- ಜಿಲ್ಲೆಯಲ್ಲಿ ಶೇ.90 ಮ್ಯಾಪಿಂಗ್ ಪೂರ್ಣ
- ವಿಶೇಷ ಪರಿಷ್ಕರಣೆ ವೇಳಾ ಪಟ್ಟಿ ಪ್ರಕಟ
- ಮತಗಟ್ಟೆಗಳಿಗೆ 2092 ಬಿಎಲ್‌ಒಗಳ ನೇಮಕ
ವಿಜಯಪುರ: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆ ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಶೇ.90ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ ತಿಳಿಸಿದರು.
ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಸಾರ್ವಜನಿಕರಲ್ಲಿ ಯಾವುದೇ ಗೊಂದಲಗಳಾಗದಂತೆ ಪಾರದರ್ಶಕವಾಗಿ ಎಸ್.ಐ.ಆರ್ ಪ್ರಕ್ರಿಯೆ ನಡೆಲಾಗುವುದು. ಅರ್ಹ ಯಾವೊಬ್ಬ ಮತದಾರನೂ ಪಟ್ಟಿಯಿಂದ ಹೊರಗುಳಿಯಬಾರದು. ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಆ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಸುತ್ತಿರುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಚುನಾವಣಾ ಆಯೋಗದ ಮಾರ್ಗಸೂಚಿಯಂತೆ 2002ರ ಮತದಾರರ ಪಟ್ಟಿಯನ್ನು ಮಾನದಂಡವಾಗಿಟ್ಟುಕೊಂಡು ಪ್ರಸ್ತುತ ಇರುವ 2025ರ ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಹಾಗೂ ಮ್ಯಾಪಿಂಗ್ ಪ್ರಕ್ರಿಯೆ ನಡೆಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲೆಯಲ್ಲಿ ಈಗಾಗಲೇ ಶೇ.90ರಷ್ಟು ಮ್ಯಾಪಿಂಗ್ ಆಗಿದೆ ಎಂದರು.
ವಿಶೇಷ ಪರಿಷ್ಕರಣೆ ಅಂಗವಾಗಿ ಜೂನ್ 20 ರಿಂದ 29ರವರೆಗೆ ಪೂರ್ವಸಿದ್ಧತೆ, ತರಬೇತಿ ಮತ್ತು ಮುದ್ರಣ ಕಾರ್ಯಗಳು ನಡೆಯಲಿವೆ. ಜೂನ್ 30 ರಿಂದ ಜುಲೈ 29 ರವರೆಗೆ ಬಿ.ಎಲ್.ಒ.ಗಳು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಹಾಗೂ ಪರಿಶೀಲನೆ ನಡೆಸಲಿದ್ದಾರೆ. ತದನಂತರ ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.
ಆಗಸ್ಟ್ 5ರಿಂದ ಅಕ್ಟೋಬರ್ 3ರವರೆಗೆ ನೋಟಿಸ್ ಹಂತ ಹಾಗೂ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುವುದು. ಅಕ್ಟೋಬರ್ 7 ರಂದು ಮತದಾರರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.
2092 ಬಿಎಲ್‌ಒಗಳು
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಒಟ್ಟು 246 ಮತಗಟ್ಟೆಗಳಿದ್ದು, 246 ಬಿಎಲ್‌ಒಗಳು ಹಾಗೂ 20 ಬಿಎಲ್ ಒಗಳ ಮೇಲೆ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ. ದೇವರಹಿಪ್ಪರಗಿ ಕ್ಷೇತ್ರದಲ್ಲಿ ಒಟ್ಟು 252 ಮತಗಟ್ಟೆಗಳಿಗೆ 252 ಬಿಎಲ್‌ಒಗಳಿದ್ದು, ಅವರಿಗೆ 23 ಜನ ಮೇಲ್ವಿಚಾರಕರಿದ್ದಾರೆ. ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದಲ್ಲಿ 231 ಮತಗಟ್ಟೆಗಳಿಗೆ 231 ಬಿಎಲ್‌ಒಗಳಿದ್ದು, 21 ಮೇಲ್ವಿಚಾರಕರಿದ್ದಾರೆ. ಬಬಲೇಶ್ವರ ಮತಕ್ಷೇತ್ರದಲ್ಲಿ ಒಟ್ಟು 244 ಮತಗಟ್ಟೆಗಳಿದ್ದು, 244 ಬಿಎಲ್ ಒಗಳು ಕಾರ್ಯನಿರ್ವಹಿಸಲಿದ್ದು, ಇವರ ಮೇಲೆ 23 ಮೇಲ್ವಿಚಾರಕರಿದ್ದಾರೆ. ವಿಜಯಪುರ ನಗರ ಮತಕ್ಷೇತ್ರದಲ್ಲಿ ಒಟ್ಟು 285 ಮತಗಟ್ಟೆಗಳಿದ್ದು, 285 ಬಿಎಲ್ ಒಗಳಿಗೆ 28 ಮೇಲ್ವಿಚಾರಕರು ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ನಾಗಠಾಣ ವಿಧಾನಸಭೆ ಕ್ಷೇತ್ರದಲ್ಲಿ 299 ಮತಗಟ್ಟೆಗಳಿದ್ದು, 299 ಬಿಎಲ್‌ಒಗಳಿಗೆ 30 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಇಂಡಿ ಮತಕ್ಷೇತ್ರದಲ್ಲಿ 268 ಮತಗಟ್ಟೆಗಳಿದ್ದು, 268 ಬಿಎಲ್‌ಒಗಳು ಹಾಗೂ 33 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ. ಸಿಂದಗಿ ಮತಕ್ಷೇತ್ರದಲ್ಲಿ ಒಟ್ಟು 267 ಮತಗಟ್ಟೆಗಳಿದ್ದು, 267 ಬಿಎಲ್ ಒಗಳು ಹಾಗೂ 21 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಒಟ್ಟು 2092 ಮತಗಟ್ಟೆಗಳಿಗೆ 2092 ಬಿಎಲ್ ಒಗಳಿದ್ದು, ಅವರ ಮೇಲೆ 199 ಜನ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಬಿಎಲ್‌ಒಗಳ ಪಾತ್ರ ಪ್ರಮುಖ
ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಕಾರ್ಯದ ಸಲುವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ- 1950 ಕೇಂದ್ರ ಸ್ಥಾಪಿಸಲಾಗಿದೆ. ಸಾರ್ವಜನಿಕರು ಈ ಕೇಂದ್ರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು.
