾಲುವೆ ಕೊನೆ ಅಂಚಿನವರೆಗ ನೀರು ತಲುಪಿಸಲು ಸಂಬಂಧಿಸಿದ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಕಿವಿ ಹಿಂಡುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಹೋರಾಟದ ಸ್ವರೂಪ ಬದಲಾಯಿಸಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖಂಡರಾದ ಜಗದೀಶ ಶೇಗುಣಸಿ, ಅರವಿಂದ ಕುಲಕರ್ಣಿ, ರಮೇಶ ದೇಸಾಯಿ, ಹೂವಪ್ಪ ಹುಕ್ಕೇರಿ, ಪ್ರಭು ಬಸ್ತವಾಡ, ಸುರೇಶ ನಾವಲಗಿ, ಪ್ರೇಮಾನಂದ ದೇಸಾಯಿ, ಶೇಖಪ್ಪ ದೇಸಾಯಿ, ರಂಗಪ್ಪ ದೇಸಾಯಿ, ಸಿದ್ರಾಯ ಜಂಗಮಶೆಟ್ಟಿ, ಲಕ್ಷ್ಮಣ ಕೊಕಟನೂರ, ರಮೇಶ ತಂಬಾಕೆ, ಈರಪ್ಪ ಕೋಷ್ಠಿ, ಏಕನಾಥ ಕೊಕಟನೂರ, ಸಂಗಪ್ಪ ಅಂಬಲಿ, ಸುರೇಶ ಕದಂ, ಲಕ್ಷ್ಮಣ ಮೋಹಿತೆ, ಶೇಖರ ಅಂಬಲಿ, ಸಂಗಪ್ಪ ಮುಂಡಗನೂರ, ರುದ್ರಪ್ಪ ವಟವಟಿ, ಧರೆಪ್ಪ ತಿಕೋಟಿ, ಗುರಪ್ಪ ನಾವಲಗಿ, ಭೂತಾಳಿ ಕುಚನೂರ, ಗೈಬುಸಾಬ ಕೌಜಲಗಿ, ದಾದಾಪೀರ ಮಾಚಕನೂರ, ಆನಂದ ಅಂಬಲಿ, ಮಾಂತೇಶ ಹುಕ್ಕೇರಿ, ನವೀನ ದೇಸಾಯಿ, ಶಿವಲಿಂಗಪ್ಪ ಹುಕ್ಕೇರಿ, ಸಚಿನ ಪಂಚಗಾವಿ, ಮಹಾದೇವ ಪೂಜಾರಿ, ನೀತಿನ ಘೋಲಪ್ಪ, ಜೋತಿಬಾ ಜಗದಾಳೆ, ಸತೀಶ ಮೊಹಿತೆ ಇತರರಿದ್ದರು.