ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಮುಖಂಡ ಚಂದ್ರಶೇಖರ ಕವಟಗಿ ಸುದ್ದಿಗೋಷ್ಠಿ ನಡೆಸಿದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಾಲರಾಜ್ ರೆಡ್ಡಿ, ಮಲ್ಲು ಕಲಾದಗಿ ಮತ್ತಿತರರಿದ್ದಾರೆ.
- ಕಾಂಗ್ರೆಸ್ ರೈತ ವಿರೋಧಿ ನೀತಿಗೆ ಖಂಡನೆ
- ಡಿ.4 ರಂದು ಬಿಜೆಪಿಯಿಂದ ಪ್ರತಿಭಟನೆ
- ಟ್ಯಾಕ್ಟರ್‌ಗಳ ಬೃಹತ್ ಪ್ರತಿಭಟನಾ ಜಾಥಾ
ವಿಜಯಪುರ: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಡಿ. 4 ರಂದು ಬಿಜೆಪಿ ನೇತೃತ್ವದಲ್ಲಿ ರೈತರಿಂದ ಟ್ರಾೃಕ್ಟರ್‌ಗಳ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಯಲಿದೆ ಎಂದು ಬಿಜೆಪಿ ಮುಖಂಡ ಹಾಗೂ ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ ತಿಳಿಸಿದರು.
ಅಂದು ಬೆಳಗ್ಗೆ 10ಕ್ಕೆ ನಗರ ಹೊರವಲಯದ ಬೆಂಗಳೂರು ಹೆದ್ದಾರಿಯಲ್ಲಿರುವ ಟೋಲ್‌ಗೇಟ್ ಬಳಿಯಿಂದ ಟ್ರಾೃಕ್ಟರ್ ರ‌್ಯಾಲಿ ಆರಂಭಗೊಳ್ಳಲಿದೆ. ರಿಂಗ್ ರಸ್ತೆ, ಜಮಖಂಡಿ ರಸ್ತೆ ಮಾರ್ಗವಾಗಿ ಬಬಲೇಶ್ವರ ನಾಕಾದಿಂದ ಛತ್ರಪತಿ ಶಿವಾಜಿ ವೃತ್ತ ತಲುಪಿ ಅಲ್ಲಿಂದ ನಗರದಲ್ಲಿ ರ‌್ಯಾಲಿ ಸಂಚರಿಸಲಿದೆ. ಮಹಾತ್ಮ ಗಾಂಧಿ, ಬಸವೇಶ್ವರ ವೃತ್ತದ ಮಾರ್ಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ತಲುಪಿ ಸಮಾವೇಶವಾಗಿ ಮಾರ್ಪಾಡುಗೊಳ್ಳಲಿದೆ. ಗಂಗಾವತಿ ಶಾಸಕ ಜನಾರ್ದನ್ ರೆಡ್ಡಿ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಸೇರಿದಂತೆ ಅನೇಕ ಹಿರಿಯ ನಾಯಕರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ದೇಶದ ಬೆನ್ನೆಲುಬು ಎನ್ನಿಸಿಕೊಂಡ ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ. ಅತೀವೃಷ್ಠಿ ಹಾಗೂ ಪ್ರವಾಹದಿಂದಾಗಿ ಉಂಟಾದ ಬೆಳೆ ಹಾನಿಗೆ ಈವರೆಗೆ ಸಮರ್ಪಕವಾಗಿ ಪರಿಹಾರ ಹಣ ಬಂದಿಲ್ಲ. ರೈತರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹ ಧನ ಕೂಡ ಕೈಸೇರಿಲ್ಲ. ಅಂದಾಜು 700 ಕೋಟಿ ರೂ.ಗಳಷ್ಟು ಪ್ರೋತ್ಸಾಹ ಧನ ಬರಬೇಕಿದೆ ಎಂದರು.
ಎನ್‌ಡಿಆರ್‌ಎಫ್‌ಗಿಂತಲೂ ಅಧಿಕ ಪರಿಹಾರವನ್ನು ಈ ಹಿಂದೆ ಬಿಜೆಪಿ ನೇತೃತ್ವದ ಯಡಿಯೂರಪ್ಪ ಸರ್ಕಾರ ನೀಡಿತ್ತು. ಆದರೆ ಈ ಸರ್ಕಾರ ಈ ವಿಷಯದಲ್ಲಿ ಬೇಜವಾಬ್ದಾರಿ ತೋರಿದೆ. ಇನ್ನೊಂದೆಡೆ ರೈತ ಖರೀದಿ ಕೇಂದ್ರಗಳಲ್ಲಿ ಮೆಕ್ಕೆಜೋಳ ಮೊದಲಾದವುಗಳನ್ನು 5 ಕ್ವಿಂಟಾಲ್ ಖರೀದಿಗೆ ಸೀಮಿತಗೊಳಿಸಿರುವುದು ಎಷ್ಟು ಸರಿ? ಉಳಿದ ಬೆಳೆಯನ್ನು ರೈತ ಎಲ್ಲಿ ಮಾರಾಟ ಮಾಡಬೇಕು? ಎಂದು ಪ್ರಶ್ನಿಸಿದರು.
ಕಳಪೆ ಗುಣಮಟ್ಟದ ರಸಗೊಬ್ಬರ ರಾಜಾರೋಷವಾಗಿ ಮಾರಾಟವಾಗುತ್ತಿದೆ, ಆ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡುವ ಕೆಲಸ ಮಾಡಿಲ್ಲ, ಕಳಪೆ ಗುಣಮಟ್ಟದ ಪೂರೈಕೆ ಮಾಡುವ ಕಂಪನಿಗಳ ಹೆಸರು ಸರ್ಕಾರದ ಬಳಿ ಇದೆ, ಆದರೆ ಅವುಗಳನ್ನು ಬ್ಯಾನ್ ಮಾಡುವ ಕನಿಷ್ಠ ಕ್ರಮವನ್ನು ಸಹ ಸರ್ಕಾರ ಕೈಗೊಂಡಿಲ್ಲ ಎಂದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಾಲರಾಜ್ ರೆಡ್ಡಿ ಮಾತನಾಡಿದರು. ಮುಖಂಡರಾದ ಮಲ್ಲು ಕಲಾದಗಿ, ಭರತ ಕುಲಕರ್ಣಿ, ವಿಜಯ ಜೋಶಿ ಮತ್ತಿತರರಿದ್ದರು.