RAMESH-JIGAJINAGI 
ವಿಜಯಪುರ

ಕಾಂಗ್ರೆಸ್‌ನ ಮಹಿಳಾ ವಿರೋಧಿ ಮನಸ್ಥಿತಿ ಅನಾವರಣ, ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಮೀಸಲಾತಿ ಮಸೂದೆಗೆ ಹಿನ್ನಡೆ
  • ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ
  • ಸಂಸತ್ತಿನಲ್ಲಿ ಕಾಂಗ್ರೆಸ್ ಮುಖವಾಡ ಬಯಲು
ವಿಜಯಪುರ: ಮಹಿಳಾ ಮೀಸಲಾತಿ ಪರ ಇದ್ದೇವೆ ಎನ್ನುತ್ತಿದ್ದ ವಿಪಕ್ಷಗಳು ಸಂಸತ್ತಿನಲ್ಲಿ ತಮ್ಮ ಅಸಲಿ ಮುಖವನ್ನು ಪ್ರದರ್ಶಿಸುವ ಮೂಲಕ ಸ್ತ್ರೀ ವಿರೋಧಿ ಹಾಗೂ ಸ್ತ್ರೀ ಶ್ರೇಯೋಭಿವೃದ್ಧಿ ವಿರೋಧಿ ಧೋರಣೆಯನ್ನು ಪ್ರದರ್ಶಿಸಿವೆ ಎಂದು ಸಂಸದ ರಮೇಶ ಜಿಗಜಿಣಗಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
‘ನಾರಿಶಕ್ತಿ ಅಭಿನಂದನ್ ಬಿಲ್’ ಅಂಗೀಕಾರವಾಗದೇ ಇರಲು ಕಾರಣೀಕರ್ತರಾದ ಪ್ರತಿಪಕ್ಷ ಕಾಂಗ್ರೆಸ್ ಮತ್ತಿತರ ಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸಶಕ್ತಿಕರಣ ಜಾರಿ ಮಾಡಿ 2029ರಲ್ಲಿ ಚುನಾವಣೆ ನಡೆಸುವುದು, ಒಬ್ಬ ವ್ಯಕ್ತಿ ಒಂದು ಮತ ಎಂಬ ಸಿದ್ಧಾಂತವನ್ನು ದೃಢಗೊಳಿಸುವ ಚಿಂತನೆ ಹೊಂದಿದ್ದರು. ನಾರಿ ಶಕ್ತಿಗೆ 2029ಕ್ಕಿಂತ ಮೊದಲು ಅವಕಾಶ ಕೊಡಲು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಸಿದ್ಧವಿಲ್ಲ ಎಂಬುದು ಸಾಬೀತಾಗಿದೆ. ಹಿಂದುಳಿದ ವರ್ಗದ ನಾಯಕ ಮೋದಿ ಅವರಿಗೆ ವಂಶಪಾರಂಪರ್ಯದಿಂದ ಪ್ರಧಾನಿ ಹುದ್ದೆ ಬಂದಿಲ್ಲ; ಅದನ್ನು ಮೂರನೇ ಬಾರಿ ಮತದಾರರು ನೀಡಿದ್ದಾರೆ. ಮೋದಿ ಅವರ ಆಡಳಿತ ಅವಧಿಯಲ್ಲಿ ಮಹಿಳೆಯರಿಗೆ ಅನುಕೂಲವಾಗಲು ಉಜ್ವಲ ಯೋಜನೆ ಮೂಲಕ ಸಿಲಿಂಡರ್ ವಿತರಣೆ, 15 ಕೋಟಿ ಮನೆಗಳಿಗೆ ನಲ್ಲಿ ಮುಖಾಂತರ ನೀರು ಪೂರೈಕೆ ಹೀಗೆ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಮೋದಿ ಸರ್ಕಾರ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿತ್ತು. ಒಬಿಸಿ ಗುರುತಿಸುವಿಕೆಯ ಅಧಿಕಾರವನ್ನು ರಾಜ್ಯಗಳಿಗೆ ನೀಡಿ ಅಧಿಕಾರ ಸಶಕ್ತಿಕರಣ ಮಾಡಿತ್ತು. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ಚುನಾವಣೆ ಗೆಲ್ಲುವುದೊಂದೇ ಏಕಮಾತ್ರ ಉದ್ದೇಶವಾಗಿದೆ ಹೊರತು ಜನ ಕಲ್ಯಾಣವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿಗೆ ರಾಷ್ಟ್ರ ನಿರ್ಮಾಣದ ಚಿಂತನೆ ಇದೆ. ಕಾಂಗ್ರೆಸ್ ಪಕ್ಷವು ಸುಮಾರು ಆರೂವರೆ ದಶಕಗಳ ಕಾಲ ದೇಶದ ಆಡಳಿತದಲ್ಲಿ ಇದ್ದಾಗ ಒಬಿಸಿ ಸಮುದಾಯಕ್ಕೆ ಅನ್ಯಾಯ ಮಾಡಿತ್ತು. ಮಂಡಲ್ ವರದಿ ಜಾರಿ ಮಾಡಲು ಹಿಂಜರಿಕೆ ತೋರಿದ ಇವರದು ತೋರಿಕೆಯ ಒಬಿಸಿ ಪ್ರೀತಿ ಎಂಬುದು ಜನರಿಗೆ ಗೊತ್ತಿದೆ. ಇನ್ನು ಮುಂದೆ ಮಹಿಳೆಯರ ಕುರಿತ ಇವರ ಮಾತುಗಳು ಕೇವಲ ತೋರಿಕೆ ಎಂಬುದು ಮಹಿಳಾ ಶಕ್ತಿಗೂ ಅರಿವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.