ವಿಜಯಪುರ ನಗರದಲ್ಲಿ ನಡೆದ ಗುತ್ತಿಗೆದಾರರ ಸಂಘದ ಭವನ ನಿರ್ಮಾಣದ ಭೂಮಿ ಪೂಜೆ ನೆರವೇರಿತು. ಸಚಿವ ಎಂ.ಬಿ. ಪಾಟೀಲ, ಸತೀಶ ಜಾರಕಿಹೊಳಿ, ಶಾಸಕ ವಿಠಲ ಕಟಕದೊಂಡ, ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ ಮತ್ತಿತರರಿದ್ದಾರೆ. 
ವಿಜಯಪುರ

ದೇಶ ಕಟ್ಟುವಲ್ಲಿ ಗುತ್ತಿಗೆದಾರರ ಪರಿಶ್ರಮ ದೊಡ್ಡದು, ಸಚಿವ ಎಂ.ಬಿ. ಪಾಟೀಲರ ಮಾರ್ಮಿಕ ನುಡಿ

ಪ್ರಮುಖ ಮುಖ್ಯಾಂಶಗಳು

  • ಗುತ್ತಿಗೆದಾರರ ಭವನ ನಿರ್ಮಾಣಕ್ಕೆ ಭೂಮಿ ಪೂಜೆ
  • ಜ್ಯೋತಿ ಬೆಳಗಿಸಿ ಕಾರ್ಯಕ್ರಮದ ಉದ್ಘಾಟನೆ
  • ಗುತ್ತಿಗೆದಾರರ ಬಿಲ್ ಪಾವತಿಗೆ ಕ್ರಮದ ಭರವಸೆ

ವಿಜಯಪುರ: ದೇಶ ಕಟ್ಟುವಲ್ಲಿ ಗುತ್ತಿಗೆದಾರರ ಪರಿಶ್ರಮ ದೊಡ್ಡದು. ಸಂಕಷ್ಟದ ಮಧ್ಯೆಯೂ ಸಾಕಷ್ಟು ಪಾರದರ್ಶಕ ಹಾಗೂ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆದಾರರು ಈ ಹಿಂದಿನ ಬಿಜೆಪಿ ಸರ್ಕಾರದ ಅಚಾತುರ್ಯದಿಂದಾಗಿ ಸಂಕಷ್ಟಕ್ಕೆ ಸಿಲುಕುವಂತಾಯಿತು. ಪ್ರಸಕ್ತ ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಪ್ರಾಮಾಣಕವಾಗಿ ಪ್ರಯತ್ನ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.

