- ಕ್ರಿಪ್ಟೊ ಕರೆನ್ಸಿ ಟ್ರೇಡಿಂಗ್‌ನಲ್ಲಿ ರೂ.12 ಲಕ್ಷ ಗಾಯಾಬ್
- ಆನ್‌ಲೈನ್ ಹೂಡಿಕೆಯಲ್ಲಿ ರೂ.18 ಲಕ್ಷ ವಂಚನೆ
- ರೂ.6 ಲಕ್ಷ ಕಳೆದುಕೊಂಡ ಇಲೆಕ್ಟ್ರಿಶಿಯನ್
- ಗುತ್ತಿಗೆದಾರನಿಗೆ ರೂ.31 ಲಕ್ಷ ಪಂಗನಾಮ
ವಿಜಯಪುರ: ಹೆಚ್ಚುತ್ತಿರುವ ಸೈಬರ್ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದ್ದರೂ ಪ್ರಜ್ಞಾವಂತರೇ ಮೋಸ-ವಂಚನೆಗೆ ಒಳಗಾಗುತ್ತಿರುವುದು ವಿಪರ್ಯಾಸ !
ಪ್ರಸಕ್ತ ಸಾಲಿನಲ್ಲಿ ಘಟಿಸಿದ ವಿವಿಧ ಪ್ರಮುಖ ಪ್ರಕರಣಗಳನ್ನು ಅವಲೋಕಿಸಿದಾಗ ಆನ್‌ಲೈನ್ ಮೋಸ-ವಂಚನೆಗೆ ಒಳಗಾದವರಲ್ಲಿ ನಿವೃತ್ತ ಶಿಕ್ಷಕರು, ಸರ್ಕಾರಿ ನೌಕರರು, ವೈದ್ಯರು, ಇಂಜಿನಿಯರ್‌ಗಳು, ಗುತ್ತಿಗೆದಾರರೇ ಆಗಿದ್ದಾರೆ. ಹೆಚ್ಚಿನ ಹಣದ ಆಸೆಗಾಗಿ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿರುವ ಇವರುಗಳು ಹೂಡಿದ ಹಣ ವಾಪಸ್ ಬರದೇ ಇದ್ದಾಗ ಸಹಾಯಕ್ಕಾಗಿ ಪೊಲೀಸರ ಮೊರೆ ಇಟ್ಟಿದ್ದಾರೆ. ಈಗಾಗಲೇ ಇಂಥ ಹಲವು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಹೊಸದಾಗಿ ದಾಖಲುಗೊಂಡ ಪ್ರಕರಣಗಳನ್ನು ಸವಾಲಾಗಿ ಸ್ವೀಕರಿಸಿದ್ದಾರಾದರೂ ಪ್ರಜ್ಞಾವಂತರೇ ಇಂಥ ಮೋಸ-ವಂಚನೆಗಳಿಗೆ ಒಳಗಾಗುತ್ತಿರುವುದಕ್ಕೆ ಖೇದ ವ್ಯಕ್ತಪಡಿಸಿದ್ದಾರೆ.
ಸೈಬರ್ ವಂಚನೆ ಪ್ರಕರಣಗಳಾಗಲಿ, ಬ್ಯಾಂಕ್ ದರೋಡೆ ಪ್ರಕರಣಗಳಾಗಲಿ, ಕೊಲೆ-ಸುಲಿಗೆ ಮತ್ತು ಕಳ್ಳತನದ ಪ್ರಕರಣವೇ ಆಗಿರಲಿ ಈವರೆಗೆ ಪತ್ತೆ ಹಚ್ಚದೇ ಬಿಟ್ಟ ಪ್ರಕರಣಗಳ ಉದಾಹರಣೆಯೇ ಇಲ್ಲ. ಮನಗೂಳಿಯ ಕೆನರಾ ಬ್ಯಾಂಕ್, ಚಡಚಣದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣ, ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸುವ ಪ್ರಕರಣ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪೊಲೀಸರಿಗೆ ಇದೀಗ ಹೊಸದಾಗಿ ದಾಖಲಾಗಿರುವ ಮೋಸ ಮತ್ತು ವಂಚನೆ ಪ್ರಕರಣಗಳು ಕೂಡ ಸವಾಲಾಗಿವೆಯಾದರೂ ಸಾಕಷ್ಟು ಜಾಗೃತಿ ಬಳಿಕವೂ ಮೋಸ-ವಂಚನೆಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಿರುವುದು ತಲೆ ನೋವಾಗಿ ಪರಿಣಮಿಸುತ್ತಿದೆ.
