ನಂದಿಹಾಳ ಪಿಯು ಗ್ರಾಮದಲ್ಲಿ ಗಾಣದೇವತೆ ವೃತ್ತವನ್ನು ತೆರವುಗೊಳಿಸಿರುವುದನ್ನು ಖಂಡಿಸಿ ವಿಜಯಪುರ ನಗರದಲ್ಲಿ ಗಾಣಿಗ ಸಮಾಜ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಯಿತು.
- ಗಾಣಿಗ ಸಮಾಜದ ವತಿಯಿಂದ ಬೃಹತ್ ಪ್ರತಿಭಟನಾ
- ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನಂದಿಹಾಳ ಪಿಯು ಗ್ರಾಮದ ಗಾಣದೇವತೆ ವೃತ್ತವನ್ನು ತೆರವುಗೊಳಿಸಿರುವುದನ್ನು ಖಂಡಿಸಿ ನಗರದಲ್ಲಿ ಭಾನುವಾರ ಗಾಣಿಗ ಸಮಾಜ ಸಂಘದ ನೇತೃತ್ವದಲ್ಲಿ ಸಾವಿರಾರು ಗಾಣಿಗ ಸಮಾಜದ ಬಂಧುಗಳು ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿದರು.
ಪ್ರತಿಭಟನೆಗೂ ಮುನ್ನ ವನಶ್ರೀ ಮಠದ ಆವರಣದಲ್ಲಿ ಸಮಾಜದ ಮುಖಂಡರು ಸಭೆ ನಡೆಸಿದರು. ಬಳಿಕ ಮಠದ ಆವರಣದಿಂದ ಆರಂಭವಾದ ಪ್ರತಿಭಟನಾ ರ‌್ಯಾಲಿಯಲ್ಲಿ ಸಾವಿರಾರು ಜನರು ಪಾಲ್ಗೊಂಡು, ಗಾಣದೇವತೆ ವೃತ್ತವನ್ನು ಕೂಡಲೇ ಮರು ಸ್ಥಾಪಿಸುವಂತೆ ಆಗ್ರಹಿಸಿದರು. ಅಲ್ಲದೆ, ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ರ‌್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗಾಣಿಗ ಸಮಾಜದ ಹಿರಿಯ ಮುಖಂಡ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಗಾಣದೇವತೆ ವೃತ್ತವನ್ನು ತೆರವುಗೊಳಿಸಿರುವುದು ಸಮಸ್ತ ಗಾಣಿಗ ಸಮಾಜದ ಭಾವನೆಗಳಿಗೆ ಧಕ್ಕೆ ತಂದಿದೆ. ಕಳೆದ 15 ವರ್ಷಗಳಿಂದ ವೃತ್ತ ಅಸ್ತಿತ್ವದಲ್ಲಿದ್ದರೂ, ಸಮಾಜದ ಮುಖಂಡರ ಗಮನಕ್ಕೂ ತಾರದೆ ಏಕಾಏಕಿ, ಅದರಲ್ಲೂ ಮಧ್ಯರಾತ್ರಿ ತೆರವುಗೊಳಿಸಿರುವ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ವೃತ್ತ ತೆರವುಗೊಳಿಸಿರುವುದು ಸರಿಯಲ್ಲ. ಒಂದು ಸಮಾಜದ ಆರಾಧ್ಯ ದೈವದ ಸಂಕೇತವಾಗಿರುವ ಪವಿತ್ರ ವೃತ್ತವನ್ನು ತೆರವುಗೊಳಿಸಲು ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಐದು ದಿನಗಳೊಳಗಾಗಿ ಗೌರವಯುತವಾಗಿ ವೃತ್ತವನ್ನು ಮರುಸ್ಥಾಪಿಸಬೇಕು. ಇಲ್ಲದಿದ್ದರೇ ಹೋರಾಟವನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಖಿಲ ಭಾರತ ಗಾಣಿಗ ಸಮಾಜ ಸಂಘದ ರಾಜ್ಯಾಧ್ಯಕ್ಷ ಸುರೇಶ ಸಜ್ಜನ, ಕಾರ್ಯಾಧ್ಯಕ್ಷ ಅಶೋಕ ನವಲಗುಂದ, ಗೌರವಾಧ್ಯಕ್ಷ ಆರ್.ಜಿ. ಪಾಟೀಲ, ಗಾಣಿಗ ಸಮಾಜ ಸಂಘದ ಜಿಲ್ಲಾಧ್ಯಕ್ಷ ಬಿ.ಬಿ. ಪಾಸೋಡಿ, ಗೌರವಾಧ್ಯಕ್ಷ ಬಿ.ಎಂ. ಪಾಟೀಲ ಕತ್ನಳ್ಳಿ, ಬಾಬು ಸಜ್ಜನ, ಅಶೋಕ ತರಡಿ, ಅಮರಪ್ಪ ಹೊಸಮನಿ, ಶರಣಪ್ಪ ಶ್ಯಾಪೇಟಿ, ಬಿ.ಕೆ. ಚೌಧರಿ, ಐ.ಎಸ್. ಶಿರಡೋಣ, ಗುರುನಾಥ ಅಂದೇವಾಡಿ, ಶ್ರೀಶೈಲ ಹಳ್ಳಿ, ನಂದು ಗಡಗಿ ಮತ್ತಿತರರಿದ್ದರು.