ವಿಜಯಪುರ ನಗರದ ನೂತನ ಪ್ರವಾಸಿ ಮಂದಿರದಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸುದ್ದಿಗೋಷ್ಠಿ ನಡೆಸಿದರು.  
ವಿಜಯಪುರ

ಭೀಮೆಗೆ ನೀರು ಹರಿಸಲು ಮಹಾ ಮೊಂಡುತನ, ಶಾಸಕ ಯಶವಂತರಾಯಗೌಡರಿಂದ ಜಲಯುದ್ದ ಘೋಷಣೆ

ಬರದ ಭೀಕರತೆಗೆ ಬರಿದಾದ ಭೀಮೆ * ಕಾನೂನು ಹೋರಾಟಕ್ಕೆ ಸಿದ್ಧತೆ

ವಿಜಯಪುರ: ಭೀಕರ ಬರದಿಂದಾಗಿ ಭೀಮಾ ನದಿ ಸಂಪೂರ್ಣ ಬರಿದಾಗಿದ್ದು, ನೈಸರ್ಗಿಕ ಹರಿವಿಗೂ ಮೊಂಡುತನ ಪ್ರದರ್ಶಿಸುತ್ತಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಕಾನೂನು ಸಮರಕ್ಕೆ ಸಿದ್ಧತೆ ನಡೆಸಿರುವುದಾಗಿ ತಿಳಿಸಿದರು.

ಮಹಾರಾಷ್ಟ್ರ ಭಾಗದ ಭೀಮಾ ನದಿ ಪಾತ್ರದಲ್ಲಿ 27 ಟಿಎಂಸಿ ನೀರಿದೆ, ಕನಿಷ್ಠ 15 ಟಿಎಂಸಿಯಾದರೂ ಕರ್ನಾಟಕಕ್ಕೆ ಹರಿಸಬೇಕಿದೆ. ಆದರೆ ನಮ್ಮ ಪಾಲಿನ ನೀರು ಬಿಡಲು ಸಹ ಮೊಂಡುತನ ಪ್ರದರ್ಶಿಸುತ್ತಿರುವ ಹಿನ್ನೆಲೆ ಕರ್ನಾಟಕದ ಹಳ್ಳಿಗಳು ಸಂಕಷ್ಟಕ್ಕೆ ಸಿಲುಕಿವೆ. ಕಬ್ಬು ಬೆಳೆ ಸಂಪೂರ್ಣ ಒಣಗುತ್ತಿದೆ. ಮಹಾರಾಷ್ಟ್ರಕ್ಕಾದರೂ ಸೇರ್ಪಡೆಯಾಗಿದ್ದರೆ ನೀರು ಸಿಗುತ್ತಿತ್ತೇನೋ ಎಂಬ ಗಡಿಭಾಗದ ಜನರ ಆಕ್ರೋಶ ಭರಿತ ಚುಚ್ಚುಮಾತುಗಳು ಪರಿಸ್ಥಿತಿಯ ಗಂಭೀರತೆಯನ್ನು ಅನಾವರಣಗೊಳಿಸುತ್ತಿವೆ. ಹೀಗಾಗಿ ಮುಂಬರುವ ಅಧಿವೇಶನದಲ್ಲಿ ಈ ಕುರಿತು ಧ್ವನಿ ಮೊಳಗಿಸುವುದರ ಜೊತೆಗೆ ಕಾನೂನು ಹೋರಾಟಕ್ಕೆ ಬೇಕಾದ ಸಿದ್ಧತೆ ಸಹ ಕೈಗೊಳ್ಳುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಈ ಹಿಂದೆ ಮಹಾರಾಷ್ಟ್ರದ ಜತ್ತ, ಸಾಂಗಲಿ ಮತ್ತಿತರ ಭಾಗದ ಹಳ್ಳಿಗಳು ಕುಡಿಯುವ ನೀರಿಗಾಗಿ ಕರ್ನಾಟಕಕ್ಕೆ ಸೇರ್ಪಡೆಗೊಳಿಸಲು ಸ್ಥಳೀಯ ಸಂಸ್ಥೆಗಳಲ್ಲಿ ಠರಾವು ಮಂಡಿಸುತ್ತಿದ್ದವು. ಆ ಪರಿಸ್ಥಿತಿ ಈಗ ಕರ್ನಾಟಕ ಭಾಗದ ಹಳ್ಳಿಗಳಿಗೆ ಬಂದಿದೆ ಎಂದು ಸಹಜವಾಗಿಯೇ ಪರಿಸ್ಥಿತಿಯ ಗಂಭೀರತೆ ತಿಳಿಸಿಕೊಡಲು ಕೆಡಿಪಿ ಸಭೆಯಲ್ಲಿ ಗಮನ ಸೆಳೆದಿದ್ದೆ. ಅಸಲಿಗೆ ಕರ್ನಾಟಕದ ಹಳ್ಳಿಗಳು ಯಾವುದೇ ಕಾರಣಕ್ಕೂ ಮಹಾರಾಷ್ಟ್ರಕ್ಕೆ ಸೇರ್ಪಡೆ ವಿಚಾರ ಉದ್ಭವಿಸುವುದೇ ಇಲ್ಲ. ಹಾಗೆ ನೋಡಿದರೆ ಈಗಲೂ ಮಹಾರಾಷ್ಟ್ರದ ಹಳ್ಳಿಗಳೇ ಕರ್ನಾಟಕಕ್ಕೆ ಸೇರ್ಪಡೆಗೊಳ್ಳಲೂ ಉತ್ಸುಕವಾಗಿವೆ. ನೀರಿನ ಸಮಸ್ಯೆಯ ಗಂಭೀರತೆಯನ್ನು ತಿಳಿಸಿಕೊಡುವುದಕ್ಕಾಗಿ ಗಡಿಭಾಗದ ಜನ ಆಡಿಕೊಳ್ಳುತ್ತಿರುವ ‘ಮಹಾರಾಷ್ಟ್ರಕ್ಕಾದರೂ ಸೇರ್ಪಡೆಯಾಗಿದ್ದರೆ ನೀರು ಸಿಗುತ್ತಿತ್ತು’ ಎಂಬ ಪದ ಬಳಕೆ ಮಾಡಿರುವುದಾಗಿ ತಿಳಿಸಿದರು.

