ವಿಜಯಪುರದ ಭಾವಸಾರ ಸಾಂಸ್ಕೃತಿಕ ಭವನದಲ್ಲಿ ನಡೆದ ವಿಜಿಲ್ಲಾ ಸೌಹಾರ್ದ ಸಹಕಾರಿಗಳ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು. ಅಣ್ಣಾಸಾಹೇಬ ಜೊಲ್ಲೆ, ಅರವಿಂದ ದೇಶಪಾಂಡೆ, ಅಭಿನವ ಸಿದ್ಧಾರೂಢ ಸ್ವಾಮೀಜಿ ಮತ್ತಿತರರಿದ್ದಾರೆ.
- ಬೆಳಗಾವಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಅಭಿಮತ
- ಷೇರ್ ಸರ್ಟಿಫಿಕೇಟ್ ವಿತರಣೆ ಸಮಾರಂಭ
ವಿಜಯಪುರ: ದೇಶದ ಆರ್ಥಿಕತೆಗೆ ಬಹುದೊಡ್ಡ ಪಾಲು ಸಹಕಾರ ಕ್ಷೇತ್ರ ನೀಡುವಂತಾಗಲಿ ಎಂದು ಬೆಳಗಾವಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ನಗರದ ಭಾವಸಾರ ಸಾಂಸ್ಕೃತಿಕ ಭವನದಲ್ಲಿ ಇತ್ತೀಚೆಗೆ ನಡೆದ ವಿಜಯಪುರ ಜಿಲ್ಲಾ ಸೌಹಾರ್ದ ಸಹಕಾರಿಗಳ ಸಮಾವೇಶ ಹಾಗೂ ಷೇರ್ ಸರ್ಟಿಫಿಕೇಟ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘದಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು. ಸಹಕಾರ ಸಂಘಗಳು ದೇಶ ವ್ಯಾಪ್ತಿ ಬೆಳೆಯಬೇಕೆಂದು ಅವರು ಸಲಹೆ ನೀಡಿದರು.
ಮುಖ್ಯ ಅತಿಥಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ನಂಜೇಗೌಡ ಮಾತನಾಡಿ, 1990 ದಶಕದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಅಽಕಾರಶಾಹಿ ಪ್ರಾರಂಭವಾಗಿತ್ತು. ಹೀಗಾಗಿಯೇ 1997 ಸೌಹಾರ್ದ ಕಾಯಿದೆ ಬರಲು ಕಾರಣವಾಯಿತು. ಸಹಕಾರಿಗಳು ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಮುಂದಾಗಬೇಕು. ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳು ಮುಖ್ಯ ಪಾತ್ರ ವಹಿಸುತ್ತಿವೆ ಎಂದರು.
ಹಿರಿಯ ಮಾರ್ಗದರ್ಶಕ ಅರವಿಂದ ದೇಶಪಾಂಡೆ ಮಾತನಾಡಿ, ಸಹಕಾರಿಗಳು ಜನರಿಗೆ ಪಾರದರ್ಶಕತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು. ಸಹಕಾರಿ ಒಕ್ಕೂಟಕ್ಕೆ ಎಲ್ಲ ಸಹಕಾರಿ ಸಂಘಗಳು ಸಹಕರಿಸಬೇಕು. ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಆದ್ಯತೆ ನೀಡಬೇಕು. ಸಹಕಾರಿ ಒಕ್ಕೂಟವು ಸಹಕಾರಿ ಸಂಘ ಅಲ್ಲದೇ. ಇತರೆ ಕ್ಷೇತ್ರಗಳಿಗೆ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.
ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಸಂಜಯ ಪಾಟೀಲ ಕನಮಡಿ ಒಕ್ಕೂಟದ ಧ್ಯೇಯ ಉದ್ದೇಶಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಪುರ- ಹುಬ್ಬಳ್ಳಿ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಶಂಕರಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಷೇರು ಸದಸ್ಯರಿಗೆ ಷೇರು ಸರ್ಟಿಫಿಕೇಟ್ ವಿತರಿಸಲಾಯಿತು.
ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ಪ್ರಭುದೇವ ಮ್ಯಾಗ್ನೂರ, ರಾಷ್ಟ್ರೀಯ ಸಂಯೋಜಕ ರಮೇಶ ವೈದ್ಯ, ಸಿದ್ರಾಮಪ್ಪ ಉಪ್ಪಿನ, ಎಂ.ಜಿ. ಪಾಟೀಲ, ಅರುಣ ವಾರದ, ಸುರೇಶ ಬಿರಾದಾರ, ಅರುಣ ಮಠ, ಸಿದ್ದು ಮಲ್ಲಿಕಾರ್ಜುನಮಠ, ಆರ್.ಡಿ. ಕುಲಕರ್ಣಿ, ಚಂದ್ರಶೇಖರ ಪಾಟೀಲ, ರಾಜು ಹಂಚಾಟೆ, ಯಮನಪ್ಪ ಸಾತಿಹಾಳ, ಮಲ್ಕಪ್ಪ ರೊಟ್ಟಿ, ವಿವೇಕಾನಂದ ಶಿರೋಳಕರ, ಪರಶುರಾಮ ಚಿಂಚಲಿ, ದೀಪಕ ಶಿಂತ್ರೆ ಮತ್ತಿತರರಿದ್ದರು.
ಉಪಾಧ್ಯಕ್ಷ ಚಂದ್ರಶೇಖರ ಕವಟಗಿ ಸ್ವಾಗತಿಸಿ, ಪರಿಚಯಿಸಿದರು. ಸೋಮನಿಂಗ ಕಟಾವಿ ಕಾರ್ಯಕ್ರಮ ನಿರ್ವಹಿಸಿದರು.