ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಸ್ವಾತಂತ್ರೊೃೀತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಸಚಿವ ಎಂ.ಬಿ. ಪಾಟೀಲ ಮಾತನಾಡಿದರು. 
ವಿಜಯಪುರ

ಬರ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ದ, ಸ್ವಾತಂತ್ರೊೃೀತ್ಸವ ಭಾಷಣದಲ್ಲಿ ಸಚಿವ ಎಂಬಿಪಾ ಭರವಸೆ

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಎಂ.ಬಿ. ಪಾಟೀಲ ಹೇಳಿಕೆ
  • ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಧ್ವಜಾರೋಹಣ
  • ದೇಶಕ್ಕೆ ಪ್ರಾಣ ತೆತ್ತ ಹೋರಾಟಗಾರರ ಸ್ಮರಣೆ

ವಿಜಯಪುರ: ‘ಸತತ ಮೂರು ವರ್ಷಗಳ ಕಾಲ ದೇಶಾದ್ಯಂತ ಸಂಚಲನ ಸೃಷ್ಠಿಸಿದ ಪಂಚ ಗ್ಯಾರಂಟಿ ಯೋಜನೆಗಳು ನಮ್ಮ ಸರ್ಕಾರಕ್ಕೆ ವಿಶೇಷ ಗೌರವ ತರುವುದರ ಜೊತೆಗೆ ಇಡೀ ದೇಶಕ್ಕೆ ಮಾದರಿಯಾಗಿ ನಿಂತಿವೆ. ನಮ್ಮ ಸರ್ಕಾರ ಜಾರಿಗೊಳಿಸಿದ ಈ ಯೋಜನೆಗಳನ್ನು ಇಂದಿನ ಮುಖ್ಯಮಂತ್ರಿ ಮುಂದುವರಿಸುವುದರ ಜೊತೆಗೆ ಅಧಿಕಾರ ವಹಿಸಿಕೊಂಡ 100 ದಿನಗಳಲ್ಲಿ 45 ವಿಶೇಷ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ನಿರ್ಧರಿಸಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅವರು ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಶನಿವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಒಂದು ಹೆಕ್ಟೇರ್ ವರೆಗಿನ ಜಮೀನು ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಮೊತ್ತದಲ್ಲಿ ಶೇ.50 ರಷ್ಟು ಸಬ್ಸಿಡಿ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ. ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕಲೆ ಮತ್ತು ಸಂಸ್ಕೃತಿ ಸೇರಿ ಗ್ರಾಮೀಣ ಬದುಕಿನ ಅನುಭವಕ್ಕಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಯುವ ಕರ್ನಾಟಕ ನಿರ್ಮಾಣಕ್ಕೆ ಚಾಲನೆ ನೀಡುವುದು. ಭಾರತ್ ಜೋಡೋ ಯುವಕ ಸಂಘ ಮಿಷನ್, ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ 6000, ನಗರ ಪ್ರದೇಶಗಳಲ್ಲಿ 4000 ಸಂಘಗಳ ಸ್ಥಾಪಿಸುವುದು ಮತ್ತು ವಾರ್ಷಿಕ ತಲಾ 10 ಲಕ್ಷ ರೂ. ಅನುದಾನದಂತೆ ವಾರ್ಷಿಕ 1 ಸಾವಿರ ಕೋಟಿ ವೆಚ್ಚದಲ್ಲಿ ಯುವಕರಲ್ಲಿ ಆರೋಗ್ಯ, ಕೌಶಲ, ಸಾಮಾಜಿಕ ಸಾಮರಸ್ಯ ಉತ್ತೇಜನ ನೀಡಲಾಗುವುದು ಎಂದರು.
ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ ಕಲ್ಪಿಸುವುದು. ಸರ್ಕಾರಿ ಆಸ್ಪತ್ರೆಗಳ ದತ್ತು ಯೋಜನೆ ಮತ್ತು ರಾಜ್ಯದ ಮೆಡಿಕಲ್ ಕಾಲೇಜುಗಳಿಗೆ ಅವಶ್ಯ ಮಾನವ ಸಂಪನ್ಮೂಲ ಒದಗಿಸಲು ಉತ್ತೇಜಿಸಲಾಗುವುದು. ನಶೆ ಮುಕ್ತ ಕರ್ನಾಟಕದ ಭಾಗವಾಗಿ ಯುವಕರಲ್ಲಿ ಜಾಗೃತಿ ಮೂಡಿಸಿ ತ್ಯಜಿಸುವಿಕೆ, ತಿಳಿಸು, ಬೆಂಬಲ ಮತ್ತು ಸಬಲೀಕರಣ ಉಪಕ್ರಮಗಳ ಮೂಲಕ ನಶೆ ಪದಾರ್ಥಗಳ ವ್ಯಸನ ಮುಕ್ತಗೊಳಿಸಲು ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದರು.
ಸಾರ್ವಜನಿಕರ ಕುಂದುಕೊರತೆ ಆಲಿಸಲು ಪ್ರತ್ಯೇಕ ಪ್ರಜಾ ಸೇವೆ ಇಲಾಖೆ ಸ್ಥಾಪಿಸಿ, ಆಧುನಿಕ ತಂತ್ರಜ್ಞಾನದ ಮೂಲಕ ತ್ವರಿತ ಸ್ಪಂದನೆಗೆ ಕ್ರಮ ಕೈಗೊಳ್ಳುವುದು. ಭೂ ಗ್ಯಾರೆಂಟಿಯಡಿ ರಾಜ್ಯದ ಎಲ್ಲಾ ಕೃಷಿಯೇತರ ಸ್ವತ್ತುಗಳಿಗೆ ಇ-ಖಾತೆ ಸೇರಿದಂತೆ ಸಮಗ್ರ ಡಿಜಿಟಲ್ ಆರ್.ಟಿ.ಸಿ ಗಳು ಮತ್ತು ಅರ್ಹ ಬಿ-ಖಾತೆಗಳನ್ನು ಎ- ಖಾತೆಗಳಾಗಿ ಪರಿರ್ವತಿಸಿ, ಭೂಮಾಲೀಕತ್ವದ ಹಕ್ಕುಗಳನ್ನು ಖಾತ್ರಿಪಡಿಸಿ ವ್ಯಾಜ್ಯಗಳನ್ನು ಕಡಿಮೆ ಮಾಡಲಾಗುವುದು ಎಂದರು.

