ವಿಜಯಪುರದ ಅಗ್ನಿಶಾಮಕ ಇಲಾಖೆ. ಒಳಚಿತ್ರದಲ್ಲಿ ಸಾರ್ವಜನಿಕರ ಕಾರ್ಯಾಚರಣೆ ವೇಳೆ ವಿಡಿಯೋದಲ್ಲಿ ಸೆರೆ ಸಿಕ್ಕ ಅಧಿಕಾರಿಗಳು.  
ವಿಜಯಪುರ

ದಸರಾ ಹೆಸರಲ್ಲಿ ವಸೂಲಿ ದರ್ಬಾರ್ ? ಎದ್ನೋ...ಬಿದ್ನೋ... ಓಡಿದ ಅಧಿಕಾರಿ

ಅಗ್ನಿಶಾಮಕ ಇಲಾಖೆಯಲ್ಲಿ ಅಂಧಾದುಂದಿ * ಸಾರ್ವಜನಿಕರಿಂದ ಗುರುತರ ಆರೋಪ

ವಿಜಯಪುರ: ದುಡ್ಡು ಏಕೆ ವಸೂಲಿ ಮಾಡುತ್ತೀರಿ ಎಂದರೆ ಖುಷಿಗೆ ಅಂತೆ, ಜೇಬಿನಿಂದ ಹಣ ತೆಗೆಯಿರಿ ಎಂದರೆ ಎದ್ನೋ ಬಿದ್ನೋ ಅಂತ ಓಡುವ ಅಧಿಕಾರಿ ವರ್ತನೆ ಸರ್ಕಾರಿ ವ್ಯವಸ್ಥೆಯನ್ನೇ ನಾಚಿಕೆಗೀಡು ಮಾಡುತ್ತಿದೆಯಲ್ಲದೇ ಅಗ್ನಿ ಶಾಮಕ ಇಲಾಖೆಯನ್ನು ಬೆತ್ತಲುಗೊಳಿಸುತ್ತಿದೆ !

ಕಳೆದೆರಡು ದಿನಗಳ ಹಿಂದೆ ವಿಜಯಪುರ ನಗರದಲ್ಲಿ ಕಂಡು ಬಂದಿರುವ ಈ ಘಟನೆ ದಸರಾ ಹೆಸರಲ್ಲಿ ಅಧಿಕಾರಿಗಳ ದರ್ಬಾರ್ ಹೇಗೆಲ್ಲ ನಡೆಯುತ್ತಿದೆ ಎಂಬುದನ್ನು ಬಯಲು ಮಾಡಿದೆ. ಖುಷಿ ಹೆಸರಲ್ಲಿ ಹಣ ವಸೂಲಿ ಮಾಡುವುದು ಹೊಸದೇನಲ್ಲವಾದರೂ ಸಾರ್ವಜನಿಕರ ಕೈಯಲ್ಲಿ ಸಿಕ್ಕು ಬಿದ್ದು ಗುಳ್ಳೆ ನರಿಯಂತೆ ಓಡುವುದಿದೆಯಲ್ಲ ಅದು ಆ ಸ್ಥಿತಿ ಯಾವ ವೈರಿಗೂ ಬೇಡ. ಇಡೀ ಇಲಾಖೆಯೇ ತಲೆತಗ್ಗಿಸುವಂಥದ್ದು. ತೀವ್ರ ನಾಚಿಕೆಗೇಡಿನ ಸಂಗತಿ.

