ವಿಜಯಪುರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಸಭೆ ನಡೆಸಿದರು. ಎಸ್‌ಪಿ ಲಕ್ಷ್ಮಣ ನಿಂಬರಗಿ, ಆಯುಕ್ತ ವಿಜಯ ಮೆಕ್ಕಳಕಿ, ಮೇಯರ್ ಎಂ.ಎಸ್. ಕರಡಿ ಇತರರಿದ್ದಾರೆ. 
ವಿಜಯಪುರ

ಗಣೇಶೋತ್ಸವ ಹಿನ್ನೆಲೆ, ಶಾಶ್ವತ ಹೊಂಡ ನಿರ್ಮಾಣಕ್ಕೆ ಸ್ಥಳ ಗುರುತಿಸಲು ಡಿಸಿ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಪಾಲಿಕೆಯಲ್ಲಿ ಪೂರ್ವಭಾವಿ ಸಭೆ
  • ಮಹಾಮಂಡಳಗಳ ಪ್ರಮುಖರು ಭಾಗಿ
  • ರಾಜಕೀಯ ಧುರೀಣರಿಂದ ಸಲಹೆ
  • ಮಹತ್ವದ ನಿರ್ಧಾರಗಳಿಗೆ ಸಹಮತ

ವಿಜಯಪುರ: ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಶಾಶ್ವತ ಹೊಂಡ ನಿರ್ಮಿಸಲು ಸ್ಥಳ ಗುರುತಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಗಣೇಶೋತ್ಸವ ಹಿನ್ನೆಲೆ ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಗಜಾನನ ಮಹಾಮಂಡಳಿಗಳು, ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ವ್ಯಾಪ್ತಿಯಲ್ಲಿ ವರ್ಷದಿಂದ ವರ್ಷಕ್ಕೆ ಗಣೇಶೋತ್ಸವ ಜೋರಾಗುತ್ತಿದೆ. ಹೀಗಾಗಿ ವಿಸರ್ಜನೆಗೆ ಅನುಕೂಲ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ವಿಜಯಪುರ ನಗರದ ಐತಿಹಾಸಿಕ ಸ್ಮಾರಕವಾದ ತಾಜ್‌ಬಾವಡಿಯನ್ನು ಪ್ರಸ್ತುತ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಸಂಸ್ಥೆಯು ಪುನರುಜ್ಜೀವನಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ತಾಜ್‌ಬಾವಡಿಯಲ್ಲಿ ವಿಸರ್ಜನಾ ಹೊಂಡ ನಿರ್ಮಿಸಿದರೆ ಸ್ಥಳಾವಕಾಶ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ, ನಗರದ ಬೇರೆ ಬೇರೆ ಸೂಕ್ತ ಸ್ಥಳಗಳಲ್ಲಿ ಶಾಶ್ವತ ಹೊಂಡ ನಿರ್ಮಿಸುವ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.
ಗಜಾನನ ಮಹಾಮಂಡಳದ ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಜಂಟಿ ತಂಡವು ಆಗಸ್ಟ್ 27 ರಂದು ನಗರದ ವಿವಿಧ ಜಾಗಗಳಿಗೆ ಭೇಟಿ ನೀಡಿ, ಸ್ಥಳ ವೀಕ್ಷಣೆ ನಡೆಸಲಿದೆ. ಸೂಕ್ತ ಸ್ಥಳವನ್ನು ಅಂತಿಮವಾಗಿ ಗುರುತಿಸಿದ ನಂತರ, ಈ ವಿಷಯವನ್ನು ವಿಜಯಪುರ ಮಹಾನಗರ ಪಾಲಿಕೆಯ ಮುಂಬರುವ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ಸಭೆ ತೀರ್ಮಾನಿಸಿತು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಹಾನಗರ ಪಾಲಿಕೆ ಮೇಯರ್ ಎಂ.ಎಸ್. ಕರಡಿ, ಉಪ ಮೇಯರ್ ಸುಮಿತ್ರಾ ಜಾಧವ್, ಎಸ್‌ಪಿ ಲಕ್ಷ್ಮಣ ನಿಂಬರಗಿ, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಇತರರಿದ್ದರು.