ಬಸವನಬಾಗೇವಾಡಿ ಪಟ್ಟಣದ ತಾ.ಪಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ತಾ.ಪಂ ಇಒ ವೆಂಕಟೇಶ ವಂದಾಲ ಮಾತನಾಡಿದರು. ವಸಂತ ರಾಠೋಡ, ಸುನೀಲ ಮದ್ದೀನ ಇತರರಿದ್ದರು. 
ವಿಜಯಪುರ

ರೈತರು ಕಡ್ಡಾಯವಾಗಿ ಬೆಳೆ ವಿಮೆ ಕಟ್ಟಲು ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ಪಿ. ಬಿರಾದಾರ ಸಲಹೆ
  • ಅಧಿಕಾರಿಗಳ ಸಾಮಾನ್ಯ ಸಭೆ
ಬಸವನಬಾಗೇವಾಡಿ: ರೈತರು ಈ ವರ್ಷ ತಮ್ಮ ಜಮೀನಿನಲ್ಲಿ ಹತ್ತಿ ಬೆಳೆಗೆ ಹೆಚ್ಚು ಒತ್ತು ನೀಡಿದ್ದಾರೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ಪಿ. ಬಿರಾದಾರ ಹೇಳಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ಕಳೆದ ಬಾರಿ ಹೆಚ್ಚಿನ ರೈತರು ತಮ್ಮ ಜಮೀನಿನಲ್ಲಿ ತೊಗರಿ ಬೆಳೆ ಬಿತ್ತನೆಗೆ ಮಾಡಿದರು. ಆದರೆ ಈ ಬಾರಿ ಹೆಚ್ಚಿನ ಇಳಿವರಿಗಾಗಿ ರೈತರು ಬೆಳೆ ಪರಿವರ್ತನೆ ಉದ್ದೇಶದಿಂದ ಹತ್ತಿ ಬೆಳೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ತಿಳಿಸಿದರು.
ಈ ವರ್ಷ ಮುಂಗಾರಿ ಹಂಗಾಮಿ ಮಳೆಯು ಬಸವನಬಾಗೇವಾಡಿ, ಹೂವಿನಹಿಪ್ಪರಗಿ, ಮನಗೂಳಿ ಹೋಬಳಿಗಳಿಗೆ ವಾಡಿಕೆಗಿಂತ ಶೇ.30ರಷ್ಟು ಹೆಚ್ಚಳವಾಗಿದೆ. ಕೊಲ್ಹಾರ ಹೋಬಳಿಗೆ ಶೇ.8ರಷ್ಟು ಹೆಚ್ಚಳವಾಗಿದೆ. ನಿಡಗುಂದಿ ಹೋಬಳಿಗೆ ಮಾತ್ರ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ಈಗ ಬಹುತೇಕ ರೈತರು ಬಿತ್ತನೆ ಮಾಡಿದ್ದಾರೆ ಈ ವಾರದಲ್ಲಿ ಉತ್ತಮ ಮಳೆಯಾದರೆ ಬೆಳೆ ಚೆನ್ನಾಗಿ ಬರುತ್ತದೆ ಎಂದು ಹೇಳಿದ ಅವರು ರೈತರು ಕಡ್ಡಾಯವಾಗಿ ತಮ್ಮ ಬೆಳೆಗಳಿಗೆ ಅನುಗುಣವಾಗಿ ಬೆಳೆ ವಿಮೆ ಕಟ್ಟಬೇಕು ಒಂದು ವೇಳೆ ಮಳೆ ಕೊರತೆಯಿಂದ ಬೆಳೆ ಹಾನಿಯಾದರೆ ರೈತರು ಸಂಕಷ್ಟದಿಂದ ಹೊರಬರಲು ಸಾಧ್ಯವಾಗುತ್ತದೆ ಆ ನಿಟ್ಟಿನಲ್ಲಿ ಬೆಳೆ ವಿಮೆಯನ್ನು ಕಡ್ಡಾಯವಾಗಿ ರೈತರು ಕಟ್ಟಬೇಕೆಂದು ಹೇಳಿದರು.
ತಾ.ಪಂ ಇಒ ವೆಂಕಟೇಶ ವಂದಾಲ, ತಾಲೂಕಿನಲ್ಲಿರುವ ಸ್ಮಶಾನ ಜಾಗೆಗಳು ಒತ್ತುವರಿಯಾಗುತ್ತಿವೆ. ಅದನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಸೂಚನೆ ನೀಡಿದರು.
ಕ್ಷಯ ರೋಗದ ಬಗ್ಗೆ ತಾಲೂಕಿನಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡಬೇಕು. ಗ್ರಾ.ಪಂ ಸಹಯೋಗದೊಂದಿಗೆ ಕ್ಷಯ ರೋಗದ ಕಾರ್ಯಾಗಾರ ಮಾಡಿದರೆ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.
ಬಿಇಒ ವಸಂತ ರಾಠೋಡ ಮಾತನಾಡಿ, ತಾಲೂಕಿನಲ್ಲಿ ಸರ್ಕಾರವೇ ಸರ್ಕಾರಿ ಶಾಲೆಗಳ ಕಟ್ಟಡಗಳ ಸರ್ವೇ ಮಾಡಿಸಿದ್ದು, ಅದರ ಪ್ರಕಾರ 129 ಶಾಲೆಗಳು ಹಳೆ ಕಟ್ಟಡ ಇದ್ದು, ಅವುಗಳನ್ನು ತೆರವುಗೊಳಿಸಲು ನೂತನ ಕಟ್ಟಡ ನಿರ್ಮಾಣ ಮಾಡಬೇಕು. 110 ಶಾಲೆಗಳು ಸಣ್ಣ ಪುಟ್ಟ ಕೆಲಸ ಕಾರ್ಯಗಳು ಇವೆ, 105 ಹೆಚ್ಚಿನ ರಿಪೇರಿಗಳಿವೆ ಎಂದು ವರದಿ ಮಾಡಿಕೊಂಡಿದ್ದು ಹಳೆ ಕಟ್ಟಡ ಶಾಲೆಗಳನ್ನು ಶೀಘ್ರದಲ್ಲಿ ತೆರವುಗೊಳಿಸುವ ಕಾರ್ಯವಾಗಲಿದೆ. ಇನ್ನೂಳಿದ ಶಾಲೆಗಳ ರಿಪೇರಿಗಳು ಆಗಲಿವೆ ಎಂದು ತಿಳಿಸಿದರು.
ಕೊಲ್ಹಾರ ತಾ.ಪಂ ಇಒ ಸುನೀಲ ಮದ್ದೀನ, ನಿಡಗುಂದಿ ತಾ.ಪಂ ಇಒ ವೆಂಕಟೇಶ ವಂದಾಲ, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.