ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಸಚಿವ ಎಂ.ಬಿ. ಪಾಟೀಲ ಪೂಜೆ ಸಲ್ಲಿಸಿದರು. ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ಬಾಲಗಾಂವದ ಅಮೃತಾನಂದ ಸ್ವಾಮೀಜಿ, ಹರ್ಷಾನಂದ ಸ್ವಾಮೀಜಿ, ಪ್ರಸಾದ ಸ್ವಾಮೀಜಿ ಇತರರಿದ್ದಾರೆ. * 
ವಿಜಯಪುರ

ಸಚಿವರಾದ ಬಳಿಕ ಪ್ರಥಮ ಪುರಪ್ರವೇಶ, ಡಾ. ಎಂ.ಬಿ. ಪಾಟೀಲರಿಗೆ ಅದ್ಧೂರಿ ಸ್ವಾಗತ

ಪ್ರಮುಖ ಮುಖ್ಯಾಂಶಗಳು

  • ದೇವಸ್ಥಾನ-ದರ್ಗಾಗಳಿಗೆ ಭೇಟಿ
  • ಜ್ಞಾನಯೋಗಾಶ್ರಮದಲ್ಲಿ ವಿಶೇಷ ಪೂಜೆ
  • ವಚನ ಚಿಂತನ ನೀಡಿ ಆಶೀರ್ವದಿಸಿದ ಶ್ರೀಗಳು
ವಿಜಯಪುರ: ಡಿ.ಕೆ. ಶಿವಕುಮಾರ ನೇತೃತ್ವದ ನೂತನ ಸಂಪುಟದಲ್ಲಿ ಸಚಿವರಾದ ನಂತರ ಪ್ರಪ್ರಥಮ ಬಾರಿಗೆ ಶನಿವಾರ ತವರು ಜಿಲ್ಲೆಗೆ ಆಗಮಿಸಿದ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ನೇರವಾಗಿ ನಗರದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಜ್ಞಾನಯೋಗಾಶ್ರಮಕ್ಕೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಸಚಿವರನ್ನು ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿಯವರು ಸಿದ್ಧೇಶ್ವರ ಸ್ವಾಮೀಜಿ ರಚಿಸಿದ ಮೊದಲ ಕೃತಿ ‘ವಚನ ಚಿಂತನ’ ನೀಡಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸವಲಿಂಗ ಸ್ವಾಮೀಜಿ, 21 ವರ್ಷಗಳ ಹಿಂದೆ ಸಿದ್ಧೇಶ್ವರ ಸ್ವಾಮೀಜಿ ಇದೇ ದಿನದಂದು 9 ಜನರಿಗೆ ಸನ್ಯಾಸ ದೀಕ್ಷೆ ನೀಡಿದ್ದರು. ಇದೇ ದಿನ ಸಚಿವರು ಆಶ್ರಮಕ್ಕೆ ಭೇಟಿ ನೀಡಿದ ಯೋಗಾಯೋಗ ಬಂದಿದೆ. ನನ್ನ ಜೀವಮಾನದಲ್ಲಿ ಬೇಸಿಗೆಯಲ್ಲೂ ಹಳ್ಳಗಳು ತುಂಬಿ ಹರಿಯುತ್ತಿರುವುದನ್ನು ಕಂಡು ಸಂತಸವಾಗಿದೆ. ಇದಕ್ಕೆ ಸಚಿವ ಎಂ.ಬಿ. ಪಾಟೀಲ ಅವರು ಕೈಗೊಂಡಿರುವ ನೀರಾವರಿ ಯೋಜನೆಗಳು ಕಾರಣವಾಗಿವೆ ಎಂದರು.
