ಅಂಜುಮನ್ ಇಸ್ಲಾಂ ಎ ಕಮಿಟಿ ಕಚೇರಿ ಸಭಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಅಲ್ಲಾಭಕ್ಷ ನಾಯ್ಕೋಡಿ ಮಾತನಾಡಿದರು. ಅಲ್ಲಾಭಕ್ಷ ದೇಸಾಯಿ, ರೆಹಮಾನ ಹಳ್ಳುರ, ಬುಡ್ಡಾ ನಾಯ್ಕೋಡಿ ಇತರರಿದ್ದರು. 
ವಿಜಯಪುರ

ಭಷ್ಟಾಚಾರ ಆರೋಪ ಆಧಾರರಹಿತ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಅಧ್ಯಕ್ಷ ಅಲ್ಲಾಭಕ್ಷ ನಾಯ್ಕೋಡಿ ಸ್ಪಷ್ಟನೆ
  • ಮೂರು ವರ್ಷ ಅತ್ಯತ್ತಮ ಆಡಳಿತ ನೀಡಿದ್ದೇವೆ
ಮುದ್ದೇಬಿಹಾಳ: ಶಾದಿ ಮಹಲ್ ಕಟ್ಟಡ, ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸೇರಿ, ಸರ್ಕಾರದ 3.12 ಎಕರೆ ಜಮೀನಿನ ಭ್ರಷ್ಟಾಚಾರ ಕುರಿತು ಮುಸ್ಲಿಂ ಸಮಾಜದ ಕೆಲ ಬುದ್ಧಿಜೀವಿಗಳು ಜಮೀನು ಮಾರಾಟ ಮಾಡಿದ್ದೀರಿ ಎಂದು ಆಧಾರ ರಹಿತವಾಗಿ ಆರೋಪಿಸುತ್ತಿದ್ದು, ಎಲ್ಲವೂ ಸತ್ಯಕ್ಕೆ ದೂರವಾಗಿದೆ ಎಂದು ಅಂಜುಮನ್ ಇಸ್ಲಾಂ ಎ ಕಮಿಟಿ ಮಾಜಿ ಅಧ್ಯಕ್ಷ ಅಲ್ಲಾಭಕ್ಷ ನಾಯ್ಕೋಡಿ ಸ್ಪಷ್ಟಪಡಿಸಿದರು.
ಪಟ್ಟಣದ ಮುಖ್ಯ ಬಜಾರದಲ್ಲಿರುವ ಅಂಜುಮನ್ ಇಸ್ಲಾಂ ಎ ಕಮಿಟಿ ಕಚೇರಿಯ ಸಭಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶಾದಿಮಹಲ್ ಕಟ್ಟಡಕ್ಕೆ 23.70 ಲಕ್ಷ ರೂ. ಖಾತೆಗೆ ಜಮಾ ಮಾಡಲಾಗಿದೆ. ಈ ಬಗ್ಗೆ ಬ್ಯಾಂಕಿನಲ್ಲಿ ಸಂಪೂರ್ಣ ಮಾಹಿತಿ ಸಿಗುತ್ತದೆ. ಸಂಸ್ಥೆಯ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲ. ಸರಕಾರದ 3.12 ಎಕರೆ ಜಮೀನನ್ನು ವಕ್ ಆಸ್ತಿ ಎಂದು ಆದೇಶಿಸಿದೆ. ಹೀಗಿದ್ದಾಗ ನಾವು ಬೇರೆಯವರಿಗೆ ಜಮೀನು ಮಾರಾಟ ಮಾಡಲು ಹೇಗೆ ಸಾಧ್ಯ? ಎಂದ ಅವರು, ಖಬರಸ್ಥಾನದ ಜಾಗಕ್ಕೆ ಮೀಸಲಿಟ್ಟ ಸುಮಾರು 9 ಲಕ್ಷ ರೂ. ಹಣವಿದೆ. ಸಂಸ್ಥೆ ಯಾವುದೇ ತೀರ್ಮಾನ ಕೈಗೊಳ್ಳಬೇಕಾದರೆ ಮುಸ್ಲಿಂ ಬಾಂಧವರೊಂದಿಗೆ ಚರ್ಚಿಸಿ, ಆಡಳಿತಾತ್ಮಕ ವಿಚಾರಗಳನ್ನು ಅಭಿವೃದ್ಧಿ ಪರವಾದ ನಿಲುವು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪಟ್ಟಣದ ಗಣಪತಿ ದೇವಸ್ಥಾನ ಹತ್ತಿರ ಅಂಜುಮನ್ ಸಂಸ್ಥೆ ಜಾಗದಲ್ಲಿ ವಾಣಿಜ್ಯ ಮಳಿಗೆಗಳ ಕಟ್ಟಡವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ನಾವು ಅಧಿಕಾರಕ್ಕೆ ಬಂದ ನಂತರ ಮಳಿಗೆಗಳ ಕಟ್ಟಡ ಸಂಪೂರ್ಣಗೊಳಿಸಿ, ಮಳಿಗೆಗಳ ಬಾಡಿಗೆ ಹಾಗೂ ಇತರೆ ಮೂಲದಿಂದ ರೂ. 40 ಲಕ್ಷಕ್ಕಿಂತ ಹೆಚ್ಚು ಸಂಸ್ಥೆಗೆ ಆದಾಯ ಬರುವಂತೆ ಮಾಡಿ, ಅಂಜುಮನ್ ಇಸ್ಲಾಂ ಎ ಕಮಿಟಿಯ ಸಂಪೂರ್ಣ ಶ್ರೇಯೋಭಿವೃದ್ಧಿಗೆ ಪಣತೊಟ್ಟು, 3 ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ್ದೇವೆಯೇ ವಿನಃ ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳಿದರು.
ಅಲ್ಲಾಭಕ್ಷ ದೇಸಾಯಿ, ರೆಹಮಾನ ಹಳ್ಳುರ, ಬುಡ್ಡಾ ನಾಯ್ಕೋಡಿ, ಮೌಲಾನಾ ಸುಲೇಮಾನ ಮಮದಾಪೂರ, ಅತಾವುಲ್ಲಾ ಬಂಡಾರಿ, ಬಸೀರಹ್ಮದ ಅತ್ತಾರ, ಮಹೀಬೂಬ ಅತ್ತಾರ, ಇಸ್ಲಾಯಿಲ್ ಗೋಲಂದಾಜ ಇತರರಿದ್ದರು.