ವಿಜಯಪುರದ ಸಾರ್ವಜನಿಕ ಶಿಕ್ಷಣ ಇಲಾಖೆ. 
ವಿಜಯಪುರ

ಶಿಕ್ಷಣ ಇಲಾಖೆಯಿಂದ 16 ಶಾಲೆ ಆರಂಭಗೊಳ್ಳದಂತೆ ಕ್ರಮ, ಇದು ವಿಜಯವಾಣಿಯ ಬಿಗ್ ಇಂಪ್ಯಾಕ್ಟ್

ಪ್ರಮುಖ ಮುಖ್ಯಾಂಶಗಳು

  • ತಂತ್ರಾಂಶದಲ್ಲಿ ಅನಧಿಕೃತವಾಗಿ ಅನುಮೋದನೆ
  • ಶಿಕ್ಷಣ ಇಲಾಖೆಯಿಂದ ಮಹತ್ವದ ನಿರ್ಧಾರ
  • ಅನುಮತಿ ಪಡೆದ ಶಾಲೆಗೆ ಮಕ್ಕಳ ಸೇರ್ಪಡೆ
  • ಸ್ಥಳ ಪರಿಶೀಲನೆಗೆ ಬಿಇಒಗಳಿಗೆ ಸೂಚನೆ
ವಿಜಯಪುರ: ಅನಧಿಕೃತವಾಗಿ ಅನುಮೋದನೆ ಪಡೆದ ಜಿಲ್ಲೆಯ 16 ಶಾಲೆಗಳನ್ನು 2026-27 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಕಾರಣಕ್ಕೂ ಆರಂಭವಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕ್ರಮ ಜರುಗಿಸಲಾಗಿದೆ.
2026-27ನೇ ಸಾಲಿಗೆ ಖಾಸಗಿ ಶಾಲೆಗಳಿಗೆ ಹೊಸದಾಗಿ ನೋಂದಣಿ ಪಡೆಯಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲು ಅವಕಾಶ ನೀಡಲಾಗಿತ್ತು. 2026 ಫೆ. 3 ರಿಂದ ಮೇ 30ರವರೆಗೆ ಅರ್ಜಿ ಸಲ್ಲಿಸಲು ಕಾಲಮಿತಿ ನಿಗದಿಪಡಿಸಲಾಗಿತ್ತು. ಮುಂದುವರಿದು ಜು. 15ರವರೆಗೆ ಕಾಲಮಿತಿ ವಿಸ್ತರಿಸಲಾಗಿತ್ತು. ಈ ವೇಳೆ ಆನ್‌ಲೈನ್ ಮೂಲಕ ಅಗತ್ಯ ದಾಖಲೆಗಳನ್ನು ನಿರ್ವಹಿಸುತ್ತಿರಬೇಕಾದರೆ, ಆನ್‌ಲೈನ್‌ನಲ್ಲಿ ಅರ್ಜಿ ತಿರಸ್ಕರಿಸಿದರೂ ಡಿಡಿಪಿಐ ಲಾಗಿನ್ ದುರುಪಯೋಗಪಡಿಸಿಕೊಂಡು 16 ಶಾಲೆಗಳಿಗೆ ಅನಧಿಕೃತವಾಗಿ ಅನುಮೋದನೆ ನೀಡಲಾಗಿದೆ. ಈ ಕುರಿತು ದೂರು ದಾಖಲಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
ವಿಜಯವಾಣಿಯಲ್ಲಿ ಪ್ರಕಟಗೊಂಡ ವರದಿ

