ವಿಜಯಪುರ ನಗರದ ಗೃಹ ಕಚೇರಿಯಲ್ಲಿ ಸಚಿವ ಎಂ.ಬಿ. ಪಾಟೀಲರ ಸಮ್ಮುಖದಲ್ಲಿ ಕನಮಡಿಯ ಪ್ರಶಾಂತ ಸುಭಾಸಗೌಡ ಪಾಟೀಲ ನೇತೃತ್ವ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು. ವಿಪ ಸದಸ್ಯ ಸುನೀಲಗೌಡ ಪಾಟೀಲ, ಡಾ.ಗಂಗಾಧರ ಸಂಬಣ್ಣಿ, ಜಮೀರ್‌ಅಹ್ಮದ್ ಭಕ್ಷಿ ಇದ್ದಾರೆ. 
ವಿಜಯಪುರ

ಬಿಜೆಪಿ ತೊರೆದ ಕಾಂಗ್ರೆಸ್ ಮುಖಂಡರು, ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿ ಪಕ್ಷ ಸೇರ್ಪಡೆ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ತೊರೆದ ಕಾಂಗ್ರೆಸ್ ಮುಖಂಡರು
  • ಸಚಿವ ಎಂ.ಬಿ. ಪಾಟೀಲ ನೇತೃತ್ವ ಪಕ್ಷ ಸೇರ್ಪಡೆ
  • ಬಬಲೇಶ್ವರ ಬಿಜೆಪಿ ಮುಕ್ತ ಮಾಡುವ ಸಂಕಲ್ಪ
  • ಆರು ಬ್ಯಾಚ್‌ಗಳಲ್ಲಿ ‘ಕೈ’ ಹಿಡಿಯಲು ಯೋಜನೆ
ವಿಜಯಪುರ: ಬಬಲೇಶ್ವರ ಮತಕ್ಷೇತ್ರ ಬಿಜೆಪಿ ಮುಕ್ತವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.
ನಗರದ ಗೃಹ ಕಚೇರಿಯಲ್ಲಿ ಸೋಮವಾರ ನಡೆದ ‘ಕಾಂಗ್ರೆಸ್ ಸೇರ್ಪಡೆ’ ಕಾರ್ಯಕ್ರಮದಲ್ಲಿ ಕನಮಡಿ ಗ್ರಾಮದ ಬಿಜೆಪಿ ಮುಖಂಡ ಪ್ರಶಾಂತ ಸುಭಾಸಗೌಡ ಪಾಟೀಲ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.
ಬಬಲೇಶ್ವರ ಮತಕ್ಷೇತ್ರದಲ್ಲಿ ಬಿಜೆಪಿಯ ಅರ್ಧದಷ್ಟು ನಾಯಕರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಸೇರಲಿದ್ದಾರೆ. ಆರು ಬ್ಯಾಚ್‌ಗಳಲ್ಲಿ ಈಗ ಒಂದು ಬ್ಯಾಚ್ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದೆ. ಕನಮಡಿಯ ಸುಭಾಸಗೌಡ ಪಾಟೀಲ ಅವರ ಪುತ್ರ ಪ್ರಶಾಂತ ಸುಭಾಸಗೌಡ ಪಾಟೀಲ ಅವರು ಕಾಂಗ್ರೆಸ್ ಸೇರ್ಪಡೆಯಾಗಿ ಮರಳಿ ಮನೆಗೆ ಬಂದಿದ್ದಾರೆ. ಅವರಿಗೆ ಸ್ವಾಗತ ಕೋರುತ್ತೇನೆ. ಕನಮಡಿ ಗೌಡರ ಮನೆತನದ ಸಂಬಂಧಿಕರು ಜಿಲ್ಲಾದ್ಯಂತ ಇದ್ದಾರೆ. ಅವರಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂದರು.
ಕಾಂಗ್ರೆಸ್ ಬಾವುಟ ಹಿಡಿದು ಪಕ್ಷ ಸೇರ್ಪಡೆಗೊಂಡ ಪ್ರಶಾಂತ ಸುಭಾಸಗೌಡ ಪಾಟೀಲ ಮಾತನಾಡಿ, ಅಕ್ಟೋಬರ್‌ನಲ್ಲಿ ಯುನಿಯನ್ ಚುನಾವಣೆಯಲ್ಲಿ ನನ್ನನ್ನು ಬಬಲೇಶ್ವರ ಬಿಜೆಪಿ ಮುಖಂಡ ಮೊದಲು ಕಣಕ್ಕಿಳಿಸಿ ನಂತರ ನಾಮಪತ್ರ ವಾಪಸ್ ಪಡೆಯಲು ಹೇಳಿದ್ದರು. ಆದರೆ, ಪ್ರತಿಷ್ಠೆಯ ಪ್ರಶ್ನೆಯಾದ ಹಿನ್ನೆಲೆ ಕಣದಲ್ಲಿ ಉಳಿದಿದ್ದೆ. ಆಗ ಶಾಸಕ ಸುನೀಲಗೌಡ ಪಾಟೀಲ ಅವರು ನನ್ನನ್ನು ಬೆಂಬಲಿಸಿದರು ಎಂದರು.
ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಇಲಾಯಿ ತಿಕೋಟಿ , ವಿನೋದಗೌಡ ಬಿರಾದಾರ, ಅಶೋಕ ಬಿರಾದಾರ, ಮುಬಾರಕ ಮುಲ್ಲಾ, ರಾಜು ತಿಕೋಟಿ, ದಾವಲ್ ಪಾರ್ಥನಹಳ್ಳಿ, ಜಾಕಿರ ತಿಕೋಟಿ, ಅಪ್ಪಾಸಾಬ ಮೋರೆ, ಅಲ್ಲಿಸಾಬ್ ಬೈಲಹೊಂಗಲ, ನಿಂಗಪ್ಪಾ ಶೀಳಿನ, ಹೂವಣ್ಣ ನಾಟಿಕಾರ, ಬಸಪ್ಪ ರಾಮತೀರ್ಥ, ರಾಯಪ್ಪ ನಾಟಿಕಾರ, ಮೈಬೂಬಸಾಬ್ ಮುಲ್ಲಾ ಸೇರಿದಂತೆ 120ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.
ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್, ಡಾ. ಗಂಗಾಧರ ಸಂಬಣ್ಣಿ, ಮಹ್ಮದ್‌ರಫೀಕ್ ಟಪಾಲ್ ಇಂಜಿನಿಯರ್, ಸಿದಗೊಂಡ ರುದ್ರಗೌಡ ವಿದ್ಯಾರಾಣಿ ತುಂಗಳ, ಜಮೀರ್‌ಅಹ್ಮದ್ ಬಕ್ಷಿ ಮತ್ತಿತರರಿದ್ದರು.