ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಜಿಪಂ ಸಿಇಒ ರಿಷಿ ಆನಂದ, ಬದ್ರುದ್ದಿನ್ ಸೌದಾಗರ್ ಇತರರಿದ್ದಾರೆ. 
ವಿಜಯಪುರ

ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ, ಅಧಿಕಾರಿಗಳಿಗೆ ಡಿಸಿ ಡಾ.ಆನಂದ ಕೆ ಖಡಕ್ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ
  • ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಿಕ್ಕೆ ಕ್ರಮ
  • ಜಲಮೂಲಗಳ ಪುನಃಶ್ಚೇತನ ಕಾರ್ಯಕ್ರಮ
  • ಬೀದಿ ನಾಯಿಗಳ ಹಾವಳಿಗೆ ಕಡಿವಾಣ
ವಿಜಯಪುರ: ‘ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಸಮಸ್ಯೆ ಉಲ್ಬಣಿಸಿದರೆ ಆಯಾ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಇತ್ಯರ್ಥಪಡಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಸೂಚನೆ ನೀಡಿದರು.
ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ಅಮೃತ ಮಿತ್ರ ಹಾಗೂ ಅಮೃತ 2.0 ಉದ್ಯಾನವನ, ಜಲಮೂಲಗಳ ಪುನಃಶ್ಚೇತನ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದರು.

ಕಸ ವಿಲೇವಾರಿ

ಘನ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿರಲಿ. ಕಸ ಮುಕ್ತ ವಾರ್ಡ್‌ಗಳು ನಿರ್ಮಾಣಗೊಳ್ಳಲಿ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಆರಂಭಗೊಂಡ ‘ಕಸ ಕಂಡರೆ ಫೋಟೋ ಕಳಿಸಿ ಅಭಿಯಾನ’ಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಇನ್ನೂ ವ್ಯಾಪಕವಾಗಿ ಈ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಿ, ಸ್ವಚ್ಛ ನಗರವನ್ನಾಗಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಂತೆ, ಜಾತ್ರೆಗಳಲ್ಲಿ ಸಂಗ್ರಹವಾಗುವ ಕಸವನ್ನು ತುರ್ತಾಗಿ ವಿಲೇವಾರಿ ಮಾಡಬೇಕು. ಈಗ ವಿವಿಧ ತಜ್ಞರ ಸಮಿತಿ ರಚನೆಯಾಗಿದ್ದು, ಜಿಲ್ಲೆಯಲ್ಲಿ ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಿಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಬೀದಿ ನಾಯಿಗಳ ಹಾವಳಿಗೆ ಕಡಿವಾಣ

ಬೀದಿನಾಯಿಗಳಿಗೆ ಕಡಿವಾಣಹ ಹಾಕಬೇಕು. ಸರ್ವೋಚ್ಛದ ನ್ಯಾಯಾಲಯ ಆದೇಶಿಸಿದಂತೆ ಸಾರ್ವಜನಿಕ ಸ್ಥಳ, ಸರ್ಕಾರಿ ಕಚೇರಿ, ಆಸ್ಪತ್ರೆ, ಶಾಲಾ-ಕಾಲೇಜು, ಬಸ್ ನಿಲ್ದಾಣ ಹಾಗೂ ಇನ್ನಿತರ ಜನನಿಬಿಡ ಪ್ರದೇಶಗಳಲ್ಲಿರುವ ಬೀದಿ ನಾಯಿಗಳನ್ನು ಗುರುತಿಸಿ ಅವುಗಳಿಗಾಗಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಬೇಕು. ತಾತ್ಕಾಲಿಕ ಪರಿಹಾರವಾಗಿ ಆಶ್ರಯ ತಾಣಕ್ಕೆ ಕಳುಹಿಸಬೇಕು. ಜಿಲ್ಲೆಯ ನಗರ, ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ರೂಪಿಸಿ, ಬೀದಿ ನಾಯಿಗಳ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಬುರಣಾಪುರ ಡಾಗ್ ಶೆಲ್ಟರ್ ಬೇಗ ಆರಂಭಿಸಲು ಕ್ರಮವಹಿಸಬೇಕು. ಜೊತೆಗೆ ಪ್ರತಿ ಸ್ಥಳೀಯ ಸಂಸ್ಥೆಗಳಲ್ಲೂ ಡಾಗ್ ಶೆಲ್ಟರ್ ಕಡ್ಡಾಯವಾಗಿ ಮಾಡಬೇಕು. ಲಸಿಕೆ ಸಾಕಷ್ಟು ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದರು.
ಈಗಾಗಲೇ ಪಶು ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಿದ್ದು ಮಹಾನಗರ ಪಾಲಿಕೆ, ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪಶು ಆಸ್ಪತ್ರೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮ ವಹಿಸಬೇಕು ಎಂದರು.

