ವಿಜಯಪುರ ಜಿಲ್ಲಾಡಳಿತಕ್ಕೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಉಮೇಶ ಕೋಳಕೂರ, ರಮೇಶ ಭೂಸನೂರ, ಸಂಜೀವ ಐಹೊಳೆ ಇತರರಿದ್ದಾರೆ. 
ವಿಜಯಪುರ

ಕಾಂಗ್ರೆಸ್‌ನಿಂದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ, ಬಿಜೆಪಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ
  • ದೇಶದಲ್ಲಿ ಅರಾಜಕತೆ ಸೃಷ್ಠಿಸಲು ಯತ್ನ
  • ಕಾಂಗ್ರೆಸ್ ವಿರುದ್ಧ ಘೋಷಣೆ ಮೊಳಗಿಸಿದ ಬಿಜೆಪಿ
ವಿಜಯಪುರ: ಕಾಂಗ್ರೆಸ್ ಪಕ್ಷ ರಾಜ್ಯ ಮತ್ತು ದೇಶದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುವ ಮೂಲ ಅರಾಜಕತೆ ಸೃಷ್ಠಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆ ಮೊಳಗಿಸಿದರು. ಬಳಿಕ ಜಿಲ್ಲಾಡಳಿತ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಮಾರ್ಗದುದ್ದಕ್ಕೂ ಕಾಂಗ್ರೆಸ್ ವಿರುದ್ಧ ಘೋಷಣೆ ಮೊಳಗಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಪ್ರಸ್ತುತ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಸಂಪೂರ್ಣ ಕುಸಿದಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಅಕ್ಷರಶಃ ಗೂಂಡಾ ರಾಜ್ಯ ಸೃಷ್ಟಿಯಾಗಿದೆ. ಆಡಳಿತ ಪಕ್ಷದ ಕುಮ್ಮಕ್ಕಿನಿಂದ ಸಮಾಜಘಾತುಕ ಶಕ್ತಿಗಳು ಮತ್ತು ಗೂಂಡಾಗಳು ರಾಜಾರೋಷವಾಗಿ ಮೆರೆಯುತ್ತಿದ್ದಾರೆ. ವಿರೋಧ ಪಕ್ಷದ ನಾಯಕರು, ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಸರ್ಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವ ಸಾರ್ವಜನಿಕರ ಮೇಲೆ ನಿರಂತರ ದೌರ್ಜನ್ಯ, ಬೆದರಿಕೆ ಹಾಗೂ ಹಲ್ಲೆಗಳು ನಡೆಯುತ್ತಿವೆ ಎಂದು ಅಸಮಾಧಾನ ಹೊರಹಾಕಿದರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ರಕ್ಷಣೆ ನೀಡಬೇಕಾದ ಪೊಲೀಸ್ ಇಲಾಖೆಯೇ ಆಡಳಿತ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ದೂರು ನೀಡಿದರೂ ಕಿಡಿಗೇಡಿಗಳ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸುತ್ತಿಲ್ಲ. ವಿರೋಧದ ಧ್ವನಿಯನ್ನು ಅಡಗಿಸುವ ದಮನಕಾರಿ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ಇದರಿಂದ ಜನಸಾಮಾನ್ಯರು, ಮಹಿಳೆಯರು ಭೀತಿಯ ವಾತಾವರಣದಲ್ಲಿ ಬದುಕುವಂತಾಗಿದೆ ಎಂದರು.
