ದೇವರಹಿಪ್ಪರಗಿ ತಾಲೂಕು ನಿವತ್ತ ನೌಕರರ ಸಂಘದ ಪದಾಧಿಕಾರಿಗಳು ಪಿಂಚಣಿ ಹಾಗೂ ಕುಟುಂಬ ಪಿಂಚಣಿಗೆ ಸಂಬಂಧಿಸಿದಂತೆ ಬೇಡಿಕೆ ಈಡೇರಿಸಲು ಆಗ್ರಹಿಸಿ, ತಹಸೀಲ್ದಾರ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು. ಎಂ.ಎಚ್.ಪಟೇಲ, ಎಸ್.ವಿ. ಆಲಾಳಮಠ, ಕೆ.ಸಿ. ಮಠ ಮತ್ತಿತರರಿದ್ದರು. 
ವಿಜಯಪುರ

ಕುಟುಂಬ ಪಿಂಚಣಿ ಬದಲಾವಣೆ ಸಲ್ಲ

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಘಟಕದ ಅಧ್ಯಕ್ಷ ಸಿ.ಕೆ. ಕುದರಿ ಒತ್ತಾಯ
  • ನಿವೃತ ನೌಕರ ಸಂಘದಿಂದ ಮನವಿ
ದೇವರಹಿಪ್ಪರಗಿ: ಸರ್ಕಾರ ಪಿಂಚಣಿದಾರರ ಜೀವನ ಸುಗಮಗೊಳಿಸಲು ಈಗ ಇರುವ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ಯಥಾಸ್ಥಿತಿ ಮುಂದುವರೆಸಬೇಕು ಎಂದು ನಿವೃತ್ತಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಕೆ. ಕುದರಿ ಒತ್ತಾಯಿಸಿದರು.
ಪಟ್ಟಣದ ತಹಸೀಲ್ದಾರ ನಿಂಗಪ್ಪ ಬಿರಾದಾರ ಅವರಿಗೆ ಬುಧವಾರ ನಿವೃತ್ತಿ ನೌಕರರ ವಿವಿಧ ಬೇಡಿಕೆ ಈಡೇರಿಸಲು ತೋಳಿಗೆ ಕಪ್ಪು ಪಟ್ಟಿ ಧರಿಸಿ, ಮನವಿ ಸಲ್ಲಿಸಿ ಮಾತನಾಡಿದರು.
ಪಿಂಚಣಿ ಹಾಗೂ ಕುಟುಂಬ ಪಿಂಚಣಿಗೆ ಸಂಬಂಧಿಸಿದ ವಿವಿಧ ಬೇಡಿಕೆ ಈಡೇರಿಸಬೇಕು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನ ಅಧಿವೇಶನದಲ್ಲಿ ನಿವತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಮುಂಬರುವ ದಿನಗಳಲ್ಲಿ ಯಾವುದೇ ವೇತನ ಪರಿಷ್ಕರಣೆ ಹಾಗೂ ವರ್ಷದಲ್ಲಿ ಎರಡು ಬಾರಿ ನೀಡುತ್ತಿರುವ ತುಟ್ಟಿ ಭತ್ಯೆ ನೀಡಲು ಸಾಧ್ಯವಾಗುವುದಿಲ್ಲ ಎಂಬ ವಿಷಯ ಮಂಡಿಸಿರುವುದು ನಿವೃತ್ತಿ ನೌಕರರು ಹಾಗೂ ಕುಟುಂಬದವರಿಗೆ ಆಘಾತಕಾರಿ ವಿಷಯವಾಗಿದೆ. ಹೀಗೆ ಮಾಡುವುದರಿಂದ ನಿವೃತ್ತಿ ನೌಕರರು ಹಾಗೂ ಕುಟುಂಬ ಪಿಂಚಣಿದಾರರ ಕುಟುಂಬಗಳು ಬೀದಿ ಪಾಲಾಗುತ್ತವೆ. ಅಲ್ಲದೆ ಈ ವಿಷಯದ ಕುರಿತು ಸರ್ವೋಚ್ಛ ನ್ಯಾಯಾಲಯ ಪಿಂಚಣಿ ಭಿಕ್ಷೆಯಲ್ಲ ಅದನ್ನು ಪಡೆಯುವುದು ನಿವೃತ್ತಿ ನೌಕರರ ಹಕ್ಕು ಎಂದು ತೀರ್ಪು ನೀಡಿದೆ ಎಂದರು.

ಎಂ.ಎಚ್. ಪಟೇಲ, ಎಸ್.ವಿ. ಆಲಾಳಮಠ, ಕೆ.ಸಿ. ಮಠ, ಎಂ.ಆರ್. ಶಿರಸಂಗಿಮಠ, ಬಿ.ಎನ್. ಬಬಲೇಶ್ವರ, ಎ.ಸಿ. ಲೋಗಾಂವಿ, ಪಿ.ಎಸ್. ಮಿಂಚನಾಳ, ಕೆ.ಎಮ್. ನಂದಿ, ಎನ್.ಎಸ್. ಹರಸೂರ, ವೈ.ಜಿ. ತಾವರಖೇಡ, ಬಿ.ವೈ.ಹೊಸಳ್ಳಿ, ಲಕ್ಷ್ಮಣ ಮಡ್ಡೆಪ್ಪಗೋಳ, ಬಿ.ಜಿ.ಪಾಟೀಲ, ಬಿ.ಎಸ್.ಉತ್ನಾಳ ಮತ್ತಿತರರಿದ್ದರು.