ಖಾಸಗಿ ಹೊಟೇಲ್‌ನಲ್ಲಿ ಕುಳಿತು ಚಹಾ ಹೀರುತ್ತಾ ಜೇಬಿನಲ್ಲಿ ಹಣ ಇರಿಸಿಕೊಂಡಿದ್ದ ಅಗ್ನಿಶಾಮಕ ಇಲಾಖೆ ಅಧಿಕಾರಿಗಳನ್ನು ಬೆನ್ನಟ್ಟಿದ ಸಾರ್ವಜನಿಕರು ಹಣ ವಸೂಲಿಗೆ ಸಂಬಂಧಿಸಿದಂತೆ ವಿಚಾರಿಸಲಾಗಿ ಕಾಲಿಗೆ ಬುದ್ದಿ ಹೇಳತೊಡಗುತ್ತಾರೆ. ಅದರಲ್ಲೊಬ್ಬ ಖುಷಿಗೆ ಎಂದು ಹೇಳಿದರೆ ಇನ್ನೊಬ್ಬ ನಾನು ಯಾವುದೇ ತೆರನಾದ ಹಣ ಪಡೆದಿಲ್ಲವೆನ್ನುತ್ತಾನೆ. ಆದರೆ, ಅಂಗಿಯ ಜೇಬಿನಿಂದ ಕಟ್ಟೊಂದು ನಾನಿಲ್ಲಿದ್ದೇನೆ ಎನ್ನುವಂತೆ ಕಣ್ಣಿಗೆ ರಾಚುತ್ತದೆ. ಇದ್ದಕ್ಕಿದ್ದಂತೆ ಚಹಾ ಕಪ್ಪು ಕೆಳಗಿರಿಸಿ, ಇರುವ ಬರುವ ಶಕ್ತಿಯನ್ನೆಲ್ಲ ಬಳಸಿ, ಏದುಸಿರುವ ಬಿಡುತ್ತಾ ಓಡುವ ಅಧಿಕಾರಿ ಅಕ್ಷರಶಃ ಕಳ್ಳನಂತೆ ಭಾಸವಾಗುತ್ತಾನೆ.

ಪ್ರತಿ ವರ್ಷ ದಸರಾ ಬರುತ್ತಿದ್ದಂತೆ ಇಂಥದ್ದೊಂದು ದಂಧೆ ಕುರಿತು ವ್ಯಾಪಕವಾಗಿ ಕೇಳಿ ಬರುತ್ತದೆ. ಖುಷಿ ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಲಾಗುತ್ತದೆ ಎಂಬ ಆರೋಪ ಮೊದಲಿನಿಂದಲೂ ಇದೆ. ಇದರಲ್ಲಿ ಮೇಲಾಧಿಕಾರಿಗಳ ಕೈವಾಡ ಇಲ್ಲದೇ ಇರಲು ಹೇಗೆ ಸಾಧ್ಯ? ಅವರ ನಿರ್ದೇಶನವಿಲ್ಲದೇ ಹಣ ವಸೂಲಿಗೆ ಇಳಿಯಲು ಸಾಧ್ಯವೇ? ಸದ್ಯ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿರುವ ಅಧಿಕಾರಿಗಳು ‘ಖುಷಿ’ ಪದ ಬಳಸಿರುವುದು ಗಮನಿಸಿದಾಗ ಇಂಥ ಎಷ್ಟು ‘ಖುಷಿ’ ಈಗಾಗಲೇ ಆಗಿರಬೇಕು ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಾರೆ. ನಿಜಕ್ಕೂ ಇದೊಂದು ಹೇಯ ಕೃತ್ಯ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ನಿಶಾಮಕ ಜಿಲ್ಲಾ ಅಧಿಕಾರಿ ಶಶಿಕಾಂತ ನೀಲಕರ ಅವರಿಗೆ ವಿಡಿಯೋದಲ್ಲಿರುವ ಫೋಟೊ ಕಳುಹಿಸಿ ನಿಜಕ್ಕೂ ಇವರು ಅಗ್ನಿಶಾಮಕ ಇಲಾಖೆ ಅಧಿಕಾರಿಗಳೇ ಎಂದು ‘ವಿಜಯವಾಣಿ’ ಮಾಹಿತಿ ಪಡೆಯಲಾಗಿ ಅಧಿಕಾರಿಗಳಿಂದ ‘ಹೌದು’ ಎಂಬ ಪ್ರತಿಕ್ರಿಯೆ ಬಂದಿತಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಯಾವುದೇ ಮಾಹಿತಿ ಇಲ್ಲವೆಂದರು. ಆದರೆ, ಈ ಪ್ರಕರಣದಲ್ಲಿ ಕೆಳಹಂತದಿಂದ ಮೇಲಿನ ಹಂತದವರೆಗಿನ ಅಧಿಕಾರಿಗಳ ಕೈವಾಡವಿದ್ದು, ಕೂಲಂಕುಷವಾಗಿ ತನಿಖೆ ಕೈಗೊಳ್ಳಬೇಕೆಂಬ ಒತ್ತಾಯ ಬಲವಾಗಿದೆ.