- ಕಿತ್ತೂರಿನ ರಾಣಿ ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ
- ಸಮಿತಿಯಿಂದ ಮಹತ್ವದ ನಿರ್ಧಾರ ಪ್ರಕಟ
- ಹೊಸ ವರ್ಷಾರಂಭದಲ್ಲಿ ಲೋಕಾರ್ಪಣೆ
- ಸಮಿತಿ ಆಹ್ವಾನಕ್ಕೆ ಸಿಎಂ-ಡಿಸಿಎಂ ಸ್ಪಂದನೆ
ವಿಜಯಪುರ: ಐತಿಹಾಸಿಕ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಷ್ಠಾಪಿಸಿರುವ ಸ್ವಾತಂತ್ರ್ಯ ಹೋರಾಟಗಾರ್ತಿ, ಕಿತ್ತೂರಿನ ರಾಣಿ ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆಯನ್ನು ಹೊಸವರ್ಷದ ಆರಂಭದ ದಿನಗಳಲ್ಲಿ ನೆರವೇರಿಸಲು ತೀರ್ಮಾನಿಸಲಾಗಿದೆ.
ಒಟ್ಟು 22 ಫೂಟ್ ಎತ್ತರವಿರುವ, ಭವ್ಯವಾಗಿ ಪ್ರತಿಷ್ಠಾಪನೆಗೊಂಡಿರುವ ರಾಣಿ ಚೆನ್ನಮ್ಮಾಜಿ ಪುತ್ಥಳಿ ಲೋಕಾಪರ್ಣೆಗಾಗಿ ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಸುದೀರ್ಘಾವಧಿ ಚರ್ಚೆ, ಸಿದ್ಧತೆ ಕುರಿತ ಸಭೆಗಳು ನಡೆದು ಲೋಕಾರ್ಪಣೆಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಪುತ್ಥಳಿ ಪ್ರತಿಷ್ಠಾಪನೆ ಹಾಗೂ ಲೋಕಾಪರ್ಣೆಗಾಗಿಯೇ ಸ್ಥಾಪಿತಗೊಂಡ ‘ಕಿತ್ತೂರು ಚೆನ್ನಮ್ಮ ಪುತ್ಥಳಿ ಸ್ಥಾಪನಾ ಸಮಿತಿ’ ಸಕಲ ಸಿದ್ಧತೆ ಪೂರ್ಣಗೊಳಿಸಿ ಜನವರಿ ಮೊದಲ ವಾರದಲ್ಲಿ ಪುತ್ಥಳಿ ಲೋಕಾಪರ್ಣೆಗೊಳಿಸುವ ತೀರ್ಮಾನ ಕೈಗೊಂಡಿದೆ.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಆಮಂತ್ರಣ ನೀಡಲಾಗಿದ್ದು, ಉಭಯ ನಾಯಕರು ಸಮ್ಮತಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಾಡಿನ ಖ್ಯಾತ ಗಣ್ಯರು, ಮಠಾಧೀಶರು ಮತ್ತು ರಾಜಕೀಯ ಧುರೀಣರು ಹಾಗೂ ಸಾಮಾಜಿಕ ಸಂಘಟಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದ್ದು, ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ.
ಅಲ್ಲದೇ ಕೇಂದ್ರ ಬಸ್ ನಿಲ್ದಾಣದ ಹತ್ತಿರದಲ್ಲಿರುವ ಚೆನ್ನಮ್ಮ ನಾಟ್ಯಮಂದಿರ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆಯೂ ಮಾತುಕತೆ ನಡೆಸಲಾಗಿದ್ದು, ಸರ್ಕಾರದ ಮಟ್ಟದಲ್ಲಿ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಈ ಕಾರ್ಯಕ್ರಮ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸುವ ವಿಶ್ವಾಸವಿದೆ.
ಲೋಕಾರ್ಪಣೆ ಕಾರ್ಯಕ್ರಮಕ್ಕೆ ಜಿಲ್ಲೆಯ ಮಂತ್ರಿಗಳು, ಶಾಸಕರು ಸಹ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಕಾರ್ಯಕ್ರಮದ ದಿನದಂದು ಎಲ್ಲ ಗಣ್ಯರನ್ನು ಸನ್ಮಾನಿಸಿ ಗೌರವಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಿತ್ತೂರು ಚೆನ್ನಮ್ಮ ಪುತ್ಥಳಿ ಸ್ಥಾಪನಾ ಸಮಿತಿ ಅಧ್ಯಕ್ಷ ಉಮೇಶ ಕೋಳಕೂರ, ಮುಖಂಡರಾದ ರವಿ ತೊರವಿ, ಈರಣ್ಣ ಜುಗತಿ ಮತ್ತಿತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.