ಬಸವನಬಾಗೇವಾಡಿ ಪಟ್ಟಣದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಪ್ರಗತಿ ಕಾರ್ಯಗಳ ಪರಿಶೀಲನೆ ನಡೆಸಿದರು. ತಹಸೀಲ್ದಾರ್ ವೈ.ಎಸ್. ಸೋಮನಕಟ್ಟಿ ಮತ್ತಿತರ ಅಧಿಕಾರಿಗಳಿದ್ದಾರೆ. 
ವಿಜಯಪುರ

ಬಸವನಬಾಗೇವಾಡಿ ತಾಲೂಕಿಗೆ ಡಿಸಿ ಭೇಟಿ, ಪ್ರಗತಿ ಕಾರ್ಯಗಳ ಪರಿಶೀಲನೆ

ಪ್ರಮುಖ ಮುಖ್ಯಾಂಶಗಳು

  • ಬಸವನಬಾಗೇವಾಡಿ ತಾಲೂಕಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಭೇಟಿ
  • ಸರ್ಕಾರದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ
  • ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸೂಚನೆ
ವಿಜಯಪುರ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಬಸವನಬಾಗೇವಾಡಿ ತಾಲೂಕಿಗೆ ಬುಧವಾರ ಭೇಟಿ ನೀಡಿದ ಅವರು ಸ್ಥಳೀಯ ಆಡಳಿತ ಕಚೇರಿ, ಅಭಿವೃದ್ಧಿ ಕಾಮಗಾರಿ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.
ತಾಲೂಕು ಆಡಳಿತ ಸೌಧದಲ್ಲಿರುವ ತಹಸೀಲ್ದಾರ್ ಕಾರ್ಯಾಲಯದ ಭೂಮಿ ಕೇಂದ್ರದ ಪ್ರಗತಿ ಪರಿಶೀಲನೆ ನಡೆಸಿ ಜನರಿಗೆ ಸಕಾಲಕ್ಕೆ ಯೋಜನೆ ತಲುಪಿಸಿ. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದರು.
ಕಚೇರಿಯ ವಿವಿಧ ವಿಭಾಗಗಳ ಬಾಕಿಯಿರುವ ಕಡತ-ವಹಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಕಚೇರಿ ಕಾರ್ಯ ನಿಮಿತ್ತ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿದ್ದು, ಸಕಾಲದಲ್ಲಿ ಅವರ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಡಲು ಸೂಚನೆ ನೀಡಿದರು.
ಅಟಲಜೀ ಜನಸ್ನೇಹಿ ಕೇಂದ್ರಕ್ಕೆ ಭೇಟಿ ನೀಡಿ, ಕಡತಗಳ ವಿಲೇವಾರಿ ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಕಂದಾಯ ಇಲಾಖೆಯ ಭೂ ಸುರಕ್ಷಾ ಕಾರ್ಯದ ಆಧುನಿಕ ಅಭಿಲೇಖಾಲಯಕ್ಕೆ ಭೇಟಿ ನೀಡಿ, ಕಡತ-ವಹಿಗಳ ಸ್ಕ್ಯಾನಿಂಗ್ ಅಪಲೋಡಿಂಗ್ ಹಾಗೂ ಡಾಟಾ ಎಂಟ್ರಿ ಹಾಗೂ ಶಿರಸ್ತೇದಾರರ ಅನುಮೋದನೆ ಕುರಿತು ಪರಿಶೀಲಿಸಿ ಡಿಜಿಟಲ್ ದಾಖಲೆಗಳ ವಿತರಣೆಯ ಕುರಿತು ಪರಿಶೀಲಿಸಿ, ಸಾರ್ವಜನಿಕರಿಗೆ ಅನುಕೂಲಕರವಾಗುವ ದೃಷ್ಟಿಯಿಂದ ಪ್ರತಿ ನಿತ್ಯ 15000-20000 ಪುಟಗಳ ಸ್ಕ್ಯಾನಿಂಗ್ ಕಾರ್ಯ ನಿರ್ವಹಿಸುವಂತೆಯೂ ಹಾಗೂ ಸ್ಕ್ಯಾನಿಂಗ್ ಕಾರ್ಯವನ್ನು ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಆಡಳಿತ ಸೌಧದಲ್ಲಿರುವ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಉಪ ನೋಂದಣಾಧಿಕಾರಿಗಳ ಕಚೇರಿಗೆ ಹಾಗೂ ಆಡಳಿತ ಸೌಧದಲ್ಲಿರುವ ಎಲ್ಲ ಕಚೇರಿ ಹಾಗೂ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ, ಸಾರ್ವಜನಿಕರಿಂದ ಸ್ವೀಕೃತವಾಗುತ್ತಿರುವ ಅರ್ಜಿ ಹಾಗೂ ವಿಲೇವಾರಿ ಕುರಿತು ಪರಿಶೀಲನೆ ಮಾಡಿದರು.
ಪುರಸಭೆಯ ವ್ಯಾಪ್ತಿಯ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ, ಹಸಿ ಕಸ ಒಣ ಕಸ ವಿಂಗಡಿಸಿ ವಿಲೇವಾರಿ ಕ್ರಮಕ್ಕೆ ಪುರಸಭೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು.
ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅಂಗನವಾಡಿ ಕೇಂದ್ರಕ್ಕೆ ಸ್ವೀಕೃತವಾಗುತ್ತಿರುವ ಆಹಾರ ಸಾಮಗ್ರಿ, ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ನಿಯಮಿತವಾಗಿ ಆಹಾರ ವಿತರಣೆ ಮಾಡುತ್ತಿರುವ ಕುರಿತು ಪರಿಶೀಲಿಸಿದ ಅವರು, ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ, ಒಪಿಡಿ ವಿಭಾಗ, ಆಪರೇಶನ್ ಥೇಟರ್, ಡೆಂಟಲ್ ವಿಭಾಗ, ಔಷಧಗಳ ವಿತರಣೆ, ಆಕ್ಸಿಜನ್ ಘಟಕವನ್ನು ಪರಿಶೀಲಿಸಿದರು. ಆಸ್ಪತ್ರೆಯ ಸ್ವಚ್ಛತೆ ಹಾಗೂ ಅಗತ್ಯ ಆರೋಗ್ಯ ಸೇವೆಗಳ ಕುರಿತ ಅಗತ್ಯ ಸಲಹೆ ಹಾಗೂ ಸೂಚನೆ ನೀಡಿದರು.
ತಹಸೀಲ್ದಾರ್ ವೈ.ಎಸ್. ಸೋಮನಕಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.