ನಗರದ ಸಿಂದಗಿ ಬೈಪಾಸ್‌ನಲ್ಲಿರುವ ದರಬಾರ್ ಲೇಔಟ್‌ನಲ್ಲಿ ಬುಧವಾರ ಗುತ್ತಿಗೆದಾರರ ಸಂಘದಿಂದ ಹಮ್ಮಿಕೊಂಡಿದ್ದ ‘ಗುತ್ತಿಗೆದಾರರ ಸಂಘದ ಬೆಳ್ಳಿ ಮಹೋತ್ಸವ ಹಾಗೂ ಭವನ ನಿರ್ಮಾಣದ ಭೂಮಿ ಪೂಜೆ’ ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವ ಮೂಲಕ ನೆರವೇರಿಸಿ ಅವರು ಮಾತನಾಡಿದರು.
ಪ್ರತಿ ಸೇತುವೆ, ರಸ್ತೆ ಹೀಗೆ ಪ್ರತಿಯೊಂದು ಭೌತಿಕ ಅಭಿವೃದ್ಧಿ ಕಾಮಗಾರಿಗಳ ಹಿಂದೆ ಗುತ್ತಿಗೆದಾರರ ಶ್ರಮ ಅಡಗಿದೆ. ಗುತ್ತಿಗೆದಾರರು ಸಾಲ-ಸೋಲ ಮಾಡಿ ಗುತ್ತಿಗೆ ಕಾಮಗಾರಿ ಪಡೆಯುತ್ತಾರೆ. ಆದರೆ ಬಿಲ್ ವಿಳಂಬವಾದರೆ ಬಡ್ಡಿ ತೆತ್ತು ಹೈರಾಣಾಗುತ್ತಾರೆ. ಅವರ ಹಿತವನ್ನು ನಾವು ಕಾಯಬೇಕಾಗುತ್ತದೆ ಎಂದರು.
ಈ ಹಿಂದೆ ನೀರಾವರಿ ಮಂತ್ರಿಯಾಗಿದ್ದಾಗ ಗುತ್ತಿಗೆದಾರರ ಸಮಸ್ಯೆಯನ್ನು ತೀರ ಹತ್ತಿರದಿಂದ ಅರಿತಿದ್ದೇನೆ. ಪ್ರತಿ ತಿಂಗಳಿಗೊಮ್ಮೆ ಬಿಲ್ ಪಾವತಿಸಲಾಗುತ್ತಿತ್ತು. ಎಷ್ಟೋ ಸಲ ಗುತ್ತಿಗೆದಾರರೇ ಬಿಲ್ ಸಲ್ಲಿಸದೇ ಹೇಗೋ ಹಣ ಬಂದೇ ಬರುತ್ತದೆ ಎಂಬ ವಿಶ್ವಾಸದಿಂದ ಬಿಲ್ ಪಾವತಿಸಲು ಮೈಗಳ್ಳತನ ಮಾಡಿದ್ದಿದೆ. ಅಷ್ಟೊಂದು ತ್ವರಿತವಾದ ಸ್ಪಂದನೆ ನಮ್ಮ ಸರ್ಕಾರದಲ್ಲಿತ್ತು. ಆದರೆ, ನಂತರ ಬಂದ ಬಿಜೆಪಿ ಸರ್ಕಾರ ಕೈಗೊಂಡ ಅವೈಜ್ಞಾನಿಕ ನೀತಿಯಿಂದಾಗಿ ಎಲ್ಲರೂ ಸಮಸ್ಯೆ ಎದುರಿಸುವಂತಾಯಿತು. ಎಷ್ಟೋ ಪ್ರಕರಣಗಳಲ್ಲಿ ಕ್ಯಾಬಿನೆಟ್‌ವರೆಗೂ ಹೋಗದೇ ಕಾಮಗಾರಿ ಹಂಚಿಕೆ ಮಾಡಿದ ಉದಾಹರಣೆ ಇದೆ ಎಂದರು.
ಬಾಕಿ ಬಿಲ್ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರು ಪ್ರಾಮಾಣಿಕವಾಗಿ ಪ್ರಯತ್ನಿಸಲಿದ್ದಾರೆ ಎಂದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಗುತ್ತಿಗೆದಾರರ ಸಮಸ್ಯೆಗಳನ್ನು ಹತ್ತಿರದಿಂದ ಅರಿತಿದ್ದೇನೆ. ಅತ್ಯಂತ ಕೆಳ ಹಂತದಿಂದ ಬಂದ ನನಗೆ ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಅರಿವಿದೆ. ಹೀಗಾಗಿ ಗುತ್ತಿಗೆದಾರರ ಸಮಸ್ಯೆ ಬಗೆ ಹರಿಸಲು ನಿರಂತರವಾಗಿ ಶ್ರಮಿಸಲಾಗುತ್ತಿದೆ. ಇದಕ್ಕೆ ಗುತ್ತಿಗೆದಾರರ ಸಹಕಾರವೂ ಮುಖ್ಯ ಎಂದರು.
ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್ ಮಂಜುನಾಥ ಮಾತನಾಡಿ, ಗುತ್ತಿಗೆದಾರರ ಬೇಡಿಕೆಗಳ ಈಡೇರಿಕೆಗೆ ಶ್ರಮಿಸಬೇಕೆಂದು ಸಚಿವದ್ವಯರಲ್ಲಿ ಮನವಿ ಮಾಡಿದರು. ಮುಂದುವರಿದು ಗುತ್ತಿಗೆದಾರರ ಹಲವು ಬೇಡಿಕೆಗಳ ಪಟ್ಟಿ ಮಂಡಿಸಿದರು.
ಪೂಜ್ಯ ಸುಜ್ಞಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಗುತ್ತಿಗೆದಾರರ ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಆರ್. ರೂಡಗಿ ಅಧ್ಯಕ್ಷತೆ ವಹಿಸಿದ್ದರು.
ನಾಗಠಾಣ ಶಾಸಕ ವಿಠಲ ಕಟಕದೊಂಡ, ದೇ.ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಉಪ ಮೇಯರ್ ಸುಮಿತ್ರಾ ಜಾಧವ, ಗುತ್ತಿಗೆದಾರರ ಸಂಘದ ಪ್ರಮುಖರಾದ ಎಚ್.ಆರ್. ಚಿಂಚಲಿ, ಸತೀಶ ಡೋಣೂರಮಠ, ಬಿ.ಆರ್. ನಂದ್ಯಾಗೋಳ, ಎಸ್.ಡಿ. ಚಿಕ್ಕರೆಡ್ಡಿ, ವಿಡಿಎ ಮಾಜಿ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಎಸ್.ಎಂ. ಪಾಟೀಲ ಗಣಿಹಾರ, ಎಂ.ಆರ್. ತಾಂಬೋಳಿ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ವಸಂತ ಹೊನಮೋಡೆ, ಸುರೇಶ ಘೋಣಸಗಿ ಇತರರಿದ್ದರು.
ಸಂಘದ ಗೌರವಾಧ್ಯಕ್ಷ ಅರುಣ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಐ.ಎಂ. ಪಟ್ಟಣಶೆಟ್ಟಿ ಸ್ವಾಗತಿಸಿದರು. ವಿರೇಶ ವಾಲಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಂಗೀತಾ ಮಠಪತಿ ಕಾರ್ಯಕ್ರಮ ನಿರೂಪಿಸಿದರು.