ಮಹಾರಾಷ್ಟ್ರ ನಡೆಗೆ ಆಕ್ರೋಶ

ಮಹಾರಾಷ್ಟ್ರ ನೀರು ಹರಿಸುವ ನಿಟ್ಟಿನಲ್ಲಿ ಅತ್ಯಂತ ನೋವು ತರಿಸುವ ನಿರ್ಧಾರ ಕೈಗೊಳ್ಳುತ್ತಿದೆ. ದಸೂರ, ಉಮರಜ ಭಾಗಕ್ಕೂ ನೀರು ತಲುಪದಂತೆ ಮಹಾ ನೋಡಿಕೊಳ್ಳುತ್ತಿದೆ. ನದಿಯ ನೈಸರ್ಗಿಕ ಉಳಿವಿಗಾದರೂ 15 ಟಿಎಂಸಿ ನೀರು ಅವರು ಕೊಡಲೇಬೇಕು, ಈ ನಿಟ್ಟಿನಲ್ಲಿ ಒಡಂಬಡಿಕೆಯೂ ಇದೆ, ಆದರೆ ಈ ಒಡಂಬಡಿಕೆಯೇ ಆಗಿಲ್ಲ, ನೈಸರ್ಗಿಕ ಹರಿವಿಗೆ ಇದು ಸೀಮಿತ ಎಂಬ ಮಹಾರಾಷ್ಟ್ರ ವಾದದಲ್ಲಿ ಯಾವುದೇ ಅರ್ಥವಿಲ್ಲ ಎಂದರು.

ಈ ಎಲ್ಲ ಸಮಸ್ಯೆ ಕಲಬುರಗಿ, ವಿಜಯಪುರ ಮೊದಲಾದ ಜಿಲ್ಲೆಗಳಿಗೆ ದೊಡ್ಡ ಹೊಡೆತ ಕೊಡುತ್ತಿದೆ, ಹೀಗಾಗಿ ಈ ವಿಷಯವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಹ ಮುತವರ್ಜಿ ವಹಿಸಿದ್ದಾರೆ. ಇದಕ್ಕೊಂದು ತಾರ್ಕಿಕ ಅಂತ್ಯ ಕೈಗೊಳ್ಳಲು ನಾವು ಬದ್ಧರಾಗಿದ್ದೇವೆ ಎಂದರು.

