ವಿಜಯಪುರ ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸಂಸದ ರಮೇಶ ಜಿಗಜಿಣಗಿ ಅವರು ದಿಶಾ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಡಿಸಿ ಡಾ. ಆನಂದ ಕೆ, ಸಿಇಒ ರಿಷಿ ಆನಂದ ಮತ್ತಿತರರಿದ್ದಾರೆ. 
ವಿಜಯಪುರ

ದಿಶಾ ಪ್ರಗತಿ ಪರಿಶೀಲನಾ ಸಭೆ, ಕೇಂದ್ರ ಪುರಸ್ಕೃತ ಯೋಜನೆ ಸಕಾಲಕ್ಕೆ ಪೂರ್ಣಗೊಳಿಸಲು ಸಂಸದ ರಮೇಶ ಜಿಗಜಿಣಗಿ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಜೆಜೆಎಂ ಗುಣಮಟ್ಟದ ಕಾಮಗಾರಿಗೆ ಸೂಚನೆ
  • ಜೀವನೋಪಾಯ ಚಟುವಟಿಕೆ ಶೇ.94ಪ್ರಗತಿ
  • ವೈಯಕ್ತಿಕ ಶೌಚಗೃಹ ನಿರ್ಮಾಣದಲ್ಲಿ ಶೇ.92ರಷ್ಟು ಪ್ರಗತಿ
  • ಪಲ್ಸ್ ಪೊಲಿಯೋ ಲಸಿಕೆ ಅಭಿಯಾನದಲ್ಲಿ ಶೇ.91ರಷ್ಟು ಪ್ರಗತಿ
ವಿಜಯಪುರ: ಕೇಂದ್ರ ಪುರಸ್ಕೃತ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕಲ್ಲದೇ ಸಕಾಲಕ್ಕೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದು ಸಂಸದ ರಮೇಶ ಜಿಗಜಿಣಗಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ 3ನೇ ತ್ರೈಮಾಸಿಕದ ಡಿಸೆಂಬರ್ ಅಂತ್ಯದವರೆಗಿನ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆ, ಸರ್ವ ಶಿಕ್ಷಣ ಅಭಿಯಾನ, ಕೌಶಲಾಭಿವೃದ್ಧಿ ಇಲಾಖೆ, ಕೃಷಿ, ಗ್ರಾಮೀಣಾಭಿವೃದ್ಧಿ, ಪ್ರಧಾನಮಂತ್ರಿ ಆವಾಸ ಯೋಜನೆ ಸೇರಿದಂತೆ ಕೇಂದ್ರ ಪುರಸ್ಕೃತ ಯೋಜನೆಯಡಿಯ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಕಾಮಗಾರಿ ಕೈಗೊಂಡುವ ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು ಎಂದರು.

ಜೆಜೆಎಂ ಕಾಮಗಾರಿ

ಜಲ ಜೀವನ್ ಮಿಷನ್ ಯೋಜನೆ ಪರಿಪೂರ್ಣವಾಗಿ ಅನುಷ್ಟಾನಗೊಳ್ಳಬೇಕು. ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಅಗೆದ ಸಿಸಿ ರಸ್ತೆಗಳನ್ನು ಮರು ನಿರ್ಮಿಸಬೇಕು. ಕಾಮಗಾರಿಯ ಗುಣಮಟ್ಟ ತೃಪ್ತಿಯಾದ ನಂತರವೇ ಗುತ್ತಿಗೆದಾರರಿಗೆ ಹಣ ಪಾವತಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಗೃಹ ಶೇ.92ರಷ್ಟು ಪ್ರಗತಿ ಸಾಧಿಸಲಾಗಿದ್ದು, ಸ್ವಚ್ಚ ಹಾಗೂ ನೈರ್ಮಲ್ಯ ಕುರಿತಾಗಿ ಜಾಗೃತಿ ಅಭಿಯಾನ ಕೈಗೊಳ್ಳಬೇಕು. ಜಲಧಾರೆ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಪ್ರಧಾನ ಮಂತ್ರಿ ಕೃಷಿ ಸಿಂಚಾಯ ಯೋಜನೆಯಡಿಯ ಜಲಾನಯನ ಅಭಿವೃದ್ಧಿ ಘಟಕ-2.0ದಡಿ ಕೈಗೊಂಡಿರುವ ಇಂಡಿ, ಸಿಂದಗಿ ಮತ್ತು ಮುದ್ದೇಬಿಹಾಳ ತಾಲೂಕಿನ ಜಲಾನಯನ ಪ್ರದೇಶದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ ಚಟುವಟಿಕೆಗಳು, ನೀರು ಸಂರಕ್ಷಣಾ ರಚನೆಗಳು, ಖುಷ್ಕಿ ತೋಟಗಾರಿಕಾ, ಅರಣ್ಯೀಕರಣ, ದುರ್ಬಲ ವರ್ಗದವರಿಗೆ ಜೀವನೋಪಾಯ ಚಟುವಟುಕೆಗಳಡಿ ಶೇ.94ಪ್ರಗತಿ ಸಾಧಿಸಿದ್ದು, ಮಾರ್ಚ್ ಅಂತ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಆರ್ಥಿಕ ಪ್ರಗತಿ ಸಾಧಿಸುವಂತೆ ಸೂಚಿಸಲಾಯಿತು.

