ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟಗಾರರನ್ನು ಬೆಂಬಲಿಸಿ ವಿವಿಧ ಸಂಘಟನೆಗಳ ಮುಖಂಡರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಎಸ್.ಎಂ. ಪಾಟೀಲ ಗಣಿಹಾರ, ಎಂ.ಸಿ. ಮುಲ್ಲಾ, ಡಾ.ರವಿ ಬಿರಾದಾರ ಮತ್ತಿತರರಿದ್ದಾರೆ. 
ವಿಜಯಪುರ

ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟಗಾರರ ಕುರಿತು ಅವಹೇಳನ, ಶಾಸಕ ಯತ್ನಾಳ ವಿರುದ್ಧ ತೀವ್ರ ಆಕ್ರೋಶ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಚುರುಕು
  • ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕೆಗೆ ಖಂಡನೆ
  • ವಿವಿಧ ಸಂಘಟನೆಗಳ ಮುಖಂಡರಿಂದ ಆಕ್ರೋಶ
  • ಯತ್ನಾಳ ಕ್ಷಮೆ ಯಾಚಿಸದಿದ್ದರೆ ಉಗ್ರ ಹೋರಾಟ
ವಿಜಯಪುರ: ‘ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ’ ಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ ಹೋರಾಟಗಾರರ ಕುರಿತು ಟೀಕಿಸಿರುವ ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬೇಷರತ್ ಕ್ಷಮೆ ಯಾಚನೆಗೆ ವಿವಿಧ ಸಂಘಟನೆಗಳ ಮುಖಂಡರು ಒಕ್ಕೋರಲಿನಿಂದ ಆಗ್ರಹಿಸಿದರಲ್ಲದೇ ಕ್ಷಮೆ ಯಾಚಿಸದೇ ಹೋದರೆ ಕಂಡ ಕಂಡಲ್ಲಿ ೇರಾವ್ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಪಿಪಿಪಿ ಮಾದರಿ ವಿರೋಧಿಸಿ, ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕೆಂದು ಅನೇಕ ಸಂಘಟನೆಗಳ ಮುಖಂಡರು 84ದಿನಗಳಿಂದ ಪಕ್ಷಾತೀತವಾಗಿ, ಜಾತ್ಯತೀತವಾಗಿ ಮತ್ತು ಧರ್ಮಾತೀತವಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಅನೇಕ ಮಠಾಧೀಶರು, ರಾಜಕೀಯ ಪಕ್ಷಗಳ ಮುಖಂಡರು, ವಿದ್ಯಾರ್ಥಿ ಸಂಘಟನೆಗಳು, ಬುದ್ಧಿಜೀವಿಗಳು ಮತ್ತು ಚಿಂತಕರು, ಪ್ರಜ್ಞಾವಂತರು ಬೆಂಬಲ ಸೂಚಿಸಿದ್ದಾರೆ. ಅಂಥ ಹೋರಾಟಗಾರರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದು ಅತ್ಯಂತ ಖಂಡನೀಯ ಎಂದು ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಹೋರಾಟಗಾರರನ್ನು ‘ಲಪುಟರು’ ಎಂದಿರುವ ಶಾಸಕ ಯತ್ನಾಳರೇ ಮೊದಲ ಲಪುಟರಾಗಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಎಂ.ಬಿ. ಪಾಟೀಲರ ಮನವೊಲಿಸಿ ಸರ್ಕಾರಿ ವೈದ್ಯಕೀಯ ಕಾಲೇಜ್ ಲಪಟಾಯಿಸಲು ಹೊರಟಿದ್ದಾರೆ. ಸರ್ಕಾರಿ ವ್ಯವಸ್ಥೆಯನ್ನೇ ತನ್ನದಾಗಿಸಿಕೊಳ್ಳಲು ಹೊರಟಿರುವ ಯತ್ನಾಳ ಅದಕ್ಕಾಗಿ 500 ಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿ ತಿಳಿಸಿದ್ದಾರೆ. ಬಡವರ ಪರ, ಸರ್ಕಾರಿ ವ್ಯವಸ್ಥೆ ಪರವಾಗಿರಬೇಕಿದ್ದ ಯತ್ನಾಳ ಬಡವರನ್ನು ಬಡವರಾಗಿಸಿಯೇ ಇರಿಸಿ ದೊಡ್ಡ ಬಂಡವಾಳ ಗಳಿಸಲು ಸರ್ಕಾರಿ ವೈದ್ಯಕೀಯ ಕಾಲೇಜ್ ಕಬಳಿಸುವ ಹುನ್ನಾರ ನಡೆಸಿದ್ದಾರೆಂದು ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಟೀಕಿಸಿದರು.
