ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಜಿಐಎಸ್ 2.0 ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರ ನಡೆಯಿತು. ೆಎಸ್‌ಆರ್‌ಎಸ್ ಎಸಿ, ಡಿಪಿಎಆರ್ ನಿರ್ದೇಶಕ ರಾಜೇಶ ಎನ್.ಎಲ್, ಡಿಸಿ ಡಾ.ಆನಂದ ಕೆ, ಸಿಇಒ ರಿಷಿ ಆನಂದ ಇದ್ದಾರೆ.
- ಜಿಲ್ಲಾ ಪಂಚಾಯಿತಿಯಲ್ಲಿ ಕಾರ್ಯಾಗಾರ
- ಕೆಜಿಐಎಸ್ 2.0 ಅನುಷ್ಠಾನದ ಮಾಹಿತಿ ರವಾನೆ
- ಅಧಿಕಾರಿಗಳು ಪರಸ್ಪರ ಸಹಕಾರ ನೀಡಲು ಸೂಚನೆ
ವಿಜಯಪುರ: ಕೆಜಿಐಎಸ್ 2.0 ವ್ಯವಸ್ಥೆಯ ಬಳಕೆ, ಅನುಷ್ಠಾನ ಕುರಿತು ಕಾರ್ಯಾಗಾರದ ಮೂಲಕ ವಿವಿಧ ಮಟ್ಟಗಳಲ್ಲಿ ಸಮನ್ವಯವನ್ನು ಬಲಪಡಿಸಿ, ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದು ಕೆಎಸ್‌ಆರ್‌ಎಸ್ ಎಸಿ, ಡಿಪಿಎಆರ್ ನಿರ್ದೇಶಕ ರಾಜೇಶ ಎನ್.ಎಲ್. ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕೆಜಿಐಎಸ್ 2.0 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮನ್ವಯತೆ ಮುಖ್ಯವಾಗಿದ್ದು, ಎಲ್ಲರೂ ಪರಸ್ಪರ ಸಹಕಾರ ನೀಡಬೇಕು ಎಂದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಇ-ಆಡಳಿತ) ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವು, ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ ಆವೃತ್ತಿ ಯೋಜನೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಈ ಯೋಜನೆಯ ಆವೃತ್ತಿ 2.0 ಅನ್ನು ಅನುಷ್ಠಾನ ಹಾಗೂ ಯಶಸ್ವಿಗೆ ಎಲ್ಲ ಇಲಾಖೆಗಳ ಭಾಗವಹಿಸುವಿಕೆ ಅಗತ್ಯವಾಗಿದೆ ಎಂದವರು ಹೇಳಿದರು.
ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿಗಳ ಸ್ಥಳೀಯ ಸಮಸ್ಯೆಗಳಿಗೆ ಜಿಐಎಸ್ ಮೂಲಕ ಒದಗಿಸಬಹುದಾದ ತಾಂತ್ರಿಕ ಪರಿಹಾರಗಳನ್ನು ಅಳವಡಿಸಲು, ಜಿಲ್ಲಾ ಮಟ್ಟದ ಇಲಾಖೆಗಳಿಗೆ ಅವಶ್ಯವಿರುವ ಜಿಐಎಸ್ ತಂತ್ರಾಂಶ ಮತ್ತು ದತ್ತಾಂಶಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದರು.
ಏಪ್ರಿಲ್ 2 ರಂದು ಚಾಮರಾಜನಗರದಲ್ಲಿ ಅದರಂತೆ ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೆಜಿಐಎಸ್ ಕುರಿತು ಕಾರ್ಯಗಾರ ಮಾಡುತ್ತೇವೆ. ಇದರಿಂದ ಆ ಜಿಲ್ಲೆಯ ಸಮಸ್ಯೆಗಳನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸದ್ಯದಲ್ಲಿ ಒಟ್ಟು 251 ಆಪ್ಲಿಕೇಶನ್ ಇದ್ದು ಅದರಲ್ಲಿ 101 ಆಪ್ಲಿಕೇಶನ್‌ಗಳು ಚಾಲ್ತಿಯಲ್ಲಿವೆ. ಅದರಲ್ಲಿ 41 ಆಪ್ಲಿಕೇಶನ್‌ಗಳು ಮೊಬೈಲ್‌ಬಳಕೆಗೆ ಮತ್ತು 61 ಆಪ್ಲಿಕೇಶನ್ ವೆಬ್‌ಸೈಟ್‌ಗಳು ಉಪಯೋಗ ಮಾಡಬಹುದು ಎಂದರು.
ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಮಾತನಾಡಿ, ಕೆಜಿಐಎಸ್ 2.0 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮಾಹಿತಿ ಅರಿತುಕೊಳ್ಳಬೇಕು. ಈ ಯೋಜನೆಯಿಂದ ಸುಗಮ ಕಾರ್ಯನಿರ್ವಹಣೆಗೆ ಸಹಕಾರಿಯಾಗಿದೆ. ಅನುಷ್ಠಾನಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಡಾ.ರಾಜಕುಮಾರ ಕತ್ರಿ ಅವರು ವಿಡಿಯೋ ಸಂವಾದದ ಮೂಲಕ ಮಾತನಾಡಿ, ಈ ತಂತ್ರಾಶ ಬಳಕೆಯಿಂದ ಶೀಘ್ರ, ಸುಲಲಿತ ಹಾಗೂ ತುರ್ತು ನಿರ್ಣಯ ಕೈಗೊಳ್ಳಲು ಅತ್ಯಂತ ಸಹಕಾರಿಯಾಗಿದೆ. ಇಂತಹ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅತ್ಯಂತ ಆಸ್ಥೆ ವಹಿಸಿ ಇಂತಹ ಮಹತ್ವಪೂರ್ಣ ಕಾರ್ಯ ಅನುಷ್ಠಾನಗೊಳ್ಳಲು ಮುತುವರ್ಜಿ ವಹಿಸಿದ್ದಾರೆ ಎಂದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಈ ತಂತ್ರಾಂಶದ ಬಳಕೆ ಮಾಡಿ, ಸಮಸ್ಯೆ ಸರಳವಾಗಿ ಪರಿಹರಿಸಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ನಡೆಯುವ ಈ ಶಿಬಿರದ ಸದುಪಯೋಗಪಡಿಸಿಕೊಳ್ಳುವಂತೆ ಅವರು ಹೇಳಿದರು.
ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ಕೆಜಿಐಎಸ್-2 ಸದ್ಭಳಕೆ ಮಾಡಿಕೊಳ್ಳಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇದು ತಂತ್ರಜ್ಞಾನ ಯುಗವಾಗಿದೆ. ನಮ್ಮ ರಾಜ್ಯ ಮಾಹಿತಿ ತಂತ್ರಜ್ಞಾನಕ್ಕೆ ಹೆಸರುವಾಸಿ. ಕಾಲಕಾಲಕ್ಕೆ ಅಭಿವೃದ್ಧಿ ಪಡಿಸುವ ತಂತ್ರಜ್ಞಾನ ಮೈಗೂಡಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ತ್ವರಿತಗತಿಯಲ್ಲಿ ತಲುಪಿಸಲು ಕಾರ್ಯನಿರ್ವಹಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಅವರು ಸ್ವಾಗತಿಸಿ ವಂದಿಸಿದರು. ಕ್ರೀಡಾಧಿಕಾರಿ ರಾಜಶೇಖರ ದೈವಾಡಿ ನಿರೂಪಿಸಿದರು.