ರಾಜ್ಯಪಾಲರು ಸಂವಿಧಾನಾತ್ಮಕ ಅಧಿಕಾರವನ್ನು ಚಲಾಯಿಸಿ, ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ತಕ್ಷಣವೇ ನಿಯಂತ್ರಣಕ್ಕೆ ತರಲು ಹಾಗೂ ಗೂಂಡಾ ಪ್ರವೃತ್ತಿಯನ್ನು ಹತ್ತಿಕ್ಕಲು ರಾಜ್ಯ ಸರ್ಕಾರಕ್ಕೆ ಮತ್ತು ಗೃಹ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರಲ್ಲಿರುವ ಆತಂಕವನ್ನು ದೂರ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಮುಖಂಡರಾದ ವಿಜುಗೌಡ ಪಾಟೀಲ, ಉಮೇಶ ಕೋಳಕೂರ, ಸಾಬು ಮಾಶ್ಯಾಳ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಕಾಸುಗೌಡ ಬಿರಾದಾರ, ಉಮೇಶ ಕಾರಜೋಳ, ಸುರೇಶ ಬಿರಾದಾರ, ಗೋಪಾಲ ಘಟಕಾಂಬಳೆ, ವಿವೇಕಾನಂದ ಡಬ್ಬಿ, ಮಹೇಂದ್ರಕುಮಾರ ನಾಯಕ, ಭೀಮಾಶಂಕರ ಹದನೂರ, ಕೃಷ್ಣಾ ಗುನ್ಹಾಳಕರ, ಚಿದಾನಂದ ಚಲವಾದಿ, ಮಲ್ಲಿಕಾರ್ಜುನ ಜೋಗೂರ, ಸ್ವಪ್ನಾ ಕಣಮುಚನಾಳ, ರಾಹುಲ ಜಾಧವ, ಮಹೇಶ ಒಡೆಯರ, ರಾಜಶೇಖರ ಮಗಿಮಠ, ಮಂಜುನಾಥ ಮಿಸೆ, ರವಿಕಾಂತ ಬಗಲಿ, ರಾಘವೇಂದ್ರ ಕಾಪಸೆ, ರವಿಕಾಂತ ವಗ್ಗೆ, ಸಚೀನ ಬೋಂಬಳೆ, ಭೀಮಸಿಂಗ ರಾಠೋಡ, ಸಂದೀಪ ಪಾಟೀಲ, ಸಂತೋಷ ಪಾಟೀಲ ಡಂಬಳ, ಚಂದ್ರಶೇಖರ ಪಾಟೀಲ, ಸಿದ್ದಗೊಂಡ ಬಿರಾದಾರ, ಸಂತೋಷ ಕುರದಡ್ಡಿ, ಹಣಮಂತ್ರಾಯಗೌಡ ಪಾಟೀಲ ಇದ್ದರು.
ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಿದೆ. ಇದನ್ನು ಸಹಿಸದ ಕಾಂಗ್ರೆಸ್ಸಿಗರು ಆರಂಭದಿಂದಲೂ ಕುತಂತ್ರ ಹೆಣೆಯುತ್ತಲೇ ಇದ್ದಾರೆ. ಅಧಿಕಾರಕ್ಕಾಗಿ ಎಂಥದ್ದೇ ವಾಮ ಮಾರ್ಗಕ್ಕಿಳಿಯಲು ಕಾಂಗ್ರೆಸ್ ಹಿಂಜರಿಯುವುದಿಲ್ಲ. ಇದೀಗ ದೆಹಲಿಯ ಜಂತರ್-ಮಂತರ್‌ನಲ್ಲಿ ನಡೆಯುತ್ತಿರುವ ಹೋರಾಟ ಹೈಜಾಕ್ ಮಾಡಲು ಹೋಗಿ ರಾಹುಲ್ ಗಾಂಧಿ ನಗೆಪಾಟಲಿಗೆ ಈಡಾಗಿದ್ದಾರೆ. ಹೋರಾಟಗಾರರ ದಿಕ್ಕು ತಪ್ಪಿಸಿ ಅರಾಜಕತೆ ಸೃಷ್ಠಿಸಲು ಹೊರಟಿದ್ದಾರೆ. ದೇಶದ ಜನ ಇದೆಲ್ಲವನ್ನೂ ಗಮನಿಸುತ್ತಿದ್ದು ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸುವುದು ನಿಶ್ಚಿತ.
— ಸಂಜೀವ ಐಹೊಳೆ, ನಾಗಠಾಣ ಕ್ಷೇತ್ರದ ಪರಾಜಿತ ಅಭ್ಯರ್ಥಿ