ರೂ.31 ಲಕ್ಷಕ್ಕೂ ಅಧಿಕ ವಂಚನೆ
ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಗುತ್ತಿಗೆದಾರ ಅಮರೇಶ ಸಾಹೇಬಗೌಡ ಹುಮನಾಬಾದ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿ ಬರೋಬ್ಬರಿ 31,67,685 ರೂಪಾಯಿ ಕಳೆದುಕೊಂಡಿದ್ದಾರೆ. ಜ. 1 ರಂದು ಮನೆಯಲ್ಲಿರಬೇಕಾದರೆ ಮೊಬೈಲ್‌ಗೆ ಬಂದ ಲಿಂಕ್ ಓಪನ್ ಮಾಡಿದ್ದು, ಅದರಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭಾಂಶ ನೀಡುವ ಸಂದೇಶವಿತ್ತು. ಅದನ್ನು ನಂಬಿ 169285 ರೂಪಾಯಿ ಹೂಡಿಕೆ ಮಾಡಿದ್ದಾರೆ. ಬಳಿಕ ಸ್ನೇಹಿತನ ಮೊಬೈಲ್‌ನಿಂದ 2698400 ರೂ. ಹೂಡಿಕೆ ಮಾಡಿದ್ದಾರೆ. ವೆಬ್‌ಸೈಟ್‌ನಲ್ಲಿ 2 ಕೋಟಿಗೂ ಅಧಿಕ ಲಾಭಾಂಶ ತೋರಿಸಿದೆ. ಅದನ್ನು ನಂಬಿ ಹಣ ವಿತ್‌ಡ್ರಾ ಮಾಡಲು ಹೋದರೆ ಹಣ ಬರದೇ ಐಡಿ ಬ್ಲಾಕ್ ಆಗಿದೆ. ಮೋಸದ ಅರಿವಾಗಿ ಅಮರೇಶ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ರೂ.5 ಲಕ್ಷ ಕಳೆದುಕೊಂಡ ಸುಪರಿಂಟೆಂಡೆಂಟ್
ಎಕ್ಸ್‌ಟಿ ಪಾರೇಕ್ಸ್ ಟ್ರೇಡ್ ಹೆಸರಲ್ಲಿ ಮೊಬೈಲ್‌ನಲ್ಲಿ ಕಾಣಿಸಿಕೊಂಡ ಲಿಂಕ್ ನಂಬಿ ಹಣ ಹೂಡಿಕೆ ಮಾಡಿದ ಕೃಷಿ ಮಾರಾಟ ಇಲಾಖೆ ಸುಪರಿಂಟೆಂಡೆಂಟ್ ಸುರೇಶ ಬಾವುಸಾಹೇಬ ಮೋಹಿತೆ ಎಂಬುವರ 596600 ರೂಪಾಯಿ ಕಳೆದುಕೊಂಡಿದ್ದಾರೆ.