ಕೃಷ್ಣಾ, ಕಾವೇರಿ ನದಿಗಳಂತೆ ಉಪ ನದಿಗಳ ರಕ್ಷಣೆಯೂ ಅಗತ್ಯ. ಕೇಂದ್ರ ಸರ್ಕಾರ ಕೂಡಲೇ ಎಲ್ಲ ರಾಜ್ಯಗಳ ಸಭೆ ಕರೆದು ಜಲ ವಿವಾದ ಪರಿಹರಿಸುವ ನಿಟ್ಟಿನಲ್ಲಿ ಕಳಕಳಿಯ ಹೆಜ್ಜೆ ಇರಿಸಬೇಕು ಹಾಗೂ ರಾಜ್ಯ ಸರ್ಕಾರ ಮಹಾರಾಷ್ಟ್ರ ಜೊತೆ ಸಮನ್ವಯ ಸಾಧಿಸಿ ನೀರು ಹರಿಸುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇರಿಸಬೇಕು ಎಂದರು.

ಮುನ್ನೆಚ್ಚರಿಕೆ ಅವಶ್ಯ

ನವೆಂಬರ್‌ನಲ್ಲಿಯೇ ಕುಡಿಯುವ ನೀರಿಗೆ ಸಮಸ್ಯೆ ಉಂಟಾದರೆ ಬರುವ ದಿನಗಳು ಇನ್ನಷ್ಟು ಭೀಕರವಾಗಿರಲಿವೆ. ಇಂಡಿ ಭಾಗದಲ್ಲಿ ಬಹುತೇಕ ಕುಡಿಯುವ ನೀರಿನ ಯೋಜನೆಗಳು ಭೀಮಾನದಿಯನ್ನೇ ಅವಲಂಬಿಸಿವೆ. ಹೀಗಾಗಿ ನೀರು ಹಂಚಿಕೆ ವೈಜ್ಞಾನಿಕವಾಗಿ ಆಗಬೇಕು. ಇಲ್ಲವಾದಲ್ಲಿ ಹಾಹಾಕಾರ ಉಂಟಾಗಲಿದೆ. ಭೀಮಾ ನದಿ ತೀರದ ಜನ ಕೆಲವೊಮ್ಮೆ ಭೀಕರ ಬರಕ್ಕೆ ಇನ್ನೊಮ್ಮೆ ಪ್ರವಾಹಕ್ಕೆ ತತ್ತರಿಸುತ್ತಾರೆ. ಒಂದಿಲ್ಲಾ ಒಂದು ರೀತಿಯಲ್ಲಿ ಪ್ರಾಕೃತಿಕ ಅಸಮತೋಲನಕ್ಕೆ ಒಳಗಾಗುತ್ತಲೇ ಇದ್ದಾರೆ. ಹೀಗಾಗಿ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.

ವಿಜಯಪುರ ಜಿಲ್ಲೆಯನ್ನು 371 ಜೆ ಅಡಿಯಲ್ಲಿ ಸೇರ್ಪಡೆ ಮಾಡಲು ಮುದ್ದೇಬಿಹಾಳ ಮಾಜಿ ಶಾಸಕರಾಗಿದ್ದ ದಿ.ಎಂ.ಎಂ. ಸಜ್ಜನ ಕೊನೆ ಉಸಿರಿರುವರೆಗೂ ಹೋರಾಟ ಮಾಡಿದರು, ಅವರ ಹೋರಾಟಕ್ಕೆ ನಾವು ಕೈ ಜೋಡಿಸಬೇಕಿತ್ತು, ಈ ವಿಷಯವಾಗಿ ಈಗ ಜನಾಂದೋಲನ ನಡೆಯುತ್ತಿದೆ, ಭೌಗೋಳಿಕವಾಗಿ, ನೈಸರ್ಗಿಕವಾಗಿ ಹಾಗೂ ಜನಜೀವನ ಶೈಲಿ ಕಲಬುರ್ಗಿಗೆ ಆಪ್ತವಾಗಿದೆ, ನ್ಯಾಯಾಲಯ ವ್ಯಾಪ್ತಿ ಕಲಬುರಗಿ, ಸಾರಿಗೆ ಇಲಾಖೆ ವ್ಯಾಪ್ತಿ ಕಲಬುರಗಿ ವಿಭಾಗಕ್ಕೆ ಸೇರಿದೆ, ಹೀಗಿದ್ದರೂ 371 ಜೆ ಅಡಿಯಲ್ಲಿ ನಾವು ಸೇರದೇ ಹೋದೆವು ಎಂಬ ಅಳುಕು, ನೋವು ಜನತೆಯನ್ನು ಕಾಡುತ್ತಿದೆ ಎಂದರು.