ಉದ್ಘಾಟನೆಗೆ ವಿಮಾನನಿಲ್ದಾಣ ಸಜ್ಜು

ವಿಜಯಪುರ ವಿಮಾನ ನಿಲ್ದಾಣವು ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಕೆಲವು ತಾಂತ್ರಿಕ ಅಡಚಣೆಗಳು, ನ್ಯಾಯಾಲಯದ ವಿಚಾರಣೆ ಇವೆಲ್ಲವೂ ಇಲ್ಲದೆ ಹೋಗಿದ್ದರೆ ನಮ್ಮ ಊರಿಗೆ ಇಷ್ಟು ಹೊತ್ತಿಗೆ ವಿಮಾನಗಳು ಬಂದು, ಹೋಗಿ ಮಾಡುತ್ತಿದ್ದವು. 2026ರ ಜನವರಿ 6ರಂದು ವಿಮಾನ ನಿಲ್ದಾಣದ ಲೈಸೆನ್ಸ್ (ಪರವಾನಗಿ) ಪಡೆಯಲು ಡಿ.ಜಿ.ಸಿ.ಎ.ಗೆ ಅರ್ಜಿ ಸಲ್ಲಿಸಲಾಗಿದೆ. ಇದಕ್ಕಾಗಿ ಏರ್ ಪೋರ್ಟ್ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ತಾಂತ್ರಿಕ ಸಿಬ್ಬಂದಿಯನ್ನೂ ನೇಮಿಸಲಾಗಿದೆ. ನಮ್ಮ ಜಿಲ್ಲಾ ಕೇಂದ್ರಕ್ಕೆ ಬರುವ ಏರ್ ಪೋರ್ಟ್ ಪರಿಪೂರ್ಣವಾಗಿರಬೇಕು ಎನ್ನುವುದು ನನ್ನ ಕಳಕಳಿ. ಇದಕ್ಕಾಗಿ ಇಐಆರ್‌ಎಲ್, ವರ್ಕ್ ಸ್ಲಿಪ್, ನೈಟ್ ಲ್ಯಾಂಡಿಂಗ್ ಸೌಕರ್ಯ, ಪ್ರತ್ಯೇಕ ಅಪ್ರೋಚ್ ರಸ್ತೆ ಮುಂತಾದ ಕಾಮಗಾರಿಗಳಿಗೆ ನಮ್ಮ ಸರ್ಕಾರ 2025ರ ಅಕ್ಟೋಬರ್ 3 ರಂದು 270.83 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಒಪ್ಪಿಗೆ ಕೊಟ್ಟಿತು. ಈ ಪೈಕಿ ಈಗಾಗಲೇ 160.72 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಯಾಗಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ವಿಜಯಪುರ ವಿಮಾನ ನಿಲ್ದಾಣವು ದೇಶದ ವಿಮಾನಯಾನ ಕ್ಷೇತ್ರದಲ್ಲಿ ರಾರಾಜಿಸಲಿದೆ ಎಂದರು.

ಬರ ಪರಿಸ್ಥಿತಿ ಎದುರಿಸಲು ಸಜ್ಜು

ರಾಜ್ಯದಲ್ಲಿ ಈ ವರ್ಷ ಭೀಕರ ಬರದ ಛಾಯೆ ಕಂಡು ಬಂದಿದ್ದು, ವಿಜಯಪುರ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ವಾಡಿಕೆ ಮಳೆಯು 196.7 ಎಂ.ಎಂ ಇದ್ದು, ಈವರೆಗೂ ಒಟ್ಟು ಮಳೆ 163.5 ಎಂಎಂ ಆಗಿದೆ. ಆಗಸ್ಟ್ ತಿಂಗಳಲ್ಲಿಯೇ ಶೇ.46 ರಷ್ಟು ಮಳೆ ಕೊರತೆ ಆಗಿದೆ. ಬರದಿಂದ ಸಂಭವಿಸಬಹುದಾದ ಸವಾಲುಗಳನ್ನು ಎದುರಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಉಸ್ತುವಾರಿ ಸಚಿವನಾಗಿ ನಾನು ಜಿಲ್ಲೆಯ ಪ್ರತಿಯೊಂದು ಭಾಗಕ್ಕೆ ಕಾಲಕಾಲಕ್ಕೆ ಭೇಟಿ ನೀಡಿ, ವಸ್ತುಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಕಾರಣದಿಂದ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1, 2 3 ರ ಅಡಿಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿನ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ 175 ಕೆರೆ ಮತ್ತು ಬಾಂದಾರಗಳನ್ನು ತುಂಬಿಸಲು ಕಾಲುವೆ ಜಾಲಕ್ಕೆ ನೀರನ್ನು ಹರಿಸಲಾಗಿರುತ್ತದೆ ಎಂದರು.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮೇಯರ್ ಎಂ.ಎಸ್. ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೊಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಸಂತ ಹೊನಮೋಡೆ, ಉಪ ಮೇಯರ್ ಸುಮಿತ್ರಾ ಜಾಧವ, ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿಪಂ ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ ಇತರರಿದ್ದರು.