ಸಚಿವರು ಸಿದ್ಧೇಶ್ವರ ಸ್ವಾಮೀಜಿ ಮಾತನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಅಪ್ಪಟ ಭಕ್ತರಾಗಿದ್ದಾರೆ. ಶ್ರೀಗಳು ಹೇಳಿದಂತೆ ಎಂ.ಬಿ. ಪಾಟೀಲರು ಜನಮನದಲ್ಲಿ ಯಾವಾಗಲೂ ಜಲಸಂಪನ್ಮೂಲ ಸಚಿವರಾಗಿ ಉಳಿದಿದ್ದಾರೆ. ಕೊಟ್ಟ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವ ವ್ಯಕ್ತಿತ್ವ ಅವರದ್ದಾಗಿದ್ದು, ಇನ್ನೂ ಉನ್ನತ ಸ್ಥಾನಕ್ಕೇರಲಿ ಎಂದು ಆಶೀರ್ವದಿಸಿದರು.
ಸಚಿವ ಎಂ.ಬಿ. ಪಾಟೀಲ ಮಾತನಾಡಿ, ನನ್ನ ಜೀವನವಿಡೀ ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ಕೆಲಸ ಮಾಡುತ್ತೇನೆ. ಸಿದ್ಧೇಶ್ವರ ಸ್ವಾಮೀಜಿ ಆಶೀರ್ವಾದದಿಂದ ಜನಸೇವೆ, ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಅವರ ಕಿವಿಮಾತಿನಂತೆ ಚಾಚೂ ತಪ್ಪದೆ ಪಾಲಿಸುತ್ತ ರಾಜ್ಯದ ಅಭಿವೃದ್ಧಿಗೆ ಸಮಯ ಮೀಸಲಿಟ್ಡಿದ್ದೇನೆ. ಶ್ರೀಗಳ ಆಶೀರ್ವಾದ ನನಗೆ ಕಾಯಕ ಮಾಡಲು ಸ್ಪೂರ್ತಿಯಾಗಿದ್ದು, ಈಗ ಮಾಡುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ನನಗೆ ಸಂತೃಪ್ತಿ ಇದೆ. ಸಾರ್ವಜನಿಕ ಜೀವನದಲ್ಲಿ ಸದಾ ನನ್ನ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾ, ಮಾರ್ಗದರ್ಶನ ನೀಡಿದ ಮಹಾನ್ ಸಂತ, ಜ್ಞಾನಯೋಗಿ ಸಿದ್ಧೇಶ್ವರ ಮಹಾಸ್ವಾಮಿಗಳವರು ನಡೆದಾಡಿದ ಪುಣ್ಯಭೂಮಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗುರುಗಳ ಆಶೀರ್ವಾದವನ್ನು ಪಡೆದು ಧನ್ಯನಾಗಿದ್ದೇನೆ.
ಬೆಂಗಳೂರಿನಿಂದ ಬಂದು ನೇರವಾಗಿ ಆಶ್ರಮಕ್ಕೆ ಮೊದಲ ಭೇಟಿ ನೀಡಿದ್ದೇನೆ. ಶ್ರೀಗಳು ಮತ್ತು ಬಸವಾದಿ ಶರಣರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಜೀವನಪೂರ್ತಿ ಶ್ರೀಗಳ ಆಶಯದಂತೆ ನಡೆಯುತ್ತೇನೆ ಎಂದು ಹೇಳಿದರು.
ಬಾಲಗಾಂವದ ಅಮೃತಾನಂದ ಸ್ವಾಮೀಜಿ, ಹರ್ಷಾನಂದ ಸ್ವಾಮೀಜಿ, ಪ್ರಸಾದ ಸ್ವಾಮೀಜಿ, ಜಗನು ಮಹಾರಾಜ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಮುಖಂಡರಾದ ಸಂಗು ಸಜ್ಜನ, ವಿ.ಸಿ. ನಾಗಠಾಣ, ಮಲ್ಲಿಕಾರ್ಜುನ ಹಳ್ಳದ, ಪಿ.ಎಸ್. ಬಿರಾದಾರ, ಘನಶ್ಯಾಮ ತೋಶ್ನಿವಾಲ, ಶಿವಾನಂದ ಸಂಖ, ವಿಠ್ಠಲಗೌಡ ಬಿರಾದಾರ ಇತರರಿದ್ದರು.