ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಸಚಿವ ಎಂ.ಬಿ. ಪಾಟೀಲ ಸುದ್ದಿಗೋಷ್ಠಿ ನಡೆಸಿದರು. ಶಾಸಕ ವಿಠಲ ಕಟಕದೊಂಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಅಬ್ದುಲ್‌ಹಮೀದ್ ಮುಶ್ರೀಫ್ ಮತ್ತಿತರರಿದ್ದಾರೆ. 
ವಿಜಯಪುರ

‘ವಿಬಿ ಜಿ ರಾಮ್ ಜಿ’ಗೆ ತಿರಸ್ಕಾರಕ್ಕೆ ನಿರ್ಧಾರ; ಸಚಿವ ಎಂ.ಬಿ. ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ವಿಬಿ ಜಿ ರಾಮ್ ಜಿ ಗೆ ತಿರಸ್ಕಾರಕ್ಕೆ ನಿರ್ಧಾರ
  • ಜ.22 ರಿಂದ 31ರ ವರೆಗೆ ವಿಶೇಷ ಅಧಿವೇಶನ
  • ಗ್ರಾಮೀಣ ಭಾಗಗಳಲ್ಲಿ ಜನ ಜಾಗೃತಿ ಸಭೆ
  • ಎನ್‌ಡಿಎ ಸರ್ಕಾರದ ವಿರುದ್ಧ ಹೋರಾಟ
ವಿಜಯಪುರ: ಮಹಾತ್ಮ ಗಾಂಧೀಜಿ ಅವರ ಗ್ರಾಮೀಣಾಭಿವೃದ್ಧಿಯ ಕನಸು ನನಸು ಮಾಡುವ ನಿಟ್ಟಿನಲ್ಲಿ ಮನಮೋಹನ್ ಸಿಂಗ್ ಸರ್ಕಾರ 2005ರಲ್ಲಿ ಜಾರಿಗೆ ತಂದಿದ್ದ ‘ಮಹಾತ್ಮ ಗಾಂಧಿ ರೋಜಗಾರ ಯೋಜನೆ’ ರದ್ದುಗೊಳಿಸಿರುವ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ಸಚಿವ ಎಂ.ಬಿ. ಪಾಟೀಲರು, ಹೊಸದಾಗಿ ಜಾರಿಯಾಗುತ್ತಿರುವ ‘ವಿಬಿ ಜಿ ರಾಮ್ ಜಿ’ ಯೋಜನೆಯನ್ನು ತಿರಸ್ಕರಿಸುವುದಾಗಿ ತಿಳಿಸಿದರು.
ದುಡಿಯುವ ಕೈಗಳಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಮತ್ತು ಗ್ರಾಮೀಣ ಭಾಗದ ಸರ್ವಾಂಗೀಣ ಪ್ರಗತಿಗಾಗಿ ಯುಪಿಎ ಸರ್ಕಾರ ‘ಮಹಾತ್ಮ ಗಾಂಧಿ ರೋಜಗಾರ ಯೋಜನೆ’ ಜಾರಿಗೊಳಿಸಿತ್ತು. ಆದರೆ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಹಂತ ಹಂತವಾಗಿ ಆ ಯೋಜನೆ ಕೊಲ್ಲುತ್ತಾ ಬಂದು ಇದೀಗ ಸಂಪೂರ್ಣವಾಗಿ ಇಲ್ಲವಾಗಿಸಿದೆ. ಹೀಗಾಗಿ ಗ್ರಾಮೀಣರಿಗೆ ಈ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದ್ದಾಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಈಗಾಗಲೇ ಪಂಜಾಬ್, ತೆಲಂಗಾಣ, ತಮಿಳುನಾಡು ಖಂಡನಾ ನಿರ್ಣಯ ತೆಗೆದುಕೊಂಡಿದ್ದು, ಆಂಧ್ರ ಸರ್ಕಾರ ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಕರ್ನಾಟಕ ಸರ್ಕಾರ ಕೂಡ ‘ವಿಬಿ ಜಿ ರಾಮ್ ಜಿ’ ತಿರಸ್ಕರಿಸಲು ನಿರ್ಧಾರ ಕೈಗೊಂಡಿದೆ ಎಂದರು.