ಹೂಡಿದ ಹಣಕ್ಕೆ ಯುಎಸ್ ಡಾಲರ್‌ಗೆ ಕನ್ವರ್ಟ್ ಮಾಡಿ ಅಂತಾರಾಷ್ಟ್ರೀಯ ಮಟ್ಟದ ಡಾಲರ್, ಗೋಲ್ಡ್, ಕ್ರೂಡ್ ಆಯಿಲ್, ಕರೆನ್ಸಿ ಪೇರ್, ಬಿಟ್ಕಾಯಿನ್, ಟ್ರೇಡ್ ಮಾಡಿ ಹೂಡಿದ ಹಣಕ್ಕೆ ಪ್ರತಿಯಾಗಿ ಪ್ರತಿತಿಂಗಳು ಶೇ.50ರಷ್ಟು ಲಾಭಾಂಶ ಕೊಡುವ ಜಾಹೀರಾತು ನಂಬಿ ಆರಂಭದಲ್ಲಿ 2 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಆಗ ತಮ್ಮ ಆನ್‌ಲೈನ್ ಖಾತೆಯಲ್ಲಿ 100 ಡಾಲರ್ ತೋರಿಸಿದೆ. ಬಳಿಕ ಕಮೀಷನ್ ಹಣ ಎಂಬಿತ್ಯಾದಿ ಸಬೂಬು ಹೇಳಿ ಸುರೇಶ ಅವರಿಂದ ಹಣ ಪೀಕುತ್ತಲೇ ಹೋಗಿದ್ದಾರೆ. 598600 ರೂಪಾಯಿ ಹೂಡಿಕೆ ಮಾಡಿದಾಗ ಅದನ್ನು ಹಿಂಪಡೆಯಲು 9 ಲಕ್ಷ ರೂಪಾಯಿ ಮತ್ತೆ ಹೂಡಿಕೆ ಮಾಡಲು ತಿಳಿಸಿದಾಗ ಸುರೇಶ ನಿರಾಕರಿಸಿದ್ದಾರೆ. ಆಗ ಇವರ ಖಾತೆ ಬ್ಲಾಕ್ ಮಾಡಿದ್ದಾರೆ. ಮೋಸದ ಅರಿವಾಗಿ ಸುರೇಶ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಸಾರವಾಡದ ಮುತ್ತಪ್ಪ ಅನೀಲಪ್ಪ ಜಾರಡ್ಡಿ ಎಂಬ ಇಲೆಕ್ಟ್ರಿಶಿಯನ್ ಸಹ ಯುಎಸ್ ದೇಶದವಳ ಹೂಡಿಕೆಯ ಸಂದೇಶ ನಂಬಿ 6,60,528 ರೂಪಾಯಿ ವಂಚನೆಗೊಳಗಾಗಿದ್ದಾರೆ.
ಲ್ಯಾಬ್‌ಟೆಕ್ನಿಶಿಯನ್‌ಗೆ ರೂ.12 ಲಕ್ಷ ಟೋಪಿ
ಪ್ರತಿಶತಃ 7ರಷ್ಟು ಲಾಭಾಂಶದ ಆಸೆಯಿಂದ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದ ಸರ್ಕಾರಿ ಲ್ಯಾಬ್‌ಟೆಕ್ನಿಶಿಯನ್ 1249020 ರೂಪಾಯಿ ವಂಚನೆಗೊಳಗಾಗಿದ್ದಾರೆ.
ಬಸವನಬಾಗೇವಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್‌ಟೆಕ್ನಿಶಿಯನ್ ಆಗಿರುವ ದಸ್ತಗೀರಸಾಬ್ ಹುಸೇನಸಾ ಕಾಚೂರ ಎಂಬುವರು ಮೊಬೈಲ್‌ಗೆ ಬಂದ ಲಿಂಕ್ ನಂಬಿ ಹಣ ಹೂಡಿದ್ದಾರೆ. ಆರಂಭದಲ್ಲಿ 50 ಸಾವಿರ ಹೂಡಿಕೆ ಮಾಡಿದಾಗ ಆನ್‌ಲೈನ್ ಖಾತೆಯಲ್ಲಿ ಹಣ ಜಮಾ ಆಗಿರುವುದು ಗೋಚರಿಸಿದೆ. ಅದನ್ನು ನಂಬಿ 16 ಬಾರಿ ಹಣ ಹಾಕುತ್ತಲೇ ಹೋಗಿದ್ದು, ಕೊನೆಗೆ 13 ಲಕ್ಷ ರೂಪಾಯಿ ಜಮೆಯಾಗಿರುವುದು ಗೋಚರಿಸಿದೆ. ವಿತ್‌ಡ್ರಾ ಮಾಡಿಕೊಳ್ಳಲು ಹೋದಾಗ ಮತ್ತೆ 4 ಲಕ್ಷ ರೂಪಾಯಿ ಕೇಳಿದ್ದಾರೆ. ಕೊನೆಗೆ ಅನುಮಾನ ಬಂದು, ಮೋಸದ ಅರಿವಾಗಿ ದಸ್ತಗೀರಸಾಬ್ ಅವರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವೈದ್ಯನಿಗೆ ರೂ.18 ಲಕ್ಷ ಪಂಗನಾಮ
ವಿಜಯಪುರದ ಮಠಪತಿ ಗಲ್ಲಿಯ ವೈದ್ಯ ವಿಜಯಕುಮಾರ ಚನ್ನಬಸಪ್ಪ ವಣರೊಡ್ಡಿ ಎಂಬುವರು ವಾಟ್ಸಪ್‌ಗೆ ಬಂದ ಸಂದೇಶ ನಂಬಿ ಹಂತ ಹಂತವಾಗಿ 18,26,500 ರೂಪಾಯಿ ತೊಡಗಿಸಿದ್ದಾರೆ. ಆರಂಭದಲ್ಲಿ 100 ರೂಪಾಯಿಯಿಂದ ಆರಂಭಗೊಂಡ ಹೂಡಿಕೆ-ಲಾಭದ ಲೆಕ್ಕಾಚಾರ ಕೊನೆಗೆ ಲಕ್ಷ-ಲಕ್ಷ ಏರಿಕೆಯಾಗಿದೆ. ತಮ್ಮ ಖಾತೆಯಲ್ಲಿ ಹಣ ಖಾಲಿಯಾದಾಗ ಕುಟುಂಬಸ್ಥರ ಖಾತೆಯಿಂದಲೂ ವಿಜಯಕುಮಾರ ಹಣ ಹೂಡಿಕೆ ಮಾಡಿದ್ದಾರೆ. ಕೊನೆಗೆ 20 ಸಾವಿರ ರೂಪಾಯಿ ವಿತ್‌ಡ್ರಾ ಮಾಡಲು ಅವಕಾಶ ಕೊಟ್ಟಾಗ ವಿಜಯಕುಮಾರ ಒಮ್ಮೆಗೆ 2 ಲಕ್ಷ ರೂಪಾಯಿ ವಿತ್‌ಡ್ರಾ ಮಾಡಿ ಬಿಟ್ಟಿದ್ದಾರೆ. ಕೂಡಲೇ ಖಾತೆಯನ್ನು ಫ್ರೀಜ್ ಮಾಡಿದ್ದು ಅದನ್ನು ತೆಗೆಯಲೆಂದು ಮತ್ತೆ ಹಣ ಹಾಕಿಸಿಕೊಂಡಿದ್ದಾರೆ. ಹೀಗೆ ಪ್ರತಿ ತಿಂಗಳು ಪ್ರತಿಶತಃ 200 ರಷ್ಟು ಲಾಭಾಂಶದ ಆಸೆ ತೋರಿಸಿ 18,26,500 ರೂಪಾಯಿ ಪೀಕಿದ್ದಾರೆ. ಕೊನೆಗೆ ಯಾವುದೇ ಲಾಭಾಂಶ ಸಿಗದೇ ಇದ್ದಾಗ ವಿಜಯಕುಮಾರ ಸೈಬರ್ ಠಾಣೆ ಮೊರೆ ಹೋಗಿದ್ದಾರೆ.