ಹೀಗಾಗಿ 2026-27 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಕಾರಣಕ್ಕೂ ಈ 16 ಶಾಲೆಗಳನ್ನು ಆರಂಭವಾಗದಂತೆ ಮುನ್ನೆಚ್ಚರಿಕೆ ವಹಿಸಲು ಕ್ರಮ ಜರುಗಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೊಳಗೊಂಡ ತಂಡವು ಆಯಾ ಶಾಲೆಗಳ ಸ್ಥಳಕ್ಕೆ ಹಾಜರಾಗಿ ಕ್ರಮ ವಹಿಸಿ ವರದಿ ಸಲ್ಲಿಸಲು ಆದೇಶವೂ ನೀಡಲಾಗಿದೆ. ಅನಧಿಕೃತವಾಗಿ ದಾಖಲಿಸಿಕೊಂಡ ಎಲ್ಲ ಮಕ್ಕಳನ್ನು ಅವರ ಪಾಲಕರ ಗಮನಕ್ಕೆ ತಂದು ಸಮೀಪದ ಸರ್ಕಾರಿ ಶಾಲೆಗೆ ಅಥವಾ ಪಾಲಕರು ಇಚ್ಛಿಸುವ ಶಾಲೆಗೆ ದಾಖಲಿಸಬೇಕು. ಪಾಲಕರು ಕೂಡ ಯಾವುದೇ ಅನಧಿಕೃತ ಶಾಲೆಗಳಲ್ಲಿ ಪ್ರವೇಶವನ್ನು ಪಡೆದಿದ್ದಲ್ಲಿ ಅವರೇ ನೇರವಾಗಿ ಜವಾಬ್ದಾರರಾಗುತ್ತಾರೆ. ಇದಕ್ಕೆ ಇಲಾಖೆ ಜವಾಬ್ದಾರಿ ಆಗಿರುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ತಂತ್ರಾಂಶದಲ್ಲಿ ಅನಧಿಕೃತವಾಗಿ ಅನುಮೋದನೆಗೊಂಡಿರುವ ಶಾಲೆಗಳ ವಿವರ

1. ಸಂಸ್ಕಾರಧಾಮ ಇಂಟರ್‌ನ್ಯಾಶನಲ್ ಅಕಾಡೆಮಿ ಕೊಕಟನೂರ, ಸಿಂದಗಿ
2. ಯುನೀಕ್ ಆಂಗ್ಲಮಾಧ್ಯಮ ಪಬ್ಲಿಕ್ ಶಾಲೆ, ದೇವರನಾವದಗಿ, ಸಿಂದಗಿ
3. ಶ್ರೀ ರೇವಣಸಿದ್ಧೇಶ್ವರ ಪ್ರಾಥಮಿಕ ಶಾಲೆ ಇಂಗಳೇಶ್ವರ, ಬ.ಬಾಗೇವಾಡಿ
4. ಭೀಮಾ ಗ್ಲೋಬಲ್ ಆಂಗ್ಲ ಮಾಧ್ಯಮ ಶಾಲೆ, ಅಂಜುಟಗಿ, ಇಂಡಿ
5. ಮಹಿಬೂಬಸಾಬ ಗಿರಗಾಂವಿ ಆಂಗ್ಲಮಾಧ್ಯಮ ಶಾಲೆ ಎಚ್‌ಪಿಎಸ್ ಕೊಲ್ಹಾರ, ಬ.ಬಾಗೇವಾಡಿ
6. ಯತಿರಾಜ ಪಬ್ಲಿಕ್ ಸ್ಕೂಲ್ ಯಂಕಂಚಿ, ಸಿಂದಗಿ
7. ಶ್ರೀ ಮಲ್ಲಿಕಾರ್ಜುನ ಹೈಸ್ಕೂಲ್ ಕೋರಳ್ಳಿ, ಸಿಂದಗಿ
8. ಶಿವಗಂಗಾ ಆಂಗ್ಲಮಾಧ್ಯಮ ಶಾಲೆ ಎಚ್‌ಪಿಎಸ್ ಬಂದಾಳ, ಸಿಂದಗಿ
9. ಎಕ್ಸಪರ್ಟ್ ಆಂಗ್ಲ ಮಾಧ್ಯಮ ಶಾಲೆ ಬೊಮ್ಮನಜೋಗಿ, ಸಿಂದಗಿ
10. ಪರ್ಲ್ ಆಂಗ್ಲಮಾಧ್ಯಮ ಶಾಲೆ ಎಚ್‌ಪಿಎಸ್ ವಿಜಯಪುರ
11. ಟೈಮ್ಸ್ ಆಂಗ್ಲಮಾಧ್ಯಮ ಶಾಲೆ, ವಿಜಯಪುರ
12. ಜೆ.ಬಿ. ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆ, ವಿಜಯಪುರ
13. ಅಲಿ ಪಬ್ಲಿಕ್ ಹೈಯರ್ ಪ್ರೈಮರಿ ಸ್ಕೂಲ್ ನಿಡಗುಂದಿ, ಬ.ಬಾಗೇವಾಡಿ
14. ಹೈಟೆಕ್ ಪಬ್ಲಿಕ್ ಶಾಲೆ ಶಿವಣಗಿ, ವಿಜಯಪುರ
15. ಮಾಣಿಕ್ಯ ಪಬ್ಲಿಕ್ ಶಾಲೆ, ಸಿಂದಗಿ
16. ಮಾಣಿಕ್ಯ ಪಬ್ಲಿಕ್ ಶಾಲೆ (1ಟು 8), ಸಿಂದಗಿ