ಸಿಂದಗಿ ತಾಲೂಕಿನ ರಾಂಪೂರ ಪಿಎ ಗ್ರಾಮದಲ್ಲಿ ನಡೆದ ಹತ್ತಿ ಬೆಳೆ ಉತ್ಪಾದನೆಯಲ್ಲಿ ಅಧಿಕ ಇಳುವರಿ ಹಾಗೂ ಆಧುನಿಕ ಕಷಿ ತಂತ್ರಜ್ಞಾನ ಅಳವಡಿಕೆ ಕುರಿತ ದಿನದ ಕಾರ್ಯಾಗಾರಕ್ಕೆ ಶಾಸಕ ಎ.ಎಂ.ಮನಗೂಳಿ ಉದ್ಘಾಟಿಸಿದರು. ಡಾ.ಎ.ಪಿ. ಬಿರಾದಾರ, ಡಾ.ಎಸ್.ಎಂ.ನಿಡಗುಂದಿ, ಪ್ರಶಾಂತ ಸಾಣಿ ಮತ್ತಿತರರಿದ್ದರು.
- ಹತ್ತಿ ಬೆಳೆ ಆಧುನಿಕ ಕೃಷಿ ತಂತ್ರಜ್ಞಾನ ಕಾರ್ಯಾಗಾರ ಚಾಲನೆ
- ಶಾಸಕ ಮನಗೂಳಿ ಅಭಿಪ್ರಾಯ
ಸಿಂದಗಿ: ಕೃಷಿಯನ್ನೇ ನೆಚ್ಚಿಕೊಂಡಿರುವ ರೈತ ಈ ದೇಶದ ಜೀವನಾಡಿ ಎಂದು ಶಾಸಕ ಎ.ಎಂ.ಮನಗೂಳಿ ಹೇಳಿದರು.
ತಾಲೂಕಿನ ರಾಂಪೂರ ಪಿಎ, ಆರೂಢ ಸಂಗನಬಸವೇಶ್ವರ ಮಠದಲ್ಲಿ ಶುಕ್ರವಾರ ಕೃಷಿ ಇಲಾಖೆ ಮತ್ತು ತಾಲೂಕು ಕೃಷಿಕ ಸಮಾಜ ಘಟಕದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬಿಳಿ ಚಿನ್ನ ಹತ್ತಿ ಬೆಳೆ ಉತ್ಪಾದನೆಯಲ್ಲಿ ಅಧಿಕ ಇಳುವರಿ ಪಡೆಯಲು ಆಧುನಿಕ ಕೃಷಿ ತಂತ್ರಜ್ಞಾನ ಕುರಿತು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಯನ್ನೇ ತನ್ನ ಮೂಲ ಕಸಬನ್ನಾಗಿಸಿಕೊಂಡಿರುವ ರೈತ ಬೆಳೆಯುವ ಬೆಳೆಗಳ ಲವತ್ತತೆ ಹಾಗೂ ಆತನ ಅಭಿವದ್ಧಿಗಾಗಿ ನಿರಂತರ ಕೃಷಿ ಕಾರ್ಯಾಗಾರಗಳು ನಡೆಯಬೇಕಿದೆ. ಇಂದಿನ ತಾಂತ್ರಿಕ, ಆಧುನಿಕ ಕೃಷಿ ಪದ್ಧತಿಗಳ ಕುರಿತು ರೈತರಿಗೆ ಮಾಹಿತಿ ಬೇಕಿದೆ. ಈ ಆಧುನಿಕ ತಂತ್ರಜ್ಞಾನದ ಬಳಕೆ ಮತ್ತು ಅದರ ಲಾಭದ ಮಾಹಿತಿ ನೀಡಲು ಕಷಿ ಇಲಾಖೆಯ ವಿಶೇಷ ತಂಡ ಈ ಕಾರ್ಯಾಗಾರದಲ್ಲಿದ್ದು, ರೈತರು ಆ ತಂಡದಿಂದ ಬೆಳೆ ಮತ್ತು ಕಾಲಕಾಲಕ್ಕೆ ಕೀಟಗಳ ನಿರ್ವಹಣೆಯ ಜತೆಗೆ ತಾಂತ್ರಿಕತೆ ಮೂಲಕ ಹೆಚ್ಚಿನ ಆದಾಯ ಪಡೆಯುವಂತಾಗಬೇಕು ಎಂದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿ ಡಾ.ಎಸ್.ಎಂ.ನಿಡಗುಂದಿ ಮಾತನಾಡಿ, ದೇಶದ ರೈತರು ವಿವಿಧ ಬೆಳೆಗಳ ಸುಧಾರಕ ತಳಿಗಳನ್ನು ಆಯ್ದುಕೊಂಡು, ಇಳುವರಿ ಹೆಚ್ಚಿಸಿಕೊಳ್ಳಲು ತಂತ್ರಜ್ಞಾನ ಬಳಕೆಯ ಕುರಿತು ಮಾಹಿತಿ ನೀಡಿದರು.