ಈ ವಿಶೇಷ ಪ್ರಕ್ರಿಯೆಯಲ್ಲಿ ಬಿಎಲ್‌ಒಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಇದರಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಲು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿಯೊಂದೂ ಮತಗಟ್ಟೆಗೆ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡುವಂತೆ ರಾಜಕೀಯ ಪಕ್ಷಗಳಿಗೆ ತಿಳಿಸಲಾಗಿದೆ ಎಂದರು.
ವಿಶೇಷ ಸಮಗ್ರ ಪರಿಷ್ಕರಣೆಯು ಮತದಾರರು, ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಆಯೋಗದ ಎಲ್ಲ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡಿರುವ ಪಾರದರ್ಶಕ ಪ್ರಕ್ರಿಯೆಯಾಗಿದ್ದು, ಪರಿಷ್ಕರಣೆ ಪ್ರಕ್ರಿಯೆ ವೇಳೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ, ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು (ಎನ್ಯುಮರೇಶನ್) ವಿತರಣೆ ಹಾಗೂ ಸಂಗ್ರಹ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮನೆ ಗಣತಿ ಸಹಕಾರಕ್ಕೆ ಕೋರಿಕೆ
ಪ್ರತಿಯೊಬ್ಬ ಮತದಾರರ ಮನೆ ಬಾಗಿಲಿಗೆ ಬಿಎಲ್‌ಒಗಳ ಮೂಲಕ ಗಣತಿ ನಮೂನೆ ತಲುಪಿಸಲಾಗುವುದು. ಇದರಲ್ಲಿ ಮತದಾರರ ಹೆಸರು, ಎಪಿಕ್ ಸಂಖ್ಯೆ, ಸಂಬಂಧಿಕರ ಹೆಸರು ಹಾಗೂ ವಿಧಾನಸಭಾ ಕ್ಷೇತ್ರದ ವಿವರಗಳು ಇರಲಿವೆ. ಬಿಎಲ್‌ಒಗಳು ಮನೆಗಳಿಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಿ, ಗಣತಿ ನಮೂನೆಗಳನ್ನು ತಲುಪಿದ ನಂತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಮತದಾರರಿಂದ ದೃಢೀಕರಿಸಿಕೊಂಡು ಸಹಿ ಪಡೆದು ವಾಪಸ್ ತರಲಿದ್ದಾರೆ. ಸಾರ್ವಜನಿಕರು ಗಣತಿ ನಮೂನೆ ಸ್ವೀಕರಿಸಿ, ಪರಿಶೀಲಿಸಿ ಕಡ್ಡಾಯವಾಗಿ ಬಿಎಲ್‌ಒಗಳಿಗೆ ವಾಪಸ್ ನೀಡಬೇಕು ಎಂದು ಡಿಸಿ ಡಾ.ಆನಂದ ಕೆ ತಿಳಿಸಿದರು.
ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು. ನೊಟೀಸ್ ಹಂತ ಹಾಗೂ ಹಕ್ಕು ಮತ್ತು ಆಕ್ಷೇಪಣೆ ವಿಲೇವಾರಿ ಆಗಸ್ಟ್ 5 ರಿಂದ 3 ಅಕ್ಟೋಬರವರೆಗೆ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳ ಇತ್ಯರ್ಥವಾದ ಬಳಿಕ ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಹಾಗೂ ವಿಜಯಪುರ ತಹಸೀಲ್ದಾರ್ ಪ್ರಶಾಂತ ಚನಗೊಂಡ ಇತರರಿದ್ದರು.