ಪಿಎಂ ಸ್ವನಿಧಿ ಯೋಜನೆ ಪ್ರಗತಿ

ಪಿಎಂ ಸ್ವನಿಧಿ ಯೋಜನೆಯಡಿ ಪ್ರಗತಿ ಸಾಧಿಸಬೇಕು. ಯಾವುದೇ ಪ್ರಸ್ತಾವನೆಗಳನ್ನು ಬಾಕಿ ಉಳಿಸಿಕೊಳ್ಳಬಾರದು. ಬ್ಯಾಂಕ್ ಕೂಡಾ ಅಂತಹ ಪ್ರಸ್ತಾವನೆ ಬಾಕಿ ಉಳಿಸಿಕೊಳ್ಳಬಾರದೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ ಒದಗಿಸುವ ಈ ಯೋಜನೆಗೆ ಅರ್ಹರು ಪಡೆದುಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಲು ಇದು ಮಹತ್ವದ ಯೋಜನೆಯಾಗಿದೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಗತಿ ಸಾಧಿಸಬೇಕು. ಅರ್ಹರ ಅರ್ಜಿಗಳನ್ನು ವಿಳಂಬ ಮಾಡದೇ, ಅರ್ಜಿ ತಿರಸ್ಕರಿಸದೇ ಅವರಿಗೆ ಅನುಕೂಲ ಮಾಡಿಕೊಡಬೇಕು. ಅರ್ಜಿ ಸಲ್ಲಿಸಿದವರಿಗೆ ವಿನಾಕಾರಣ ತೊಂದರೆಯಾಗದಂತೆ ಮಾನವೀಯ ದೃಷ್ಟಿಯಿಂದ ಕಾರ್ಯ ನಿರ್ವಹಿಸಿ ಎಂದ ಅವರು, ಜನರನ್ನು ಅಲೆದಾಡಿಸಬಾರದು. ಅವರು ವ್ಯಾಪಾರವನ್ನೇ ಅವಲಂಬಿಸಿರುತ್ತಾರೆ. ಅವರನ್ನು ಅಲೆದಾಡಿಸದೇ ಅನುಕೂಲ ಮಾಡಿಕೊಡಬೇಕು ಎಂದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಸೇರಿ ಅರ್ಜಿ ಬಾಕಿ ಉಳಿಸಿಕೊಂಡ ಬ್ಯಾಂಕ್‌ನವರೊಂದಿಗೆ ಸಭೆ ನಡೆಸಿ ಮನವರಿಕೆ ಮಾಡಿಕೊಡಬೇಕು ಎಂದರು.
ನೂರು ಜನರು ಭಾಗವಹಿಸುವ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿ ಇದ್ದು, ಡಿಸಿ, ಸಿಇಒ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು, ಎನ್ ಜಿಒ ಒಳಗೊಂಡ ಸಮಿತಿ ಇರಲಿದೆ. ಸಾರ್ವಜನಿಕ ಶೌಚಗೃಹಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.
ಜಿಪಂ ಸಿಇಒ ರಿಷಿ ಆನಂದ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದಿನ್ ಸೌದಾಗರ್, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೀರಯ್ಯ ಸಾಲಿಮಠ, ಜಲಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ಗೋವಿಂದ, ಪರಿಸರ ಅಧಿಕಾರಿ ವಿವೇಕ ಇತರರಿದ್ದರು.