ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರಿಗೆ ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ಉಮೇಶ ಕಾರಜೋಳ ಇತರರಿದ್ದಾರೆ.
- ನಾಗೇಂದ್ರ ಸಂಪುಟದಲ್ಲಿರುವುದು ನಾಚಿಕೆಗೇಡು
- ಕಾಂಗ್ರೆಸ್‌ನಿಂದ ಎಸ್‌ಟಿ ಸಮುದಾಯಕ್ಕೆ ಅನ್ಯಾಯ
- ಹೋರಾಟದ ಮೂಲಕ ಕಳಕಳಕಿ ಮೆರೆದ ಬಿಜೆಪಿ
ವಿಜಯಪುರ: ‘ತಾನು ಎಸ್‌ಟಿ ಎಂಬ ಕಾರಣಕ್ಕೆ ಬಿಜೆಪಿಗರು ಹೋರಾಟ ಮಾಡುತ್ತಿದ್ದಾರೆಂದು ಆರೋಪಿಸುವ ಸಚಿವ ನಾಗೇಂದ್ರನಿಗೆ ಅದೇ ಸಮುದಾಯದ ಅನುದಾನ ದುರ್ಬಳಕೆ ಮಾಡಿಕೊಳ್ಳುವಾಗ ಕಾಳಜಿ ಇರಲಿಲ್ಲವೇ? ಹಾಗೆ ನೋಡಿದರೆ ಬಿಜೆಪಿಯೇ ಎಸ್‌ಟಿ ಸಮುದಾಯದ ಕಾಳಜಿ ಮೆರೆಯುತ್ತಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ‘ನಾಗೇಂದ್ರನಿಗೆ ಸಂಪುಟದಿಂದ ಕೈ ಬಿಡಲು ಹಾಗೂ ಬರ ಪರಿಹಾರ ಘೋಷಿಸಲು’ ಆಗ್ರಹಿಸಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಶುಕ್ರವಾರ ಮುಕ್ತಾಯಗೊಳಿಸಿ ಅವರು ಮಾತನಾಡಿದರು.
‘ಹಗರಣಗಳಿಂದಾಗಿ ಕಾಂಗ್ರೆಸ್ ಹೊಲಸು ನಾರುತ್ತಿದೆ. ಪರಿಶಿಷ್ಟರ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಲ್ಲದೇ ಕಳಂಕಿತರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವ ಮೂಲಕ ಭ್ರಷ್ಟತೆಯನ್ನು ಒಪ್ಪಿಕೊಂಡಿದೆ. ಹೀಗಾಗಿ ಬಿಜೆಪಿಯಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿತ್ತು. ಆದರೆ, ವಿಧಾನ ಮಂಡಲ ಅಧಿವೇಶನದಲ್ಲಿ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಚರ್ಚೆಯಾಗದ ಕಾರಣ ಹೋರಾಟ ಕೈಬಿಟ್ಟು ಬರದ ಕುರಿತು ಚರ್ಚಿಸಲು ರಾಜ್ಯ ನಾಯಕರು ತೀರ್ಮಾನ ಕೈಗೊಂಡಿದ್ದಾರೆ. ತನ್ನಿಮಿತ್ತ ಹೋರಾಟ ಕೈಬಿಡಲಾಗುತ್ತಿದೆ’ ಎಂದರು.
‘ಕಾಂಗ್ರೆಸ್ ಎಂದಿಗೂ ದಲಿತರ ಕಾಳಜಿ ಮೆರೆದಿಲ್ಲ. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ತೀರಿಕೊಂಡಾಗಲೂ ಅಂತ್ಯಸಂಸ್ಕಾರಕ್ಕೆ ಜಾಗ ಕೊಡಲಿಲ್ಲ. ಬಾಬಾಸಾಹೇಬರನ್ನು ಅವಮಾನ ಮಾಡಿಕೊಂಡೇ ಬಂದಿರುವ ಕಾಂಗ್ರೆಸ್ ದಲಿತರ ಬಗ್ಗೆ ಅಸಡ್ಡೆ ತೋರುತ್ತಿದೆ. ದಲಿತರ ಅನುದಾನ ನುಂಗಿ ನೀರು ಕುಡಿಯುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ದಲಿತರ ಹಣ ಬಳಸಿಕೊಂಡಿದ್ದಲ್ಲದೇ ವಾಲ್ಮೀಕಿ ನಿಗಮದ ಅನುದಾನ ದುರ್ಬಳಕೆ ಮಾಡಿಕೊಂಡು ಆ ಸಮುದಾಯಕ್ಕೆ ಅನ್ಯಾಯ ಮಾಡಿದೆ’ ಎಂದರು.