ತಮ್ಮದೇ ಕ್ಷೇತ್ರದಲ್ಲಿ ಸುದೀರ್ಘ 84 ದಿನಗಳಿಂದ ಹೋರಾಟ ನಡೆಯುತ್ತಿದ್ದರೂ ಧರಣಿ ಸ್ಥಳಕ್ಕೆ ಭೇಟಿ ನೀಡದ ಶಾಸಕ ಯತ್ನಾಳ, ಸಿದ್ಧಸಿರಿಯಿಂದ ವೈದ್ಯಕೀಯ ಕಾಲೇಜ್ ಸ್ಥಾಪಿಸುವುದಾಗಿ ಹೇಳುತ್ತಾರೆ ವಿನಃ ಸರ್ಕಾರಿ ಕಾಲೇಜ್ ಬಗ್ಗೆ ಚಕಾರವೆತ್ತುವುದಿಲ್ಲ. ಅಂದರೆ ಇವರಿಗೆ ಬಡವರು, ಬಡವರ ಮಕ್ಕಳ ಬಗ್ಗೆ ಕಾಳಜಿ ಇಲ್ಲವೇ? ಮಾತೆತ್ತಿದರೆ ಹಿಂದು, ಹಿಂದುತ್ವದ ಬಗ್ಗೆ ಮಾತನಾಡುವ ಯತ್ನಾಳರಿಗೆ ಸರ್ಕಾರಿ ವೈದ್ಯಕೀಯ ಕಾಲೇಜ್‌ನಿಂದ ಬಡ ಹಿಂದುಮಕ್ಕಳಿಗೂ ಅನುಕೂಲವಾಗಲಿದೆ ಎಂಬ ಅರಿವಿಲ್ಲವೇ? ಹೋರಾಟ ಮಾಡುತ್ತಿರುವವರೂ ಹಿಂದುಗಳೇ ಎಂಬುದರ ಪರಿಜ್ಞಾನವಿಲ್ಲವೇ? ಎಂದು ಪ್ರಶ್ನಿಸಿದರು.
ಕರವೇ ಮುಖಂಡ ಎಂ.ಸಿ. ಮುಲ್ಲಾ ಮಾತನಾಡಿ, ಹೋರಾಟಗಾರರು ಪೇಮೆಂಟ್ ಗಿರಾಕಿ ಎಂದು ಟೀಕಿಸುವ ಯತ್ನಾಳ ಬಳಿ ಲವಲೇಶವಾದರೂ ಮೌಲ್ಯಗಳಿದ್ದರೆ ಅದನ್ನು ಬಹಿರಂಗಪಡಿಸಲಿ ಎಂದು ಸವಾಲೆಸೆದರು.
ಹೋರಾಟಕ್ಕೆ ಕುಳಿತವರು ಯಾರೂ ಶ್ರೀಮಂತರಲ್ಲ. ಅತ್ಯಂತ ಬಡವರು. ಅವರ ಬಗ್ಗೆ ಇಷ್ಟು ಕೇವಲವಾಗಿ ಮಾತನಾಡುವುದು ಸರಿಯಲ್ಲ. ಇಡೀ ಜಿಲ್ಲೆಯ ಜನ ಹೋರಾಟಗಾರರ ಪರ ಇದ್ದಾರೆ. ಸರ್ಕಾರ ಕೂಡ ಸರ್ಕಾರಿ ವೈದ್ಯಕೀಯ ಕಾಲೇಜ್ ಪರ ಇದೆ ಎಂದರು.
