ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ, ಜುಬೇರ ಕೆರೂರ, ಪ್ರಧಾನ ಕಾರ್ಯದರ್ಶಿ ಶಿವರಾಜ ಬಿರಾದಾರ ಇತರರಿದ್ದಾರೆ.
- ಬಿಸಿಲೂರಿನಲ್ಲಿ ಹೆಚ್ಚಿದ ತಾಪಮಾನ
- ಬಸವಳಿಯುತ್ತಿರುವ ಸರ್ಕಾರಿ ನೌಕರರು
- ಸುರೇಶ ಶಡಶ್ಯಾಳ ನೇತೃತ್ವದಲ್ಲಿ ಮನವಿ
ವಿಜಯಪುರ: ಬಿಸಿಲೂರಿನಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟುತ್ತಿದ್ದು, ಸರ್ಕಾರಿ ಕಚೇರಿಗಳ ವೇಳಾ ಪಟ್ಟಿ ಬದಲಾಯಿಸುವಂತೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಮಾತನಾಡಿ, ಜಿಲ್ಲೆಯಲ್ಲಿ ದಿನೇ ದಿನೇ ಬಿಸಿಲು ಹೆಚ್ಚುತ್ತಿದೆ. ಮಧ್ಯಾಹ್ನ ನೆಲ ಕಾದ ಕಾವಲಿಯಂತಾಗುತ್ತಿದೆ. ಈ ವರ್ಷ ಇನ್ನೂ ಬಿಸಿಲಿನ ಪ್ರಖರತೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿರುವ ನೌಕರರು ಕಚೇರಿಗೆ ತೆರಳಲು ತೀವ್ರ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದರು.
ನೌಕರರ, ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲ ಕಚೇರಿ ಹಾಗೂ ಶಾಲೆ-ಕಾಲೇಜುಗಳ ಕರ್ತವ್ಯದ ಅವಧಿಯನ್ನು ಮೇ 31 ರವರೆಗೆ ಬೆಳಗ್ಗೆ 8.30 ರಿಂದ ಮಧ್ಯಾಹ್ನ 1.30 ರವರೆಗೆ ಈ ದಿನದಿಂದಲೇ ಬದಲಾಯಿಸಿ ನೌಕರರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಆದೇಶಿಸಬೇಕೆಂದು ವಿನಂತಿಸಿದರು.
ಸಂಘದ ಖಜಾಂಚಿ ಜುಬೇರ ಕೆರೂರ, ಪ್ರಧಾನ ಕಾರ್ಯದರ್ಶಿ ಶಿವರಾಜ ಬಿರಾದಾರ, ರಾಜ್ಯ ಪರಿಷತ್ ಸದಸ್ಯ ವಿಜಯಕುಮಾರ ಹತ್ತಿ, ಸಿದ್ದು ಹಂಚಿನಾಳ, ನಿಜು ಮೇಲಿನಕೇರ, ರಾಮನಗೌಡ ಪಾಟೀಲ, ಎಸ್.ಎಸ್. ಮಗ್ಗದ, ವಿಜಯಕುಮಾರ ಉಮಶೆಟ್ಟಿ, ಖಾಸಿಂಸಾಬ ಮಸಳಿ, ತಾಂಡುರ ಮೇತ್ರಿ, ಬಸವರಾಜ ರಾಹುಲ ಇತರರಿದ್ದರು.