ಸಾಂವಿಧಾನಿಕ ಹಕ್ಕು ಕಸಿಯುವ ಹುನ್ನಾರ

ಭಾರತ ಹಳ್ಳಿಗಳಿಂದ ಕೂಡಿದ ದೇಶ. ಹೀಗಾಗಿ ಭಾರತದ ಅಭಿವೃದ್ಧಿಯಾಗಬೇಕಾದರೆ ಹಳ್ಳಿಗಳ ಅಭಿವೃದ್ಧಿಯಿಂದ ಮಾತ್ರ ಸಾಧ್ಯ ಎಂಬುದು ಮಹಾತ್ಮ ಗಾಂಧೀಜಿಯವರ ಆಶಯವಾಗಿತ್ತು. ಹೀಗಾಗಿ 100 ಮಾನವ ದಿನಗಳನ್ನು ಸೃಜಿಸುವ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲು ಮನರೇಗಾ ಜಾರಿಗೊಳಿಸಲಾಗಿತ್ತು. ಇದರಿಂದಾಗಿ ಬಡವರು, ದಲಿತರು, ಅಲ್ಪಸಂಖ್ಯಾತರು ಹಾಗೂ ಇನ್ನಿತರ ಕೂಲಿ ಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಿತ್ತು. ಗುಳೆ ಹೋಗುವುದು ನಿಂತಿತ್ತು. ಆದರೆ, ಇದೀಗ ‘ವಿಬಿ ಜಿ ರಾಮ್ ಜಿ’ ಹೆಸರಲ್ಲಿ ಇಡೀ ಯೋಜನೆಯನ್ನೇ ಕೊಲ್ಲಲು ಕೇಂದ್ರ ಸರ್ಕಾರ ಮುಂದಾಗಿದೆ. 125 ಮಾನವ ದಿನ ಸೃಜಿಸಲಾಗಿದೆಯಾದರೂ ಸುಗ್ಗಿ ಕಾಲದಲ್ಲಿ ಅನ್ವಯವಾಗಲ್ಲ. ಅಲ್ಲದೇ, ಕೇಂದ್ರ ಸರ್ಕಾರ ಯೋಜನೆಗಳಿಗೆ ಮಾತ್ರ ಅನ್ವಯಿಸಿ ಕೆಲವೇ ಕೆಲವು ಪಂಚಾಯಿತಿಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಆ ಮೂಲಕ ಇಡೀ ಯೋಜನೆಯನ್ನೇ ಕೊಂದಂತಾಗಲಿದೆ ಎಂದು ಅಸಮಾಧಾನ ಹೊರಹಾಕಿದರು.

ಗ್ರಾಮ ಸಭೆಗಿಲ್ಲ ಅಧಿಕಾರ

ಈ ಹಿಂದೆ ಗ್ರಾಮ ಸಭೆ ಮಾಡಿ ಗ್ರಾಮಗಳಿಗೆ ಬೇಕಾದ ಬಾಂದಾರ್, ಕೃಷಿ ಹೊಂಡದಂತಹ ಕಾಮಗಾರಿಗಳನ್ನು ಕೈಗೊಳ್ಳುವ ಅವಕಾಶವಿತ್ತು, ಆದರೆ ಈಗ ಗ್ರಾಮ ಪಂಚಾಯತ್‌ಗಳು ಈ ಕಾಮಗಾರಿ ಕೈಗೊಳ್ಳುವ ಅಧಿಕಾರವನ್ನು ಹಿಂದಕ್ಕೆ ಪಡೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿಯಂಥ ಕೇಂದ್ರದ ಯೋಜನೆಗಳಿಗೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ. ಆದರೆ, ಹಿಂದಿನ ಯೋಜನೆಯಿಂದ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ತಮಗೆ ಬೇಕಾದ ಕಾಮಗಾರಿ ಕೈಗೊಳ್ಳಲು ಅವಕಾಶ ಇತ್ತು. ಬಹುಶಃ ಸ್ವಾತಂತ್ರಾೃ ನಂತರದ ಅತ್ಯಂತ ಮಹತ್ವಪೂರ್ಣ ಯೋಜನೆಗಳಲ್ಲಿ ಮನರೇಗಾ ಕೂಡ ಒಂದಾಗಿತ್ತು. ಇಂಥ ಮಹತ್ವಾಕಾಂಕ್ಷಿ ಯೋಜನೆಯನ್ನೇ ಮಣ್ಣುಪಾಲು ಮಾಡಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯ. ಗ್ರಾಮೀಣ ಜನ ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮೀಣ ಭಾಗದಲ್ಲಿ ಜಾಗೃತಿ ಸಭೆ ನಡೆಸಲಾಗುತ್ತಿದೆ ಎಂದರು.

ವಿಶೇಷ ಅಧಿವೇಶನ

ನರೇಗಾ ಯೋಜನೆ ಯಥಾಸ್ಥಿತಿಗಾಗಿ ಮುಂದುವರಿಕೆಗಾಗಿ ಹಾಗೂ ಯೋಜನೆಯ ಮೂಲಸ್ವರೂಪದಲ್ಲಿ ಯಾವ ಬದಲಾವಣೆ ಕೂಡಾ ಮಾಡದಂತೆ ನಿರ್ಣಯ ಸ್ವೀಕರಿಸುವ ನಿಟ್ಟಿನಲ್ಲಿ ವಿಶೇಷ ಅಧಿವೇಶನ ಕರೆಯಲಾಗುತ್ತಿದೆ ಎಂದು ಸಚಿವ ಪಾಟೀಲ ವಿವರಿಸಿದರು.
ಜ.22 ರಿಂದ 31ರ ವರೆಗೆ ವಿಶೇಷ ಅಧಿವೇಶನ ನಡೆಯಲಿದ್ದು, ವಿಬಿ ಜಿ ರಾಮ್ ಜಿ ತಿರಸ್ಕರಿಸುವ ಮತ್ತು ಪರ್ಯಾಯ ಮಾರ್ಗ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಲಾಗುವುದು ಎಂದರು.
ಶಾಸಕ ವಿಠಲ ಕಟಕದೊಂಡ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಾಶಂಕರ ಕೌಲಗಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ವಿಡಿಎ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಇಲಿಯಾಸ ಬೋರಾಮಣಿ, ಅಬ್ದುಲ್‌ಹಮೀದ್ ಮುಶ್ರೀಫ್, ವೈಜನಾಥ ಕರ್ಪೂರಮಠ, ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ, ಮೊಹ್ಮದ್‌ರಫೀಕ್ ಟಪಾಲ್, ಮಹಾದೇವಿ ಗೋಕಾಕ್, ಡಾ.ಬಾಬು ರಾಜೇಂದ್ರ ನಾಯಕ ಮತ್ತಿತರರಿದ್ದರು.