ಡಾ. ರವಿ ಬಿರಾದಾರ ಮಾತನಾಡಿ, ಯತ್ನಾಳರ ಹೇಳಿಕೆಯನ್ನು ಸಾರಾಸಗಟಾಗಿ ಖಂಡಿಸುವುದಾಗಿ ತಿಳಿಸಿದರಲ್ಲದೇ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ಪ್ರಾಮಾಣಿಕವಾಗಿ, ಬದ್ಧತೆಯಿಂದ ಹೋರಾಟ ಮಾಡಿಕೊಂಡು ಬಂದಿರುವ ಹೋರಾಟಗಾರರನ್ನು ಟೀಕಿಸಿದ್ದು ಸರಿಯಲ್ಲ. ಕೂಡಲೇ ಯತ್ನಾಳರು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.
ಹೋರಾಟಗಾರ ಅನೀಲ ಹೊಸಮನಿ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಯ ಹೋರಾಟ ಪಕ್ಷಾತೀತ, ಜಾತ್ಯತೀತ, ಧರ್ಮಾತೀತವಾಗಿದ್ದ, ಶಾಸಕ ಯತ್ನಾಳರು ತಮ್ಮ ಕಾಳಜಿ, ಬದ್ಧತೆ ತೋರದೆ ಹೋರಾಟವನ್ನು ರಾಜಕೀಯಗೊಳಿಸುವ ಹುನ್ನಾರ ನಡೆಸಿದ್ದಾರೆ. ಶಿವಾನಂದ ಪಾಟೀಲ ಹಾಗೂ ತಮ್ಮ ನಡುವಿನ ಜಗಳವನ್ನು ಹೋರಾಟಗಾರರ ಹೆಗಲ ಮೇಲೆ ಬಂದೂಕಿಟ್ಟು ತೀರಿಸಿಕೊಳ್ಳಬಾರದು ಎಂದರು.
ಜಿಲ್ಲೆಯ ಶಾಸಕರು, ಸಚಿವರು ಮನಸ್ಸು ಮಾಡಿದರೆ ಸರ್ಕಾರಿ ವೈದ್ಯಕೀಯ ಕಾಲೇಜ್ ತರುವುದು ದೊಡ್ಡ ವಿಷಯವೇನಲ್ಲ, ಶರಣ ಪ್ರಕಾಶ ಪಾಟೀಲರು ಸಹ ಜಿಲ್ಲೆಯ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ಜಿಲ್ಲೆಯ ಸಚಿವರು ಮತ್ತು ಶಾಸಕರು ಬೆಳಗಾವಿ ಅಧಿವೇಶನದಲ್ಲಿ ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದರು.
ಹೋರಾಟಗಾರ ಸುರೇಶ ಬಿಜಾಪುರ ಮಾತನಾಡಿ, ಸರ್ಕಾರಿ ಹೋರಾಟ ಸಮಿತಿ ಅತ್ಯಂತ ಬದ್ಧತೆಯುಳ್ಳ ಸಮಿತಿಯಾಗಿದ್ದು ಮುಂದಿನ ದಿನಗಳಲ್ಲಿ ಇದೊಂದು ಶಾಶ್ವತ ಸಮಿತಿಯಾಗಲಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನಿಟ್ಟುಕೊಂಡು ನಿರಂತರವಾಗಿ ಹೋರಾಟ ಮುಂದುವರಿಸಲಿದೆ ಎಂದರು.
ಮುಖಂಡರಾದ ಅಕ್ರಂ ಮಾಶ್ಯಾಳಕರ, ಫಯಾಜ್ ಕಲಾದಗಿ ಮತ್ತಿತರರಿದ್ದರು.