ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ತ್ರೈಮಾಸಿಕ ಸಭೆ ನಡೆಸಿದರು. ಸಿಇಒ ರಿಷಿ ಆನಂದ, ಎಎಸ್‌ಪಿ ರಾಮನಗೌಡ ಹಟ್ಟಿ ಇದ್ದಾರೆ.
- ಜಿಲ್ಲಾ ಮಟ್ಟದ 2ನೇ ತ್ರೈಮಾಸಿಕ ಸಭೆ
- ಸರ್ಕಾರದ ಸೌಲಭ್ಯ ಒದಗಿಸಲು ಸಲಹೆ
- ವ್ಯಾಪಕವಾಗಿ ಜಾಗೃತಿ ಮೂಡಿಸಲು ಸೂಚನೆ
ವಿಜಯಪುರ: ‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ವೇತನವನ್ನು ನಿಗದಿತ ಅವಧಿಯಲ್ಲಿ ಪಾವತಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ‘ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ -2013 ರನ್ವಯ ಜಿಲ್ಲಾ ಮಟ್ಟದ 2ನೇ ತ್ರೈಮಾಸಿಕ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ನೇರ ಪಾವತಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೂ ಸಕಾಲದಲ್ಲಿ ವೇತನ ಪಾವತಿ ಮಾಡಬೇಕು. ಅಂಥವರಿಗೆ ಇಎಸ್‌ಐ, ಇಪಿಎಫ್ ಒದಗಿಸಬೇಕು ಹಾಗೂ ಪೌರ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ತಪ್ಪದೇ ನಡೆಸಬೇಕು’ ಎಂದು ಜಿಲ್ಲೆಯ ವಿವಿಧ ಪುರಸಭೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
‘ಪ್ರತಿಯೊಬ್ಬ ಪೌರ ಕಾರ್ಮಿಕರಿಗೆ ಪ್ರತ್ಯೇಕ ಆರೋಗ್ಯ ಕಾರ್ಡ್ ಮಾಡಿಸಬೇಕು. ಅವರ ಆರೋಗ್ಯ ತಪಾಸಣೆ ಹಾಗೂ ಔಷಧೋಪಚಾರ ವಿವರ ಇರುವುದರಿಂದ ಅವರ ಆರೋಗ್ಯದ ದೃಷ್ಟಿಯಿಂದ ಅನುಕೂಲವಾಗಿರುತ್ತದೆ. ವೈದ್ಯರ ಬಳಿ ಎಲ್ಲ ಮಾಹಿತಿ ದಾಖಲೆ ಇರುವುದರಿಂದ ಪೌರ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಇದು ಬಹು ಮುಖ್ಯವಾಗಿದೆ. ಹಾಗಾಗಿ ಅವರ ಆರೋಗ್ಯ ತಪಾಸಣೆ ಕಡ್ಡಾಯವಾಗಿದೆ’ ಎಂದರು.
‘ಎಲ್ಲ ಪೌರ ಕಾರ್ಮಿಕರಿಗೆ ಸಮವಸ್ತ್ರ ಹಾಗೂ ಗುರುತಿನ ಚೀಟಿ ಕಡ್ಡಾಯವಾಗಿ ಒದಗಿಸಬೇಕು. ಯಾರಿಗೆ ಈವರೆಗೆ ನೀಡಿಲ್ಲ ಅವರಿಗೆ ತಕ್ಷಣ ನೀಡಬೇಕು. ಜೊತೆಗೆ ಸುರಕ್ಷತಾ ಪರಿಕರಗಳಾದ ಹ್ಯಾಂಡ್ ಗ್ಲೌಜ್, ಗನ್‌ಬೂಟ್ಸ್ ಹಾಗೂ ಮಾಸ್ಕ್ ಕಡ್ಡಾಯವಾಗಿ ನೀಡಬೇಕು. ಅವರ ವಿಶ್ರಾಂತಿಗೆ ಮಹಾನಗರ ಪಾಲಿಕೆಯಲ್ಲಿ ಸ್ಥಳಾವಕಾಶ ಕಲ್ಪಿಸಬೇಕು. ಅಲ್ಲಿ ಕುಡಿಯುವ ನೀರು, ಶೌಚಗೃಹ ಇರುವುದು ಕಡ್ಡಾಯ’ ಎಂದರು.
‘ಪೌರ ಕಾರ್ಮಿಕರಿಗೆ ಸರ್ಕಾರದಿಂದ ನೀಡಬೇಕಾಗಿರುವ ಸೌಲಭ್ಯ ಹಾಗೂ ಯೋಜನೆಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯ ಪ್ರಗತಿ ವರದಿ ಅವಲೋಕಿಸಿದ ಅವರು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಯಂ ನೌಕರರು 592 ಇದ್ದು ಇದರಲ್ಲಿ 314 ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ಒದಗಿಸಿ ಅವರಿಗೆ ನೆರವು ಒದಗಿಸಿದೆ. ವಿಜಯಪುರ ಪಾಲಿಕೆ ವ್ಯಾಪ್ತಿಯಲ್ಲಿ 116 ಮನೆಗಳ ಹಕ್ಕುಪತ್ರ ನೀಡಲಾಗಿದೆ. ಬಿಎಲ್ ಸಿ 198 ಹಾಗೂ ಎಎಚ್‌ಪಿ 116 ಸೇರಿ 314 ಮನೆಗಳು ಅನುಮೋದನೆಗೊಂಡಿದ್ದು, ಬಿಎಲ್‌ಸಿ 150 ಮನೆಗಳು ಮುಕ್ತಾಯವಾಗಿವೆ. ಬಾಕಿ ಉಳಿದ ಮನೆಗಳ ಕಾಮಗಾರಿಗೆ ವೇಗದ ಸ್ಪರ್ಶ ನೀಡಿ ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದರು.
