ಬಸವನಬಾಗೇವಾಡಿ ಪಟ್ಟಣದಲ್ಲಿ ವಿದ್ಯಾರ್ಥಿಗಳು ಹಾಗೂ ಸಂಘಟನೆಯ ಪದಾಧಿಕಾರಿಗಳು ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಶೇಖರ ಗೊಳಸಂಗಿ, ರವಿ ರಾಠೋಡ, ಚಂದ್ರಶೇಖರಗೌಡ ಪಾಟೀಲ, ಪ್ರಶಾಂತ ಮುಂಜಾನೆ, ಜಟ್ಟಿಂಗರಾಯ ಮಾಲಗಾರ, ಭದ್ರಣ್ಣ ಮಣ್ಣೂರ, ಪ್ರವೀಣ ಪೂಜಾರಿ ಇತರರಿದ್ದರು. 
ವಿಜಯಪುರ

ಪರೀಕ್ಷೆ ಅಕ್ರಮದಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ

ಪ್ರಮುಖ ಮುಖ್ಯಾಂಶಗಳು

  • ಎನ್‌ಟಿಎ ರದ್ದತಿಗೆ ಆಗ್ರಹಿಸಿ ರಾಷ್ಟ್ರೀಯ ಬಸವಸೈನ್ಯದಿಂದ ಬೃಹತ್ ಪ್ರತಿಭಟನೆ
  • ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
ಬಸವನಬಾಗೇವಾಡಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು ರದ್ದುಗೊಳಿಸಬೇಕು ಹಾಗೂ ಪರೀಕ್ಷಾ ಅಕ್ರಮಗಳ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಬಸವಸೈನ್ಯದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ವೀರರಾಣಿ ಕಿತ್ತೂರ ಚನ್ನಮ್ಮಳ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ವಿದ್ಯಾರ್ಥಿಗಳು ಹಾಗೂ ಸಂಘಟನೆ ಪದಾಧಿಕಾರಿಗಳು ಮೆರವಣಿಗೆ ನಡೆಸಿ ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಕೇಂದ್ರ ಸರ್ಕಾರದ ಪರೀಕ್ಷಾ ವ್ಯವಸ್ಥೆಯ ವೈಫಲ್ಯವನ್ನು ಖಂಡಿಸಲಾಯಿತು.
ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗುತ್ತಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ವಿಶ್ವಾಸ ಮತ್ತು ಪಾರದರ್ಶಕತೆ ಕಾಪಾಡುವಲ್ಲಿ ಎನ್‌ಟಿಎ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿವೆ ಎಂದು ಆರೋಪಿಸಿದರು.
ದೆಹಲಿಯಲ್ಲಿ ಶೈಕ್ಷಣಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಬಸವಸೈನ್ಯ ಸಂಪೂರ್ಣ ಬೆಂಬಲ ನೀಡಲಿದೆ. ಎನ್‌ಟಿಎಯನ್ನು ರದ್ದುಗೊಳಿಸಿ ಪಾರದರ್ಶಕ ಹೊಸ ಪರೀಕ್ಷಾ ವ್ಯವಸ್ಥೆ ಜಾರಿಗೆ ತರಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯ ಬಳಿಕ ಶಿರಸ್ತೇದಾರ ರಾಜು ಹಾದಿಮನಿ ಅವರಿಗೆ ವಿದ್ಯಾರ್ಥಿನಿ ರೇಣುಕಾ ಹಟ್ಟಿ ಅವರು ಮನವಿ ನೀಡಿದರು. ಆನಂದ ವನರೊಟ್ಟಿ, ಸಂಗಮೇಶ ಜಾಲಗೇರಿ, ದ್ಯಾವನಗೌಡ ಪಾಟೀಲ, ಬಸವರಾಜ ಲಮಾಣಿ, ರೇಣುಕಾ ಹಟ್ಟಿ, ಸಾನಿಯಾ ನದಾಫ್, ಸಂಜನಾ ಪಾಟೀಲ, ಐಶ್ವರ್ಯ ಬಡಿಗೇರ, ಲಕ್ಷ್ಮಿ ಜಾಲಗೇರಿ, ಪದಾಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.