ವಿಜಯಪುರ ನಗರದಲ್ಲಿ ಕಾರ್ಯ ಮತ್ತು ಪಾಲನೆ ವಿಭಾಗೀಯ ಕಚೇರಿಯ ನೂತನ ಕಟ್ಟಡವನ್ನು ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು. ಶಾಸಕ ವಿಠಲ ಕಟಕದೊಂಡ, ಹೆಸ್ಕಾಂನ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ ಇತರರಿದ್ದಾರೆ. 
ವಿಜಯಪುರ

ನೀರಾವರಿಯಷ್ಟೇ ವಿದ್ಯುತ್‌ಗೂ ಪ್ರಾಮುಖ್ಯತೆ, ಸಚಿವ ಎಂ.ಬಿ. ಪಾಟೀಲ ಭರವಸೆ

ಪ್ರಮುಖ ಮುಖ್ಯಾಂಶಗಳು

  • ಐನಾಪುರದಲ್ಲಿ 110 ಕೆವಿ ಸ್ಟೇಷನ್ ನಿರ್ಮಾಣ
  • ನೂತನ ಕಟ್ಟಡದ ಲೋಕಾರ್ಪಣೆ
  • ಜಲಕ್ರಾಂತಿಯೊಂದಿಗೆ ಇಂಧನ ಕ್ರಾಂತಿ
ವಿಜಯಪುರ: ‘ರಾಜ್ಯ ಸರ್ಕಾರ ನೀರಾವರಿಯಷ್ಟೇ ವಿದ್ಯುತ್‌ಗೂ ಪ್ರಾಮುಖ್ಯತೆ ನೀಡಿದೆ. ಜಲಕ್ರಾಂತಿಯೊಂದಿಗೆ ಇಂಧನ ಕ್ರಾಂತಿಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ’ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಿಂದ ನಗರದಲ್ಲಿ ನಿರ್ಮಿಸಲಾದ ವಿಜಯಪುರದ ಕಾರ್ಯ ಮತ್ತು ಪಾಲನೆ ವಿಭಾಗೀಯ ಕಚೇರಿಯ ನೂತನ ಕಟ್ಟಡವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
‘ನೀರಿಗೆ ಆದ್ಯತೆ ನೀಡಿದ ಮಾದರಿಯಲ್ಲೇ ರೈತರಿಗೆ ವಿದ್ಯುತ್ ಒದಗಿಸಲಾಗುತ್ತಿದೆ. ವಿದ್ಯುತ್ ಪರಿವರ್ತಕ ದುರಸ್ತಿ ಸಕಾಲದಲ್ಲಿ ಆಗಬೇಕು. ಇಲಾಖೆ ಬಹಳಷ್ಟು ಮಾರ್ಪಾಡಾಗುತ್ತಿವೆ. ಬಹಳಷ್ಟು ಅಚ್ಚುಕಟ್ಟಾಗಿ ಕಟ್ಟಲ್ಪಟ್ಟ ಈ ಕಟ್ಟಡ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಟ್ಟಡವಾಗಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹೊಸ ಸ್ಟೇಷನ್‌ಗಳ ಆರಂಭ

‘ಸಿವಿಲ್ ಆಸ್ಪತ್ರೆಯಲ್ಲಿ ವಿದ್ಯುತ್ ಉಪ ಕೇಂದ್ರವಾಗಬೇಕು. ಜಾಗ ಖರೀದಿಸಿ ಕೇಂದ್ರ ಆರಂಭಿಸಲಾಗುವುದು. ವಿಜಯಪುರದ ವಿಮಾನ ನಿಲ್ದಾಣದ ಹತ್ತಿರದ ಐನಾಪುರದಲ್ಲಿ 110 ಕೆವಿ ಸ್ಟೇಷನ್ ನಿರ್ಮಾಣಕ್ಕಾಗಿ ನಮ್ಮ ಸರ್ಕಾರ ಆದ್ಯತೆ ನೀಡಿದೆ. ಐನಾಪುರದಲ್ಲಿ ಈ ವಿದ್ಯುತ್ ಉಪ ಕೇಂದ್ರದಿಂದ ವಿಜಯಪುರ ಏರ್ ಫೋರ್ಟ್, ಮದಭಾವಿ ಹಾಗೂ ಸುತ್ತಲಿನ ಹಳ್ಳಿಗಳಿಗೆ ಅನುಕೂಲವಾಗುತ್ತದೆ’ ಎಂದರು.
‘ನಮ್ಮ ಸರ್ಕಾರ ಜಿಲ್ಲೆಯಲ್ಲಿ 210 ಹಾಗೂ 220 ಕೆವಿ ಸ್ಟೇಶನ್ ಗಳನ್ನು ನಿರ್ಮಿಸುತ್ತಿದೆ. ಈ ಪೈಕಿ 8 ಕಾಮಗಾರಿಗಳು ಪ್ರಗತಿಯಲ್ಲಿವೆ. 24 ಕಾಮಗಾರಿಗಳು ಅನುಮೋದನೆಗೊಂಡು ವಿವಿಧ ಹಂತದಲ್ಲಿವೆ’ ಎಂದರು.