‘ರಾಜ್ಯದಲ್ಲಿ ಸಕಾಲಕ್ಕೆ ಮಳೆಯಾಗದ ಹಿನ್ನೆಲೆ ಬೆಳೆ ಬರಲಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಜನ-ಜಾನುವಾರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿವೆ. ಹೀಗಾಗಿ ಕೂಡಲೇ ಪರಿಹಾರ ಘೋಷಿಸಬೇಕು. ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರತ್ತ ಕೈ ಬೀಸುವುದನ್ನು ಬಿಡಬೇಕು. ಮೋದಿ ಪುಕ್ಸಟ್ಟೆ ಬಿದ್ದಿಲ್ಲ; ಎಲ್ಲದಕ್ಕೂ ಮೋದಿಯೇ ಪರಿಹಾರ ಕೊಡಬೇಕೆಂದಾದರೆ ರಾಜ್ಯ ಸರ್ಕಾರಗಳು ಇರುವುದಾದರೂ ಏತಕ್ಕೆ?’ ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ‘ರಾಜ್ಯ ಸರ್ಕಾರ ಪರಿಶಿಷ್ಟ ಸಮುದಾಯಕ್ಕೆ ಘೋರ ಅನ್ಯಾಯ ಮಾಡಿದೆ. ಅನುದಾನ ದುರ್ಬಳಕೆ ಮಾಡಿಕೊಂಡಿದೆಯಲ್ಲದೇ ಕಳಂಕಿತರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವ ಮೂಲಕ ಭ್ರಷ್ಟಾಚಾರ ಒಪ್ಪಿಕೊಂಡಿದೆ’ ಎಂದು ಹರಿಹಾಯ್ದರು.
ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ರವಿ ವಗ್ಗೆ ಮಾತನಾಡಿ, ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಮಾಡಿರುವ ಅನ್ಯಾಯವನ್ನು ಸರಿಪಡಿಸಬೇಕು. ಪರಿಶಿಷ್ಟ ಪಂಗಡದ ತಳವಾರ, ವಾಲ್ಮೀಕಿ, ಬೇಡ ಸಮುದಾಯಗಳಾದಿಯಾಗಿ ಅನೇಕ ಒಳಪಂಗಡಗಳು ಬಡತನದ ಬೇಗುದಿಯಲ್ಲಿ ಬಳಲುತ್ತಿವೆ. ಅವುಗಳ ಅಭ್ಯುದಯಕ್ಕೆ ಮೀಸಲಿಟ್ಟ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವುದಲ್ಲೇ ಕಳಂಕಿತ ಶಾಸಕ ನಾಗೇಂದ್ರ ಅವರಿಗೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಮತ್ತೊಂದು ತಪ್ಪು ಮಾಡಿದೆ. ಕೂಡಲೇ ನಾಗೇಂದ್ರ ಅವರನ್ನು ಸಂಪುಟದಿಂದ ಕೈ ಬಿಡಬೇಕಲ್ಲದೇ ಪರಿಶಿಷ್ಟರ ಕಲ್ಯಾಣಕ್ಕಾಗಿ ರೂಪುಗೊಂಡ ಯೋಜನೆಗಳ ಅನುಷ್ಟಾನಕ್ಕೆ ಮುಂದಾಗಬೇಕು ಎಂದರು.
ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ,
ಉಮೇಶ ಕಾರಜೋಳ, ಉಮೇಶ ಕೋಳಕೂರ, ಭೀಮಾಶಂಕರ ಹದನೂರ, ಸಂಜೀವ ಐಹೊಳೆ, ವಿವೇಕಾನಂದ ಡಬ್ಬಿ, ಈರಣ್ಣ ರಾವೂರ, ವಿಜಯ ಜೋಷಿ ಮತ್ತಿತರರಿದ್ದರು.