ಮುದ್ದೇಬಿಹಾಳ ಪಟ್ಟಣದಿಂದ ನಾಲತವಾಡಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಹಿರೇಮುರಾಳ ಗ್ರಾಮದ ಸೇತುವೆ ಮೇಲಿರುವ ತಡೆಗೋಡೆಗಳು ಸಂಪೂರ್ಣವಾಗಿ ನಾಶವಾಗಿರುವ ದೃಶ್ಯ.
ಪಟ್ಟಣದಿಂದ ನಾಲತವಾಡಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಹಿರೇಮುರಾಳ ಗ್ರಾಮದ ಸೇತುವೆ ಮೇಲಿರುವ ತಡೆಗೋಡೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಇದರಿಂದಾಗಿ ಪದೆಪದೇ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕರ್ನಾಟಕ ಭೀಮಸೇನೆ ಜಿಲ್ಲಾ ಸಮಿತಿಯ ಯುವ ಘಟಕ ಅಧ್ಯಕ್ಷ ಪರಶುರಾಮ್ ಚಲವಾದಿ ಅವರು ಪತ್ರಿಕಾ ಪ್ರಕಟಣೆ ನೀಡಿ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಸೇತುವೆಯ ತಡೆಗೋಡೆಗಳನ್ನು ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ರಸ್ತೆ ದಿನನಿತ್ಯ ನೂರಾರು ವಾಹನ ಸಂಚಾರ ಹೊಂದಿದ್ದು, ಸೇತುವೆಯ ಎರಡೂ ಬದಿಯ ತಡೆಗೋಡೆಗಳು ಸಂಪೂರ್ಣ ಕುಸಿದು ಹೋಗಿವೆ. ಇದರಿಂದ ರಾತ್ರಿ ವೇಳೆ ಹಾಗೂ ಮಳೆಗಾಲದಲ್ಲಿ ವಾಹನ ಸವಾರರಿಗೆ ಭಾರಿ ಅಪಾಯ ಉಂಟಾಗುತ್ತಿದೆ. ಈಗಾಗಲೇ ಹಲವು ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿವೆ. ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಅಲ್ಲದೆ, ಸೇತುವೆಯ ಪಕ್ಕದಲ್ಲಿ ಗಿಡಗಂಟೆಗಳು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ವಾಹನ ಸವಾರರ ದೃಷ್ಠಿಗೆ ಅಡ್ಡಿಯಾಗುತ್ತಿದೆ. ರಸ್ತೆ ಬದಿಯ ಸ್ವಚ್ಛತೆ ಇಲ್ಲದ ಕಾರಣ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಸಂಬಂಧಪಟ್ಟ ಇಲಾಖೆ ತಕ್ಷಣವೇ ಅಲ್ಲಿರುವ ಗಿಡಗಂಟೆಗಳನ್ನು ತೆರವುಗೊಳಿಸಿ, ಸಂಪೂರ್ಣ ಸ್ವಚ್ಛತೆಗೆ ಮುಂದಾಗಿ ಸುರಕ್ಷಿತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಅಽಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ, ಕರ್ನಾಟಕ ಭೀಮಸೇನೆ ಜಿಲ್ಲಾ ಸಮಿತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.