‘ಎಂಎಸ್ ಕಾಯ್ದೆ 2013ರ ಸೆಕ್ಷನ್ 13 ಹಾಗೂ 16ರನ್ವಯ ಯಾವುದೇ ಮ್ಯಾನ್ಯುವೆಲ್ ಸ್ಕ್ವಾವೆಂಜರ್ ಬಳಕೆ ಅಪರಾಧವಾಗಿದೆ. ಹಾಗಾಗಿ ಕಡ್ಡಾಯವಾಗಿ ಯಂತ್ರೋಪಕರಣಗಳನ್ನು ಬಳಕೆ ಮಾಡಬೇಕು. ಈ ವಿಷಯದಲ್ಲಿ ಮುಖ್ಯಾಧಿಕಾರಿಗಳು ಗ್ರಾಪಂ ಅಧಿಕಾರಿಗಳು ನಿಗಾ ವಹಿಸಬೇಕು’ ಎಂದರು.
‘ಕರ್ನಾಟಕ ರಾಜ್ಯ ಸಪಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮೂಲಕ ಅನುಷ್ಟಾನಗೊಳ್ಳುವ ಉದ್ಯಮಶೀಲತಾ ಯೋಜನೆ ಅರ್ಹರಿಗೆ ತಲುಪಿಸಬೇಕು. ಸಾಲಸೌಲಭ್ಯಕ್ಕೆ ಸಲ್ಲಿಕೆಯಾಗುವ ಬ್ಯಾಂಕ್‌ನಲ್ಲಿ ಬಾಕಿ ಇರದಂತೆ ನೋಡಿಕೊಂಡು ಬ್ಯಾಂಕಿನವರೊಂದಿಗೆ ಸಂವಹನ ಸಾಧಿಸಬೇಕು. ಸ್ವಾವಲಂಬಿ ಸಾರಥಿ ಯೋಜನೆ, ನೇರ ಸಾಲ ಯೋಜನೆ ಸೇರಿ ನಿಗಮದಿಂದ ಅನುಷ್ಟಾನಗೊಳಿಸುವ ಯೋಜನೆಯು ಯಾವುದೇ ಸಮಸ್ಯೆಯಿಂದ ಬಾಕಿ ಉಳಿಯಬಾರದು. ಸಂಬಂಧಿಸಿದ ಅಧಿಕಾರಿಗಳು ಸಮನ್ವಯ ಸಾಧಿಸಿ ಫಲಾನುಭವಿಗಳಿಗೆ ಯೋಜನೆ ಲಾಭ ತಲುಪಿಸಬೇಕು’ ಎಂದು ಸಲಹೆ ನೀಡಿದರಲ್ಲದೇ ಈ ಯೋಜನೆ ಕುರಿತ ವ್ಯಾಪಕ ಜಾಗೃತಿ ಮೂಡಿಸಬೇಕು’ ಎಂದರು.
ಸಫಾಯಿ ಕರ್ಮಚಾರಿ ನಾಮನಿರ್ದೇಶಿತ ಸದಸ್ಯ ಚೆನ್ನು ಕಟ್ಟಿಮನಿ ಮಾತನಾಡಿ, ‘ಪೌರ ಕಾರ್ಮಿಕರಿಗೆ ಸುರಕ್ಷತೆ ದೃಷ್ಟಿಯಿಂದ ಸುರಕ್ಷಾ ಪರಿಕರಗಳನ್ನು ಬಳಕೆಗೆ ಜಾಗೃತಿ ಮೂಡಿಸಬೇಕು. ಅವರಿಗೆ ಆರೋಗ್ಯದ ಬಗ್ಗೆ ಮಾನವೀಯ ಹಿನ್ನೆಲೆಯಲ್ಲಿ ಅವರ ಅನುಪಮ ಸೇವೆಯ ಪ್ರತಿಯಾಗಿ ಅವರಿಗಿರುವ ಸೌಲಭ್ಯ ಒದಗಿಸುವಂತೆ’ ಸಭೆಗೆ ಕೋರಿದರು.
ಜಿಪಂ ಸಿಇಒ ರಿಷಿ ಆನಂದ, ಎಎಸ್‌ಪಿ ರಾಮನಗೌಡ ಹಟ್ಟಿ, ನಾಮನಿರ್ದೇಶಿತ ಸದಸ್ಯ ಮಹಾದೇವ ಎಸ್.ಕಾಂಬಳೆ, ದಯಾನಂದ ಗಿರಮಲ್ಲಪ್ಪ ಅಲ್ಲಿಬಾದಿ, ಮಹಾದೇವಿ ಮಳಸಿದ್ಧ ಹಾದಿಮನಿ ಇತರರಿದ್ದರು.