ವಿದ್ಯುತ್ ಉಪ ಕೇಂದ್ರಗಳ ಹೆಚ್ಚಳ

‘ನಮ್ಮ ಜಿಲ್ಲೆಯಲ್ಲಿ ವಿದ್ಯುತ್ ಉಪ ಕೇಂದ್ರಗಳ ಸಂಖ್ಯೆ ಇಂದು ಗಣನೀಯವಾಗಿ ಹೆಚ್ಚಳವಾಗಿವೆ. 2013ರಲ್ಲಿ 27 ಇದ್ದು ಕೇಂದ್ರಗಳು ಇಂದು 66 ಆಗಿವೆ. ಹೆಚ್ಚು ಕಡಿಮೆ ದ್ವಿಗುಣಗೊಂಡಿವೆ. 110 ಕೆವಿ ಉಪಕೇಂದ್ರಗಳು 24 ಇದ್ದದ್ದು ಈಗ 60 ಆಗಿವೆ. ಅಂದರೆ ಮೂರು ಪಟ್ಟು ಜಾಸ್ತಿಯಾಗಿವೆ. 220 ಕೆವಿ 3 ಇದ್ದವು. ಈಗ 6 ಆಗಿವೆ. ಇವು ಕೂಡಾ ದ್ವಿಗುಣಗೊಂಡಿವೆ’ ಎಂದರು.
‘2016-2017ರಲ್ಲಿ 400 ಕೆವಿ ಸ್ಟೇಷನ್ ನಿರ್ಮಾಣಕ್ಕೆ ಅದನ್ನು ಈ ಮೊದಲು ದೇವರಹಿಪ್ಪರಗಿಯಲ್ಲಿ ಮಾಡಲಿಕ್ಕೆ ಪ್ರಯತ್ನ ಮಾಡಿದ್ದೆವು. ಆದರೆ ಸರ್ಕಾರಿ ಜಮೀನು ಭೂಸ್ವಾಧೀನ ವೆಚ್ಚ ಬಹಳಷ್ಟಾಗಿದ್ದರಿಂದ ಕಷ್ಟವಾಯಿತು. ಹಾಗಾಗಿ ಸರ್ಕಾರಿ ಜಮೀನು ಹಡಗಲಿಯಲ್ಲಿದ್ದುದನ್ನು ಗಮನಿಸಿ, ಅಲ್ಲಿ ನಿರ್ಮಾಣವಾಗುತ್ತಿದೆ. ಅಧಿಕಾರಿಗಳು ಸಲಹೆ ಮೇರೆಗೆ ಹಡಗಲಿಯಲ್ಲಿ 800 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ’ ಎಂದರು.

ಅಭಿವೃದ್ಧಿಗೆ ಆದ್ಯತೆ ಎಂದ ಶಾಸಕ ಯತ್ನಾಳ

ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ನಗರದಲ್ಲಿ ಅಭಿವೃದ್ಧಿ ಬದಲಾವಣೆ ಪರ್ವ ಆರಂಭವಾಗಿದೆ. ನೀರಾವರಿ, ಕೆರೆ ತುಂಬುವ, ವಿದ್ಯುತ್ ಸರಬರಾಜಿನ ಉನ್ನತೀಕರಣ, ಸರ್ಕಾರಿ ಕಟ್ಟಡ, ಸಿಟಿ ಅಂಡರ್ ಗ್ರೌಂಡ್ ಕೇಬಲ್ ಕಾರ್ಯಗಳು ನಡೆದಿವೆ. ಇಂಧನ ಸಚಿವರು ಕೆಲಸ ಮಾಡಿಕೊಡುತ್ತಿದ್ದಾರೆ. ಅಭಿವೃದ್ಧಿ ಬಂದಾಗ ನಾನು ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಕಾಲಕಾಲಕ್ಕೆ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಬೇಕು’ ಎಂದರು.
ನಾಗಠಾಣ ಶಾಸಕ ವಿಠಲ ಕಟಕದೊಂಡ ಮಾತನಾಡಿದರು.
ಹೆಸ್ಕಾಂನ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆ ಮೇಯರ್ ಮಡಿವಾಳಪ್ಪ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ನಗರ ಘಟಕದ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಬ್ಬೀರ ಜಾಗೀರದಾರ, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಸಿವಿಲ್ ಅಧಿಕ್ಷಕ ಅಭಿಯಂತರರಾದ ತಿಪ್ಪಣ್ಣ ಇತರರಿದ್ದರು.