ವಿದ್ಯುತ್ ಸ್ವಾವಲಂಬಿ

ಸಣ್ಣ, ಅತಿ ಸಣ್ಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಪ್ರಧಾನ ಮಂತ್ರಿ ಕುಸುಮ್-ಬಿ ಯೋಜನೆಯಡಿ ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಡಬೇಕು. 10 ಎಚ್.ಪಿ ಸಾಮರ್ಥ್ಯದವರೆಗೆ ಸ್ವತಂತ್ರವಾಗಿ ಸೌರಚಾಲಿತ ಮೋಟಾರ್‌ಗಳನ್ನು ಅಳವಡಿಸುವ ಯೋಜನೆ ಇದಾಗಿದ್ದು, ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.30 ಹಾಗೂ ರಾಜ್ಯ ಸರ್ಕಾರದ ಶೇ.50 ಸಹಾಧನ ಲಭ್ಯವಿದೆ. ಉಳಿದ ಶೇ.20 ರಷ್ಟು ರೈತರು ವಂತಿಕೆ ಭರಿಸಬೇಕಾಗುತ್ತಿದೆ. ಸೋಲಾರ್ ಪೆನಲ್ನೊಂದಿಗೆ ಮೋಟಾರ್, ಸ್ಟಾರ್ಟರ್, ಕೇಬಲ್‌ಮತ್ತು ಪೈಪ್‌ಗಳನ್ನು ಪೂರೈಸಲಾಗುವುದು.
ಪಿಎಂ ಸೂರ್ಯಘರ್ ಮುಕ್ತ ಬಿಜಲಿ ಯೋಜನೆಯಡಿ ಗ್ರಾಹಕರು ವಿದ್ಯುತ್ ಉತ್ಪಾದಿಸಿ ಬಳಸಲು ಅನುಕೂಲ ಒದಗಿಸಿದೆ. ವಿದ್ಯುತ್ ಬಿಲ್ ಉಳಿತಾಯ, ಹೆಚ್ಚುವರಿ ವಿದ್ಯುತ್ತನ್ನು ಹೆಸ್ಕಾಂಗೆ ಪೂರೈಸಿ ಹಣ ಸಂಪಾದನೆ ಮಾಡಬಹುದಾಗಿದೆ. ಈ ಯೋಜನ ಕಡಿಮೆ ಬಂಡವಾಳ ವೆಚ್ಚದಲ್ಲಿ ವಸತಿ ಮನೆಗಳ ಮೇಲ್ಛಾವಣಿಯನ್ನು ಬಳಸಿಕೊಳ್ಳಬಹುದಾಗಿದೆ ಸಹಾಯಧನವು ಲಭ್ಯವಿದೆ ಎಂದು ಹೆಸ್ಕಾಂನ ಅಧಿಕ್ಷಕ ಅಭಿಯಂತರರಾದ ಸಿದ್ದಪ್ಪ ಬಿಂಜಗೇರಿ ಸಭೆಗೆ ಮಾಹಿತಿ ನೀಡಿದರು.

ಆರೋಗ್ಯ ಕ್ಷೇತ್ರದ ಪ್ರಗತಿ

ಪಲ್ಸ್ ಲ್ಸ್ ಪೊಲಿಯೋ ಲಸಿಕೆ ಕಾರ್ಯಕ್ರಮದಡಿಯಲ್ಲಿ ಈ ತಿಂಗಳಲ್ಲಿ ಶೇ.91 ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಕಾರ್ಯಕ್ರಮದಡಿಯಲ್ಲಿ ಏಪ್ರಿಲ್ 25 ರಿಂದ ಡಿಸೆಂಬರ್ 25ರ ಅಂತ್ಯದ ವರೆಗೆ ಒಟ್ಟು 10,22,738 ಜನರಿಗೆ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಲಿಂಕ್ ಮಾಡಲಾಗಿದೆ ಎಂದು ಡಿಎಚ್‌ಒ ಡಾ. ಸಂಪತ ಗುಣಾರಿ ತಿಳಿಸಿದರು.
ಅಲ್ಲದೇ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು.
ಡಿಸಿ ಡಾ. ಆನಂದ ಕೆ, ಸಿಇಒ ರಿಷಿ ಆನಂದ, ಮೇಯರ್ ಮಡಿವಾಳಪ್ಪ ಕರಡಿ, ಭಾಗವ್ವ ಮಾದರ, ಕಾಶೀರಾಯಗೌಡ ಬಿರಾದಾರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಮತ್ತಿತರರಿದ್ದರು.