ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಆನಂದ ಕೆ. ಅವರು ಕರ್ನಾಟಕ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯಗಳ ಒಂದನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಜಿಪಂ ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ ಇತರರಿದ್ದಾರೆ.
- ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
- ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗಕ್ಕೆ ಸೌಲಭ್ಯ
- ಪ್ರಮುಖ ಬೇಡಿಕೆಗಳಿಗೆ ಸದಸ್ಯರ ಒತ್ತಾಯ
ವಿಜಯಪುರ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರು ವಾಸಿಸುವ ಕಾಲನಿಗಳಿಗೆ ಮೂಲ ಸೌಕರ್ಯ ಒದಗಿಸಿ, ಸರ್ಕಾರದ ಯೋಜನೆಗಳನ್ನು ಸಕಾಲಕ್ಕೆ ತಲುಪಿಸಲು ಜಿಲ್ಲಾಧಿಕಾರಿ ಆನಂದ ಕೆ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯಗಳ ಒಂದನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮುದಾಯ ಕೇಂದ್ರ, ಭೂ ಒಡೆತನ, ಅಂಗನವಾಡಿ ಕೇಂದ್ರ, ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಬೊರ್‌ವೆಲ್ ಕೊರೆಯಿಸುವ ಬಗ್ಗೆ ಸದಸ್ಯರು ವಿಷಯ ಪ್ರಸ್ತಾಪಿಸಿದ್ದು, ಈ ಕುರಿತು ಗಮನ ಹರಿಸಬೇಕು. ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ಮೂಲ ಸೌಲಭ್ಯ ಒದಗಿಸಿ, ಈ ಸಮುದಾಯದ ಕಾಲನಿಗಳ ಮಕ್ಕಳಿಗಾಗಿ ಅಂಗನವಾಡಿ ಸೌಲಭ್ಯ ಒದಗಿಸಿದ್ದು, ಸಮರ್ಪವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.
ಈ ಜನಾಂಗದವರ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದ್ದು, ಅವರಿಗೆ ದೊರಕಿಸಬೇಕಾದ ಸೌಲಭ್ಯಗಳನ್ನು ತಲುಪಿಸಿ, ಜನಾಂಗದ ಆರ್ಥಿಕ ಅಭಿವೃದ್ಧಿಗಾಗಿ ಇರುವ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿ. ಆರ್ಥಿಕ ಸ್ವಾವಲಂಬನೆ ಹೊಂದಲು ಈ ಸಮುದಾಯಗಳಿಗೆ ಸರ್ಕಾರ ನೀಡುವ ಆರ್ಥಿಕ ಬೆಂಬಲದ ಯೋಜನೆಗಳ ಬಗ್ಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಿ. ನಿಗಮದಿಂದ ಅನುಷ್ಟಾನಗೊಳ್ಳುವ ಸರ್ಕಾರದ ವಿವಿಧ ಸೌಲಭ್ಯ- ಸವಲತ್ತುಗಳನ್ನು ಅರ್ಹರು ಪಡೆದುಕೊಳ್ಳಲು ತಿಳಿವಳಿಕೆ ನೀಡುವಂತೆ ಸೂಚಿಸಿದರು.
2022 ರಿಂದ 2025-26ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಯಡಿ ನಿಗದಿಪಡಿಸಿರುವ ಭೌತಿಕ ಮತ್ತು ಆರ್ಥಿಕ ಗುರಿಗಳ ಮಾಹಿತಿ ವಿವರ ಸಭೆಗೆ ಮಂಡಿಸಲಾಯಿತು.
ಈಗಾಗಲೇ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಉದ್ಯಮಶೀಲತಾ, ಸ್ವಾವಲಂಬಿ ಸಾರಥಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ವಿಳಂಬವಾಗದಂತೆ ಕ್ರಮ ವಹಿಸಿ ಯೋಜನೆ ಲಾಭ ಪಡೆದುಕೊಳ್ಳಲು ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಈ ಸಮುದಾಯದ ಕಟ್ಟಡ ಕಾರ್ಮಿಕರಿಗೆ ಕಾರ್ಮಿಖ ಕಾರ್ಡ್ ವಿತರಿಸಿ ಅವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯ ಒದಗಿಸಲು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಮಕ್ಕಳ ಶಿಕ್ಷಣಕ್ಕಾಗಿ ಗ್ರಂಥಾಲಯ ಸ್ಥಾಪನೆ, ನಗರದ ವಾರ್ಡ್ ನಂ.6ರಲ್ಲಿ ಸಮುದಾಯ ಭವನದ ಮುಂಭಾಗದಲ್ಲಿರುವ ಚರಂಡಿ ಸಮರ್ಪಕ ಕಾಮಗಾರಿ, ಅತಿ ಹೆಚ್ಚು ಜನ ವಾಸಿಸುವ ಸ್ಥಳದಲ್ಲಿ ನ್ಯಾಯಬೆಲೆ ಅಂಗಡಿ ಸ್ಥಾಪನೆ, ಬೀದಿ ದೀಪ, ಈ ಸಮುದಾಯ ವಾಸಿಸುವ ಕಾಲನಿಯಲ್ಲಿ ಮೂಲ ಸೌಕರ್ಯ ಒದಗಿಸಿ ಅಭಿವೃದ್ಧಿ ಪಡಿಸುವಂತೆ ಸಮಿತಿ ಸದಸ್ಯರು ಕೋರಿದರು.
ಜಿಪಂ ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀಣ್ ಸೌದಾಗರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಪತಕುಮಾರ ಗುಣಾರಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಹೆಸ್ಕಾಂ ಅಧಿಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಮತ್ತು ಬುಡಕಟ್ಟು ಸಮುದಾಯದ ಯೋಜನೆಗಳ ಅನುಷ್ಟಾನ ಸಮಿತಿ ಸದಸ್ಯರಾದ ಸುನೀಲ ನಾರಾಯಣ ಭಜಂತ್ರಿ, ಸಂಜೀವಕುಮಾರ ದಶವಂತ, ಧರ್ಮಣ್ಣ ವಿಭೂತಿ, ರಾಹುಲ ಶಿಳ್ಳಿಕ್ಯಾತರ ಇತರರಿದ್ದರು.