- ಅನುಮೋದನೆಯಾದರೂ ಅನುಷ್ಟಾನ ಭಾಗ್ಯವಿಲ್ಲ
- ದಶಕಗಳ ಬೇಡಿಕೆಗೆ ಅಧಿಕಾರಿಗಳಿಂದ ತಣ್ಣೀರು
- ಸಂಸದ ರಮೇಶ ಜಿಗಜಿಣಗಿ ತೀವ್ರ ಆಕ್ರೋಶ
- ರೈಲ್ವೆ ಮಂತ್ರಿಗಳ ಗಮನ ಸೆಳೆಯುವುದಾಗಿ ಹೇಳಿಕೆ
ವಿಜಯಪುರ: ಜನರ ಬಹುದಿನಗಳ ಬೇಡಿಕೆಯಾಗಿರುವ ಲಚ್ಯಾಣದ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಉದಾಸೀನತೆ ತೋರುತ್ತಿರುವ ಅಧಿಕಾರಿಗಳ ನಡೆಗೆ ಸಂಸದ ರಮೇಶ ಜಿಗಜಿಣಗಿ ತೀವ್ರ ಅಸಮಾಧಾನ ಹಾಗೂ ಆಕ್ರೋಶ ಹೊರಹಾಕಿದ್ದಾರೆ.
ಕಳೆದ 9 ತಿಂಗಳ ಹಿಂದೆಯೇ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ ಪಡೆದುಕೊಂಡಿರುವೆ. ಆದರೆ ಈ ಕಾಮಗಾರಿ ಆರಂಭಿಸುವಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಗಳು ಉದಾಸೀನ ತೋರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಜಿಗಜಿಣಗಿ ಹರಿಹಾಯ್ದಿದ್ದಾರೆ.
ಲಚ್ಯಾಣದಲ್ಲಿ ಆರ್‌ಓಬಿ ನಿರ್ಮಾಣ ಮಾಡಬೇಕೆಂಬುದು ಜನರ ದಶಕಗಳ ಬೇಡಿಕೆಯಾಗಿತ್ತು. ಈ ಕುರಿತು ರೈಲ್ವೆ ಮಂತ್ರಿಗಳ ಜೊತೆ ಚರ್ಚಿಸಿ, ಅವರ ಮನವೊಲಿಸಿ ಕಾಮಗಾರಿಗೆ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದೆ. ಮಾತ್ರವಲ್ಲ, ಯಾವ ಸಮಸ್ಯೆ ಎದುರಾದರೂ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳ ಜೊತೆ ಸಮನ್ವಯ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದ್ದೆ. ಆದರೆ 9 ತಿಂಗಳು ಕಳೆದರೂ ಯಾವೊಂದು ಪ್ರಕ್ರಿಯೆ ಕೈಗೊಳ್ಳದೇ ಹೋಗಿರುವುದು ರೈಲ್ವೆ ಇಲಾಖೆಯ ಅಧಿಕಾರಿಗಳ ಉದಾಸೀನತೆಗೆ ಸಾಕ್ಷಿಯಾಗಿದೆ. ರೈಲ್ವೆ ಸಚಿವರು ಅತ್ಯಂತ ಜನಪರ ಕಾಳಜಿ ಹೊಂದಿದ್ದಾರೆ. ಅವರು ಯಾವುತ್ತೂ ಅಭಿವೃದ್ಧಿ ಪರವಾಗಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಯಾವುದಕ್ಕೂ ಸ್ಪಂದಿಸದೇ ಹೋದರೆ ಹೇಗೆ ಎಂದು ಜಿಗಜಿಣಗಿ ಅಸಮಾಧಾನ ಹೊರಹಾಕಿದ್ದಾರೆ.
ವಜ್ರಹನುಮಾನ ಬಳಿ ಅಂಡರ್‌ಪಾಸ್
ಇನ್ನೊಂದು ವಜ್ರಹನುಮಾನ ಬಳಿ ಅಂಡರ್‌ಪಾಸ್ ನಿರ್ಮಾಣಕ್ಕೂ ಮಂಜೂರಾತಿ ಪಡೆದಿರುವೆ. ಈ ಕಾಮಗಾರಿ ಕೈಗೊಳ್ಳಲು ರಸ್ತೆ ಅಗೆತ, ಅಲ್ಲಿರುವ ದೂರ ಸಂಪರ್ಕ ಪರಿಕರಗಳ ಸ್ಥಳಾಂತರ ಮೊದಲಾದ ಕಾಮಗಾರಿಗಳಿಗೆ 8 ಕೋಟಿ ರೂ. ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕಿತ್ತು, ಎಷ್ಟು ಬಾರಿ ಮನವಿ ಮಾಡಿಕೊಂಡರೂ ರಾಜ್ಯ ಸರ್ಕಾರ ಈ ವಿಷಯವಾಗಿ ಸ್ಪಂದಿಸಲಿಲ್ಲ, ಕೊನೆಗೂ ನಾನು ಅನಿವಾರ್ಯವಾಗಿ ಈ 8 ಕೋಟಿ ರೂ. ಮೊತ್ತವನ್ನು ರೈಲ್ವೆ ಇಲಾಖೆಯಿಂದಲೇ ಭರಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವರ ಮನವೊಲಿಸಿದೆ, ಅದಕ್ಕೆ ಒಪ್ಪಿದ ಅವರು ಹುಬ್ಬಳ್ಳಿ ನೈಋತ್ಯ ರೈಲ್ವೆ ಮಹಾಪ್ರಬಂಧಕರಿಗೆ ನಿರ್ದೇಶನ ನೀಡಿದ್ದಾರೆ. ಈ ವಿಷಯದಲ್ಲಿಯೂ ರೈಲ್ವೆ ಮಹಾಪ್ರಬಂಧಕರು ಉದಾಸೀನ ನೀತಿ ತೋರುತ್ತಿದ್ದಾರೆ, ಈ ಎರಡು ಕಾಮಗಾರಿಗಳು ಕೈಗೊಳ್ಳಲು ವಿಳಂಬವಾಗುತ್ತಿರುವುದು ಸರಿಯಲ್ಲ. ಜನರ ಉತ್ತಮ ಯೋಜನೆಗಳಿಗೂ ಈ ರೀತಿ ನಿರ್ಲಕ್ಷೃ ನೀತಿ ಅಧಿಕಾರಿಗಳ ಬೇಜವಾಬ್ದಾರಿತನವಾಗಿದೆ ಎಂದು ಜಿಗಜಿಣಗಿ ಖಾರವಾಗಿ ಅಸಮಧಾನ ಹೊರಹಾಕಿದ್ದಾರೆ.
ಅಧಿಕಾರಿಗಳು ತಮ್ಮ ಈ ನಡೆಯನ್ನು ಬದಲಾಯಿಸಿಕೊಳ್ಳಬೇಕು, ಈ ನಡೆ ತಿದ್ದುಕೊಳ್ಳದೇ ಹೋದರೆ ಅಧಿಕಾರಿಗಳ ವೈಫಲ್ಯದ ಕುರಿತು ರೈಲ್ವೆ ಸಚಿವರ ಗಮನಕ್ಕೂ ತರುವೆ ಎಂದು ಜಿಗಜಿಣಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.