ಬಿಡದಿ ಟೌನ್‌ಶಿಪ್ ಯೋಜನೆ ಕೈ ಬಿಡುವಂತೆ ಒತ್ತಾಯಿಸಿ ಜಿಲ್ಲಾ ಜನತಾದಳ ಪದಾಧಿಕಾರಿಗಳು ವಿಜಯಪುರದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಿದರು. ಮಲ್ಲಿಕಾರ್ಜುನ ಯಂಡಿಗೇರಿ, ಅಪ್ಪುಗೌಡ ಪಾಟೀಲ ಮನಗೂಳಿ, ರಾಜು ಹಿಪ್ಪರಗಿ ಮತ್ತಿತರರಿದ್ದಾರೆ. 
ವಿಜಯಪುರ

ಬಿಡದಿ ಟೌನ್‌ಶಿಪ್ ಯೋಜನೆ ಕೈ ಬಿಡುವಂತೆ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ರೈತ ವಿರೋಧಿ ನೀತಿ ಕೈಬಿಡಲು ಒತ್ತಾಯಿಸಿ
  • ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಮನವಿ
ವಿಜಯಪುರ: ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುತ್ತಿರುವ ಹಾಗೂ ಮುಂದಿನ ತಿಂಗಳು ಬೃಹತ್ ಪ್ರಮಾಣದಲ್ಲಿ ಭೂಸ್ವಾಧೀನ ವಿಸ್ತರಿಸಲು ಹೊರಟಿರುವ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಕೈಬಿಡಲು ಒತ್ತಾಯಿಸಿ ಜಿಲ್ಲಾ ಜನತಾದಳ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಲಾಯಿತು.
ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿರುವ ಬಡ ರೈತರ ಅತ್ಯಂತ ಫಲವತ್ತಾದ ಕೃಷಿಭೂಮಿಯನ್ನು ವಶಪಡಿಸಿಕೊಳ್ಳಲು ರಾಜ್ಯದ ಕಾಂಗ್ರೆಸ್ ಸರ್ಕಾರವು ಹೊರಡಿಸಿರುವ ಅಂತಿಮಗೆ ಅಧಿಸೂಚನೆಯು ಸಂಪೂರ್ಣವಾಗಿ ರೈತ ವಿರೋಧಿ ಹಾಗೂ ದಬ್ಬಾಳಿಕೆಯ ನೀತಿಯಾಗಿದೆ. ಪ್ರಸ್ತುತ ಸರ್ಕಾರವು ಜಾರಿಗೆ ತರುತ್ತಿರುವ ಈ ಯೋಜನೆಯು ಸಾರ್ವಜನಿಕ ಹಿತಾಸಕ್ತಿಯ ಮುಖವಾಡ ಧರಿಸಿದ್ದು, ಇದರ ಹಿಂದೆ ಬೃಹತ್ ರಿಯಲ್ ಎಸ್ಟೇಟ್ ದಂಧೆ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕೂಡಲೇ ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಡಿಸಿರುವ ಕರಾಳ ಅಂತಿಮ ಅಧಿಸೂಚನೆ ತಕ್ಷಣವೇ ರದ್ದುಗೊಳಿಸಬೇಕು. ಮುಂದಿನ ತಿಂಗಳು ಜಾರಿಗೆ ತರಲು ಉದ್ದೇಶಿಸಿರುವ 7,500ಕ್ಕೂ ಅಧಿಕ ಎಕರೆ ಭೂಸ್ವಾಧೀನದ ಪ್ರಕ್ರಿಯೆ ಆರಂಭದಲ್ಲೇ ಕೈಬಿಡಬೇಕು. ಪ್ರತಿ ತಿಂಗಳು 6 ಲಕ್ಷ ಲೀ. ಹಾಲು ಉತ್ಪಾದಿಸುವ ಹೈನುಗಾರಿಕೆ, ರೇಷ್ಮೆ ಕೃಷಿ, ರೇಷ್ಮೆ ಹುಳು ಸಾಕಾಣಿಕೆ ಮತ್ತು ತೋಟಗಾರಿಕೆಯನ್ನು ನೆಚ್ಚಿಕೊಂಡಿರುವ ಬಡ ರೈತ ಕುಟುಂಬಗಳ ಜೀವನೋಪಾಯ ಯಥಾಸ್ಥಿತಿಯಲ್ಲಿ ಮುಂದುವರಿಸಲು ಅನುಮತಿ ನೀಡುವುದು ಸೇರಿ ಮತ್ತಿತರ ಬೇಡಿಕೆ ಈಡೇರಿಸಲು ಆಗ್ರಹಿಸಲಾಯಿತು.
ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ ಮನಗೂಳಿ, ರಾಜು ಹಿಪ್ಪರಗಿ, ದಿಲಾವರ ಖಾಜಿ, ಹುಸೇನ ಬಾಗಾಯತ, ಎಸ್.ಎಸ್. ಖಾದ್ರಿ ಇನಾಮದಾರ, ಸಂಜು ಹಿರೇಮಠ, ವೀರಮ್ಮ ಚನ್ನಗಾಂವಿ ಶೆಟ್ಟಿ, ಮರೆಪ್ಪ ಗಿರಣಿ ಒಡ್ಡರ, ಕೌಸರ ಶೇಖ, ಬಿ.ಬಿ. ಪಾಟೀಲ (ಮುರಾಳ), ಪ್ರಕಾಂತ ಕಿಣಗಿ, ಪೀರಪಾಶಾ ಗಚ್ಚಿಮಹಲ, ಮನೋಜ ಬಿರಾದಾರ, ಮನ್ನಾನ ಶಾಬಾದಿ, ಜಗದೀಶ ಕೊಟ್ರಶೆಟ್ಟಿ, ಸಿದ್ದನಗೌಡ ಪಾಟೀಲ, ಶಂಕರ ಹಾಲಳ್ಳಿ, ಬಾಬು ಶಿರಣಗಾರ, ಶಿವಾಜಿ ಶಿಂಗಾಡೆ, ಶಂಕರ ಹಾಲಳ್ಳಿ ಮತ್ತಿತರರಿದ್ದರು.