ವಿಜಯಪುರ ನಗರದಲ್ಲಿ ನಡೆಯುತ್ತಿರುವ ರೈತರ ಅಹೋರಾತ್ರಿ ಧರಣಿಗೆ ಬೆಂಬಲ ಸೂಚಿಸಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿದರು. ಜಿಲ್ಲಾಧ್ಯಕ್ಷ ಸಂಗಮೆಶ ಸಗರ, ಶಿವಾನಂದಯ್ಯ ಹಿರೇಮಠ, ವೀರಣ್ಣ ಸಜ್ಜನ ಮತ್ತಿತರರಿದ್ದಾರೆ. 
ವಿಜಯಪುರ

ಕಬ್ಬು ಬೆಳೆಗಾರರ ಹಿತ ಕಾಯದಿದ್ದರೆ ಅನಾಹುತ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಎಚ್ಚರಿಕೆ
  • ಅಹೋರಾತ್ರಿ ಧರಣಿಗೆ ಬೆಂಬಲ
  • ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
ವಿಜಯಪುರ: ಕಬ್ಬು ಬೆಳೆಗಾರರಿಗೆ ಸೂಕ್ತ ದರ ನೀಡುವುದರ ಜೊತೆಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಆಗ್ರಹಿಸಿದರು. 
ಇಲ್ಲಿನ ಗಗನ ಮಹಲ್ ಹತ್ತಿರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಬ್ಬು ಬೆಳೆಗಾರರು ಹಾಗೂ ಸಮಸ್ತ ರೈತ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ನಡೆಯುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿಗೆ ಗುರುವಾರ ಬೆಂಬಲ ಸೂಚಿಸಿ ಅವರು ಮಾತನಾಡಿದರು. 
ಸರ್ಕಾರ ಕಬ್ಬು ಬೆಳೆಗಾರರ ತಾಳ್ಮೆ ಪರೀಕ್ಷಿಸಬಾರದು. ರೈತರ ತಾಳ್ಮೆಯ ಕಟ್ಟೆ ಒಡೆದರೆ ಮುಂದೆ ದೊಡ್ಡ ಅನಾಹುತ ಎದುರಿಸಬೇಕಾಗುತ್ತದೆ ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ ಕಬ್ಬಿಗೆ 3,500 ರೂಪಾಯಿ ದರ ಕೊಡಿಸಬೇಕು ಹಾಗೂ ಸರ್ಕಾರಕ್ಕೆ ಬರುವ ತೆರಿಗೆಯಲ್ಲಿ 1,000 ಹಣ ಸೇರಿಸಿ ಕೊಡಬೇಕು ಎಂದರು. 
ಹುಲಿಜಂತಿ ಮಾಳಿಂಗರಾಯ ಮಹಾರಾಜರು ಮಾತನಾಡಿ, ನಾಡಿನ ಸಮಸ್ತ ಜನತೆಗೆ ಯಾವುದೇ -ಫಲಾಪೇಕ್ಷೆ ಇಲ್ಲದೇ ಹಗಲು ರಾತ್ರಿ ಕಷ್ಟಪಟ್ಟು ಬೆಳೆದಿರುವ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ಹೋದಲ್ಲಿ ರೈತ ಕುಟುಂಬಗಳು ಬೀದಿಗೆ ಬೀಳುತ್ತವೆ. ಮಠಾಧೀಶರು ಹಾಗೂ ರೈತರ ಸಂಬಂಧ ಬಹಳ ಅವಿನಾಭಾವವಾದದ್ದು. ರೈತರ ಈ ಹೋರಾಟಕ್ಕೆ ಈ ನಾಡಿನ ಸಮಸ್ತ ಮಠಾಧೀಶರು ಬೆಂಬಲ ವ್ಯಕ್ತಪಡಿಸುವರೆಂದರು. 
ಮಾಜಿ ಶಾಸಕ ದೇವಾನಂದ ಚವಾಣ್ ಮಾತನಾಡಿ, ಕಬ್ಬು ಬೆಳೆಗಾರರ ಈ ಹೋರಾಟ ನ್ಯಾಯಯುತವಾಗಿದೆ. ಕೂಡಲೇ ರೈತರಿಗೆ ನ್ಯಾಯ ಸಿಗಬೇಕು. ರಾಜ್ಯ ಸರ್ಕಾರ ಕೂಡಲೇ ಚರ್ಚೆ ಮಾಡಿ ಪ್ರಾಮಾಣಿಕ ಪ್ರಯತ್ನ ಮಾಡಿ ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ಕೊಡಬೇಕು ಎಂದರು. 
ಬಂಥನಾಳದ ಸಿದ್ದಲಿಂಗ ಮಹಾಸ್ವಾಮಿಗಳು, ಕೋಲಾರದ ಕೈಲಾಸನಾಥ ಮಹಾಸ್ವಾಮೀಜಿ, ಮುಖಂಡರಾದ ರಮೇಶ ಆಸಂಗಿ, ಅಶೋಕ ಚಲವಾದಿ, ಪರಸು ದಿಂಡವಾರ, ರೈತ ಮುಖಂಡರಾದ ಅಶೋಕ ಅಲ್ಲಾಪುರ, ಅಣ್ಣಾರಾಯ ಈಳಗೇರ, ಶ್ರೀನಾಥ ಪೂಜಾರಿ, ಡಾ. ಭಗವಾನ ರೆಡ್ಡಿ, ಜಗದೇವ ಸೂರ್ಯವಂಶಿ, ಈರಪ್ಪ ಕುಳೆಕುಮಟಗಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ರಾಜ್ಯ ಉಪಾಧ್ಯಕ್ಷರಾದ ಕಲ್ಲು ಸೊನ್ನದ, ಜಿಲ್ಲಾಧ್ಯಕ್ಷ ಸಂಗಮೆಶ ಸಗರ, ಶಿವಾನಂದಯ್ಯ ಹಿರೇಮಠ, ವೀರಣ್ಣ ಸಜ್ಜನ, ರಾಮನಗೌಡ ಪಾಟೀಲ, ಸಂಗಪ್ಪ ಟಕ್ಕೆ, ಲಿಂಗರಾಜ ಮೇಟಿ, ಅಭಿಷೇಕ ಹೂಗಾರ ಮತ್ತಿತರರಿದ್ದರು. 
ಕೋಲಾರದ ರೈತ ಮುಖಂಡ ಜಗದೀಶ ಸುನಗದ ಗೆಳೆಯರ ಬಳಗದಿಂದ 2,000 ರೊಟ್ಟಿ ಹಾಗೂ 50 ಕೆಜೆ ಅಕ್ಕಿಯನ್ನು ರೈತ ಹೋರಾಟದ ದಾಸೋಹಕ್ಕೆ ನೀಡಿ ಯಾವಾಗಲೂ ರೈತರಿಗೆ ಯಾವುದೇ ಕಷ್ಟ ಸಮಸ್ಯೆ ಬಂದಾಗ ಸದಾ ನಾವಿರುತ್ತೇವೆ ಎಂದರು.