ಕೇಂದ್ರವು ಹತ್ತಿ ಮಿಷನ್ ತರಬೇತಿ ಯೋಜನೆಯಡಿ 6ಸಾವಿರ ಕೋಟಿ ಹಣ ಮೀಸಲಿರಿಸಿದ್ದು, ರಾಜ್ಯಕ್ಕೆ 49 ಕೋಟಿ ಹಣ ಮಂಜೂರಾಗಿದೆ. 27 ವರ್ಷಗಳ ಹಿಂದೆ ಬಳಕೆಗೆ ಬಂದ ಹತ್ತಿ ಬಿಟಿ ತಳಿಯು ಎಕರೆವಾರು ಹೆಚ್ಚಿನ ಇಳುವರಿ ನೀಡುತ್ತಿತ್ತು. ಆಧುನಿಕ ನ್ಯೂಮ್ಯಾಟಿಕ್ ಸೀಡರ್ ಪ್ಲಾಂಟ್ ಯಂತ್ರ ಬಳಸಿ ಕಡಿಮೆ ಖರ್ಚಿನಲ್ಲಿ ಬಿತ್ತನೆ ಮೂಲಕ ಹೆಚ್ಚಿನ ಆದಾಯ ನಿರೀಕ್ಷೆ ಮಾಡಬಹುದು. ಸರ್ಕಾರ ಈ ಯಂತ್ರವನ್ನು ಸಬ್ಸಿಡಿ ಮೂಲಕ ನೀಡುತ್ತಿದ್ದು, ರೈತರು ಈ ಯಂತ್ರದ ಲಾಭ ಪಡೆಯಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಅವರು ಮಾತನಾಡಿ, ಸಿಂದಗಿ-ಆಲಮೇಲ-ದೇವರಹಿಪ್ಪರಗಿ ತಾಲೂಕಿನಲ್ಲಿ ಹತ್ತಿ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಜಿಲ್ಲೆಯ 1 ಲಕ್ಷ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ ಎಂದರು.
ಕೃಷಿ ವಿಜ್ಞಾನಿಗಳಾದ ರಾಯಚೂರು ಕೃಷಿ ವಿವಿಯ ಡಾ.ಎ.ಪಿ. ಬಿರಾದಾರ, ವಿಜಯಪುರ ಕೃಷಿ ವಿದ್ಯಾಲಯದ ಡಾ.ಎ.ಪಿ. ಬಿರಾದಾರ, ಇಂಡಿ ಕೆವಿಕೆ ಡಾ.ಪ್ರಕಾಶ, ಕೃಷಿ ಉಪನಿರ್ದೇಶಕ ಚಂದ್ರಕಾಂತ ಪವಾರ, ತಾಲೂಕು ಕೃಷಿ ಸಹಾಯಕ ನಿರ್ದೇಶಕ ಪ್ರಶಾಂತ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶಿವಪ್ಪಗೌಡ ಬಿರಾದಾರ, ನಿಂಗನಗೌಡ ಪಾಟೀಲ, ಸಿದ್ದು ಆನಂದಿ, ಎ.ಪಿ.ಎಂ.ಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ, ಎಸ್.ಜಿ.ಹಂಚಿನಾಳ, ಬಸಯ್ಯ ಹಿರೇಮಠ, ಭಾಗಪ್ಪಗೌಡ ಬಿರಾದಾರ, ಗಂಗಾಧರ ಚಿಂಚೋಳಿ, ಮುದ್ದುಗೌಡ ಪಾಟೀಲ, ಸಾಣಿ ಮತ್ತಿತರರಿದ್ದರು.